ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ

ಲೋಕಸಭೆ ಚುನಾವಣೆ ಫಲಿತಾಂಶ 2024
Published 4 ಜೂನ್ 2024, 13:56 IST
Last Updated 4 ಜೂನ್ 2024, 13:56 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. 15-20 ಸ್ಥಾನ ನಮ್ಮ ನಿರೀಕ್ಷೆಯಾಗಿತ್ತು. ಆದರೆ, 2019ರಲ್ಲಿ ಕೇವಲ ಒಂದು ಸ್ಥಾನದಲ್ಲಿ ಗೆದ್ದಿದ್ದೆವು. ಈಗ 9ಕ್ಕೆ ಏರಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ಬಾರಿ ನಮಗೆ ಶೇ 45.34, ಬಿಜೆಪಿ ಶೇ 46.04 ರಷ್ಟು ಮತ ಪಡೆದಿದೆ‌. 2019ರಲ್ಲಿ ಬಿಜೆಪಿ ಶೇ 51.38 ರಷ್ಟು ಮತ ಗಳಿಸಿತ್ತು. ನಮಗೆ ಶೇ 31.88ರಷ್ಟು ಮಾತ್ರ ಮತ ಬಂದಿದ್ದವು. 2019ಕ್ಕೆ ಹೋಲಿಸಿದರೆ ನಮ್ಮ ಮತ ಪ್ರಮಾಣ ಹೆಚ್ಚಾಗಿದೆ. ಬಿಜೆಪಿ ಮತ ಪ್ರಮಾಣ ಶೇ 5ರಷ್ಟು ಕುಸಿದಿದೆ’ ಎಂದರು.

‘ರಾಜ್ಯದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮ ಏನಾಗಿದೆ ಎನ್ನುವ ಬಗ್ಗೆ ವಿಶ್ಲೇಷಣೆ ನಡೆಯಬೇಕಿದೆ’ ಎಂದೂ ಹೇಳಿದರು.

‘ಜೆಡಿಎಸ್ ಜೊತೆ ಹೊಂದಾಣಿಕೆ ಬಳಿಕವೂ ರಾಜ್ಯದಲ್ಲಿ ಬಿಜೆಪಿಯ ಮತ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜೆಡಿಎಸ್ ಕೂಡ 2019ಕ್ಕಿಂತ ಕಡಿಮೆ ಪ್ರಮಾಣದ ಮತ ಪಡೆದಿದೆ. ಆದರೂ ನಾವು ನಿರೀಕ್ಷಿತ ಪ್ರಮಾಣದಲ್ಲಿ ಸೀಟು ಗೆದ್ದಿಲ್ಲ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮತ ಪ್ರಮಾಣ ಹೆಚ್ಚಾಗಿದೆ. ಮೋದಿ ಮುಖ ನೋಡಿಯೂ ಬಿಜೆಪಿಗೆ ಬಹುಮತ ಬಂದಿಲ್ಲ. ಬಿಜೆಪಿ ಕೇಂದ್ರದಲ್ಲಿ ಸರಳ ಬಹುಮತ ಪಡೆಯುವಲ್ಲೂ ಸೋತಿದೆ. ದೇಶದಲ್ಲಿ ಎಲ್ಲೂ ಮೋದಿಯವರ ಅಲೆ ಕಾಣಲಿಲ್ಲ. ಹೀಗಾಗಿ ಈ ಫಲಿತಾಂಶ ಮೋದಿ ಜನಪ್ರಿಯತೆ ನೆಲಕಚ್ಚಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಸರ್ಕಾರ ಯಾರು ಮಾಡ್ತಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ’ ಎಂದರು.

‘ಮೋದಿಯವರು ಚುನಾವಣೆಯ ಕೊನೆ ಕೊನೆಗೆ ಧರ್ಮ, ದೇವರ ಹೆಸರಲ್ಲಿ ಮತ ಕೇಳಿ ನೇರವಾಗಿ ಇತರೆ ಧರ್ಮೀಯರ ವಿರುದ್ಧ ಭಾಷಣ ಮಾಡಿದರು, ಹಿಂದುಳಿದವರ ಮೀಸಲಾತಿ ಕಾಂಗ್ರೆಸ್ ಕಿತ್ತುಕೊಳ್ಳುತ್ತದೆ ಎಂದು ಸುಳ್ಳು ಹೇಳಿಕೊಂಡು ತಿರುಗಿದರೂ ಮೋದಿಯವರಿಗೆ ಬಹುಮತ ಬರಲಿಲ್ಲ. ಎನ್‌ಡಿಎ ಕಳೆದ ಬಾರಿಗಿಂತ 64 ಸ್ಥಾನ ಕಳೆದುಕೊಂಡಿದೆ. ಇದು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ಸೋಲು’ ಎಂದರು.

‘ಈ ಸೋಲಿನ ಕಾರಣದಿಂದ ಮೋದಿಯವರಿಗೆ ಮತ್ತೆ ಪ್ರಧಾನಿ ಆಗುವ ನೈತಿಕ ಹಕ್ಕಿಲ್ಲ. ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕಿದರು. ಇಡಿ, ಐಟಿ, ಸಿಬಿಐ ಹೆಸರಲ್ಲಿ ಹೆದರಿಸಿದರೂ ದೇಶದ ಜನ ಬಿಜೆಪಿಗೆ ಬಹುಮತ ಕೊಡಲಿಲ್ಲ. ರಾಮನ ಹೆಸರಲ್ಲಿ, ರಾಮ ಮಂದಿರದ ಹೆಸರಲ್ಲಿ ಅಯೋಧ್ಯೆಯಲ್ಲೂ ಬಿಜೆಪಿ ಸೋತಿದೆ. ಇದು ಬಿಜೆಪಿಯ ಸೋಲು’ ಎಂದು ವಿಶ್ಲೇಷಿಸಿದರು.

ರಾಹುಲ್ ಗಾಂಧಿಯನ್ನು ದೇಶ ಒಪ್ಪಿಕೊಂಡಿದೆ

‘ರಾಹುಲ್ ಗಾಂಧಿಯವರ ಎರಡು ಯಾತ್ರೆಗಳು ಫಲ ನೀಡಿವೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರನ್ನು ದೇಶದ ಜನತೆ ಬಹಳ ದೊಡ್ಡ ಮಟ್ಟದಲ್ಲಿ ಒಪ್ಪಿಕೊಂಡಿದ್ದಾರೆ. ಎರಡೂ ಕ್ಷೇತ್ರಗಳಲ್ಲೂ ರಾಹುಲ್ ಗಾಂಧಿ ಭರ್ಜರಿ ಮತಗಳಿಂದ ಗೆದ್ದಿದ್ದಾರೆ. ಕೈಯಲ್ಲಿ ಸಂವಿಧಾನ ಹಿಡಿದೇ ರಾಹುಲ್ ಗಾಂಧಿಯವರು ಇಡೀ ದೇಶದಲ್ಲಿ ಚುನಾವಣಾ ಪ್ರಚಾರ ಮಾಡಿದರು. ದೇಶದ ಜನ ಸಂವಿಧಾನದ ಉಳಿವಿಗೆ, ಪ್ರಜಾಪ್ರಭುತ್ವ ಉಳಿವಿಗಾಗಿ ರಾಹುಲ್ ಗಾಂಧಿಯವರ ಕೈ ಹಿಡಿದಿದ್ದಾರೆ’ ಎಂದರು.

‘ಇಡೀ ದೇಶದಲ್ಲಿ ಕಾಂಗ್ರೆಸ್ ಮತ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿದ್ದರೂ ಬಿಜೆಪಿ ಮತ ಪ್ರಮಾಣ ಕುಸಿದಿದೆ. ಕಾಂಗ್ರೆಸ್ ಕಡಿಮೆ ಸೀಟು ಗೆದ್ದರೂ ಮತ ಪ್ರಮಾಣ ಹೆಚ್ಚಾಗಿದೆ’ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದ ಮುಖ್ಯಮಂತ್ರಿ, ‘ಬಿಜೆಪಿ ಜನಪ್ರಿಯತೆ ಕುಸಿದಿದೆ‌. ಇಡೀ ದೇಶದಲ್ಲಿ, ರಾಜ್ಯದಲ್ಲಿ 2019ಕ್ಕಿಂತ ಬಿಜೆಪಿ ಪ್ರಭಾವ ವಿಪರೀತ ಕುಸಿದಿದೆ. ಕೇಂದ್ರದಲ್ಲಿ ಯಾರು ಸರ್ಕಾರ ರಚಿಸುತ್ತಾರೆ ಎನ್ನುವುದು ಅನಿಶ್ಚಿತವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT