ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಧಾರಣೆ ಏರಿಳಿತದಲ್ಲೂ ‘ಮತ ಫಸಲು’

ಲೋಕಸಭೆ ಚುನಾವಣೆಯಲ್ಲಿ ತೆಂಗು, ಅಡಿಕೆ, ಕಾಪಿ ಬೆಳೆಗಾರರ ಪ್ರಭಾವ
Published 26 ಮಾರ್ಚ್ 2024, 20:47 IST
Last Updated 26 ಮಾರ್ಚ್ 2024, 20:47 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ವಲಯದ ಸಮಸ್ಯೆಗಳು ಪ್ರತಿ ಚುನಾವಣೆಯಲ್ಲೂ ಸದ್ದು ಮಾಡುತ್ತಲೇ ಬಂದಿವೆ. ರಾಜ್ಯದ ಪ್ರಮುಖ ಬೆಳೆಗಳಾದ ಅಡಿಕೆ, ತೆಂಗು, ಕಾಫಿ ಬೆಳೆಗಾರರ ಸಮಸ್ಯೆಗಳು ರಾಜಕೀಯ ಪಕ್ಷಗಳಿಗೆ ಅಸ್ತ್ರಗಳಾಗಿ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಿವೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ‘ಬೆಳೆ ರಾಜಕಾರಣ’ ಮುನ್ನೆಲೆಗೆ ಬಂದಿದೆ.

ಧಾರಣೆಯ ಏರಿಕೆ ಆಳುವ ಪಕ್ಷಗಳಿಗೆ ವರವಾದರೆ, ಇಳಿಕೆ ವಿರೋಧ ಪಕ್ಷಗಳಿಗೆ ಅಸ್ತ್ರವಾಗುತ್ತದೆ. ಧಾರಣೆ ಏರಿಳಿಕೆಯ ಹಾವು–ಏಣಿ ಆಟಕ್ಕೆ ಹಲವು ಅಭ್ಯರ್ಥಿಗಳು ಸೋತು ಮನೆ ಸೇರಿದರೆ, ಕೆಲವರು ಭರವಸೆ ಕೊಟ್ಟುಕೊಂಡೇ ಅನಾಯಾಸವಾಗಿ ‘ಲೋಕ’ ಪ್ರವೇಶ ಮಾಡಿದ್ದಾರೆ.

ಪಶ್ಚಿಮಘಟ್ಟ ವ್ಯಾಪ್ತಿಯ ಮಲೆನಾಡು, ಅರೆ ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ, ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು ಪ್ರತಿ ಚುನಾವಣೆಯಲ್ಲೂ ಬಹು ಚರ್ಚಿತ ವಿಷಯ. ಹಾಗೆಯೇ, ಹಳೆ ಮೈಸೂರು ಪ್ರಾಂತ್ಯದ ಜಿಲ್ಲೆಗಳಲ್ಲಿ ತೆಂಗು, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಕಾಫಿ ಸಮಸ್ಯೆಗಳು ರಾಜಕೀಯ ಪಕ್ಷಗಳ ಚುನಾವಣಾ ಸರಕುಗಳಾಗಿವೆ. 

ಮಲೆನಾಡಿನ ಸಾಂಪ್ರದಾಯಿಕ ಬೆಳೆ ಅಡಿಕೆಗೆ ಚಿನ್ನದ ಬೆಲೆ ದೊರೆತ ನಂತರ ಬೆಳೆ ಕ್ಷೇತ್ರ ಬಯಲು ಸೀಮೆಗೂ ಹಬ್ಬಿದೆ. ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಬೆಳೆ ಕ್ಷೇತ್ರ ಹೆಚ್ಚಳವಾದಂತೆ ಬೆಳೆಗಾರರ ಸಂಖ್ಯೆಯಲ್ಲೂ ಭಾರಿ ಏರಿಕೆಯಾಗಿದೆ. ಹಾಗಾಗಿಯೇ, ಅಡಿಕೆ ಬೆಳೆಯ ಸಮಸ್ಯೆಗಳು ರಾಜಕೀಯ ಪಕ್ಷಗಳಿಗೆ ‘ಮತಬೇಟೆ’ಯ ಪ್ರಮುಖ ವಿಷಯಗಳಾಗಿವೆ. ಅಡಿಕೆ ಬೆಲೆ ಏರಿಕೆಯ ಲಾಭವನ್ನು ತಮ್ಮ ಸಾಧನೆಯ ಕಿರೀಟವೆಂಬಂತೆ ಆಡಳಿತದಲ್ಲಿರುವ ರಾಜಕೀಯ ಪಕ್ಷಗಳು ಬಿಂಬಿಸಿಕೊಂಡರೆ, ಬೆಲೆ ಕುಸಿತವನ್ನು ಆಡಳಿತ ವಿರೋಧಿ ನೀತಿಯಾಗಿ ಪ್ರತಿಪಾದಿಸಿ, ಬೆಳೆಗಾರರ ಆಕ್ರೋಶವನ್ನು ಮತಗಳಾಗಿ ಪರಿವರ್ತಿಸಿಕೊಳ್ಳುವಲ್ಲಿ ವಿರೋಧ ಪಕ್ಷಗಳು ನಿರಂತರ ಪ್ರಯತ್ನ ನಡೆಸುತ್ತಲೇ ಇವೆ. ಅಧಿಕಾರದಲ್ಲಿದ್ದಾಗ ಆಡುವ ಮಾತೇ ಬೇರೆ, ವಿರೋಧ ಪಕ್ಷದಲ್ಲಿದ್ದಾಗ ಹೋರಾಡುವ ಕಸುವೇ ಬೇರೆ. ಅಧಿಕಾರದ ‘ಸ್ಥಿತಿ’ ಬದಲಾದಂತೆ ಮಾತು ವರಸೆಗಳೂ ಬದಲಾಗುತ್ತಲೇ ಬಂದಿವೆ.

‘ಅಡಿಕೆ ಹಾನಿಕರ, ಮನುಷ್ಯರು ಸೇವಿಸಿದರೆ ಕ್ಯಾನ್ಸರ್ ಬರುತ್ತದೆ’ ಎಂಬ ವರದಿಯ ಆಧಾರದಲ್ಲಿ ಯುಪಿಎ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಹ ಸಲ್ಲಿಸಿತ್ತು. ಇದು ಅಡಿಕೆ ರಾಜಕಾರಣಕ್ಕೆ ನಾಂದಿಯಾಡಿತ್ತು. 2009, 2014ರ ಲೋಕಸಭಾ ಚುನಾವಣೆಯಲ್ಲಿ ಇದೇ ವಿಷಯ ಮುಂದಿಟ್ಟುಕೊಂಡು ಬಿಜೆಪಿಯು ಕಾಂಗ್ರೆಸ್‌ ವಿರುದ್ಧ ನಿರಂತರ ವಾಗ್ದಾಳಿ ನಡೆಸಿತ್ತು.  ಅಡಿಕೆ ಬೆಳೆಯುವ ಕ್ಷೇತ್ರಗಳಲ್ಲಿ ತನ್ನ ಮತಬ್ಯಾಂಕ್‌ ವೃದ್ಧಿಸಿಕೊಂಡಿತು.

ಬಿಜೆಪಿ 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಕೋರ್ಟ್‌ಗೆ ಹಿಂದೆ ಸಲ್ಲಿಸಿದ್ದ ‘ಹಾನಿಕಾರಕ’ ಎಂಬ ಪ್ರಮಾಣಪತ್ರವನ್ಬೇ ಮತ್ತೆ ಸಲ್ಲಿಸಿತ್ತು. ಇದು ಕಾಂಗ್ರೆಸ್, ಜೆಡಿಎಸ್‌ ಸೇರಿದಂತೆ ಇತರೆ ಪಕ್ಷಗಳಿಗೆ ಟೀಕಾಸ್ತ್ರವಾಯಿತು. ನಾಲ್ಕು ವರ್ಷಗಳಿಂದ ₹50 ಸಾವಿರದ ಆಸುಪಾಸು ಇದ್ದು ಅಡಿಕೆ ಧಾರಣೆ ಎರಡು ತಿಂಗಳಿನಿಂದ ಕುಸಿದಿದ್ದು, ಇದು ಕೇಂದ್ರದ ವೈಫಲ್ಯವೆಂದು ಕಾಂಗ್ರೆಸ್‌ ಬಿಂಬಿಸುತ್ತಿದೆ.

ಚುನಾವಣಾ ಹೊಸ್ತಿಲಲ್ಲಿ ‘ಕೊಬ್ಬರಿ’ ಅಬ್ಬರ:

ತೆಂಗಿನ ಬೆಳೆ ಹಾಗೂ ಬೆಲೆ ಹಳೇ ಮೈಸೂರು ಪ್ರಾಂತ್ಯದ ಕ್ಷೇತ್ರಗಳ ರಾಜಕೀಯದ ಮೇಲೆ ಪರಿಣಾಮ ಬೀರುತ್ತಲೇ ಬಂದಿವೆ. ಇತ್ತೀಚಿನ ದಿನಗಳಲ್ಲಿ ಕೊಬ್ಬರಿ ಬೆಲೆ ಕುಸಿದು ಪಾತಾಳ ಮುಟ್ಟಿದ್ದರೂ, ಈ ವಿಷಯ ಅಷ್ಟೊಂದು ತೀವ್ರತೆ ಪಡೆದುಕೊಂಡಿರಲಿಲ್ಲ. ಆದರೆ, ಚುನಾವಣಾ ವರ್ಷದ ಆರಂಭದಲ್ಲಿ ರಾಜ್ಯ ಸರ್ಕಾರ ಬೆಂಬಲ ಬೆಲೆ ಅಡಿ ಖರೀದಿಸಲು ಹೆಚ್ಚಿನ ಆಸಕ್ತಿ ತೋರಿದೆ. ಉಂಡೆ ಕೊಬ್ಬರಿ ಖರೀದಿ ಜತೆಗೆ, ಮಿಲ್ಲಿಂಗ್ ಕೊಬ್ಬರಿಯನ್ನೂ ಬೆಂಬಲ ಬೆಲೆಯಲ್ಲಿ ಖರೀದಿಸುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಇದೇ ಮೊದಲ ಬಾರಿಗೆ ಮಿಲ್ಲಿಂಗ್ ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಸಮ್ಮತಿಸಿದೆ. ಇದೇ ವಿಷಯಗಳನ್ನು ಪ್ರಸ್ತಾಪಿಸಿ ರಾಜ್ಯದ ಕಾಂಗ್ರೆಸ್‌, ಕೇಂದ್ರದ ಬಿಜೆಪಿ ‘ಮತ ಫಸಲು’ ತೆಗೆಯಲು ಮುಂದಾಗಿವೆ. 

ಮತ್ತೆ ಮುನ್ನೆಲೆಗೆ ಬಂದ ‘ಸರ್ಫೇಸಿ’ ಕಾಯ್ದೆ 

ಹಣಕಾಸು ಆಸ್ತಿಗಳ ಭದ್ರತೆ ಮತ್ತು ಪುನರ್‌ ನಿರ್ಮಾಣ (ಸರ್ಫೇಸಿ) ಕಾಯ್ದೆಯ ಸೆಕ್ಷನ್ 31(ಐ)ಗೆ ತಿದ್ದುಪಡಿ ತಂದು ಕಾಫಿ, ಏಲಕ್ಕಿ, ಮೆಣಸು, ರಬ್ಬರ್ ಮತ್ತು ಚಹಾ ರೀತಿಯ ಬೆಳೆ ಬೆಳೆಯುವ ತೋಟಗಳನ್ನು (ಎಸ್ಟೇಟ್ಸ್‌) ಕೃಷಿ ಭೂಮಿ ಎಂದು ಪರಿಗಣಿಸಬೇಕು ಎನ್ನುವ ದಶಕಗಳ ಬೇಡಿಕೆ ಈ ಬಾರಿಯೂ ಮತ್ತೆ ಮುನ್ನೆಲೆಗೆ ಬಂದಿದೆ. 

ವಿಪರೀತ ಮಳೆ, ಇಲ್ಲವೇ ಮಳೆ ಕೊರತೆ, ಹವಾಮಾನ ವೈಪರೀತ್ಯ ಹಾಗೂ ಕಾರ್ಮಿಕರ ಕೊರತೆಯ ಸಂಕಷ್ಟ ಎದುರಿಸುತ್ತಿರುವ ಕಾಫಿ ಬೆಳೆಗಾರರು ಬೆಳೆ ನಷ್ಟ ಅಥವಾ ದರ ಇಳಿಕೆಯ ಸಂಕಷ್ಟವನ್ನು ಸದಾ ಅನುಭವಿಸುತ್ತಾ ಬಂದಿದ್ದಾರೆ. ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಭಾಗದ ಕ್ಷೇತ್ರಗಳಲ್ಲಿ ಕಾಫಿ ಬೆಳೆಗಾರರ ಸಮಸ್ಯೆ ಪ್ರತಿ ಬಾರಿಯೂ ಆಡಳಿತ ಪಕ್ಷಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಸಾವಿರಾರು ಎಕರೆ ಒತ್ತುವರಿ ತೆರವಿಗೆ ಸರ್ಕಾರಗಳು ಕ್ರಮ ಕೈಗೊಳ್ಳಲು ಮುಂದಾದಾಗಲೆಲ್ಲ ರಾಜಕೀಯ ಕಾರಣಗಳಿಗಾಗಿ ಹಿಂದೇಟು ಹಾಕಲಾಗುತ್ತಿತ್ತು. ಈಚೆಗೆ 25 ಎಕರೆ ಒಳಗಿನ ಒತ್ತುವರಿ ತೋಟಗಳನ್ನು ತೆರವುಗೊಳಿಸುವ ಬದಲು 30 ವರ್ಷಗಳ ಗುತ್ತಿಗೆಗೆ ನೀಡುವ ಸರ್ಕಾರದ ಆದೇಶ ಬೆಳೆಗಾರರಲ್ಲಿ ಕೊಂಚ ನೆಮ್ಮದಿ ತಂದಿದೆ. 

ತೆಂಗು ಬೆಳೆಗಾರರ ಸಿಟ್ಟಿಗೆ ಸಚಿವರೇ ಸೋತಿದ್ದರು

ತೆಂಗಿನ ಬೆಳೆ ಹಾಗೂ ಬೆಲೆ ಹಳೇ ಮೈಸೂರು ಭಾಗದ ಕ್ಷೇತ್ರಗಳ ರಾಜಕೀಯದ ಮೇಲೆ ಪರಿಣಾಮ ಬೀರುತ್ತಲೇ ಬಂದಿದೆ. ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಟಿ.ಬಿ.ಜಯಚಂದ್ರ ಕೃಷಿ ಸಚಿವರಾಗಿದ್ದರು. ಆಗ ತೆಂಗು ಬೆಳೆಗೆ ನುಸಿ ಪೀಡೆ ಇನ್ನಿಲ್ಲದಂತೆ ಬಾಧಿಸಿತ್ತು. ರೋಗ ನಿಯಂತ್ರಿಸುವ ಸಲುವಾಗಿ ಮರದ ಕಾಂಡಕ್ಕೆ ಔಷಧ ಕೊಡಿಸಿದ್ದರು. ಇದರಿಂದ ನುಸಿಪೀಡೆ ಕಡಿಮೆಯಾಗುವ ಬದಲು ಮರಗಳೇ ಒಣಗಿ ಹೋಗಿದ್ದವು. ಸರಿಯಾದ ರೀತಿಯಲ್ಲಿ ಪ್ರಯೋಗ ಮಾಡದೆ ಔಷಧ ಕೊಡಿಸಿ ಮರ ಸಾಯುವಂತೆ ಮಾಡಿದರು ಎಂದು ತೆಂಗು ಬೆಳೆಗಾರರು ಸಿಟ್ಟಾದರು. ಇದರ ಪರಿಣಾಮವಾಗಿ 2004ರಲ್ಲಿ ನಡೆದ ಚುನಾವಣೆಯಲ್ಲಿ ಜಯಚಂದ್ರ ಸೋಲುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT