ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಪ್ರತಾಪ ಸಿಂಹಗೆ ಈ ಸಾರಿ BJP ಟಿಕೆಟ್ ಕೈತಪ್ಪಲು ಕಾರಣವೇನು?

ಸತತ ಎರಡು ಬಾರಿಗೆ ಸಂಸದರಾಗಿದ್ದ ಪ್ರತಾಪ ಸಿಂಹ ಅವರಿಗೆ ಬಿಜೆಪಿ ಟಿಕೆಟ್‌ ಕೈತಪ್ಪಲು ಹಲವು ವಿಷಯಗಳು ಕಾರಣವಾಗಿವೆ
Published 13 ಮಾರ್ಚ್ 2024, 16:01 IST
Last Updated 13 ಮಾರ್ಚ್ 2024, 16:01 IST
ಅಕ್ಷರ ಗಾತ್ರ

ಮೈಸೂರು: 2014ರಲ್ಲಿ ‘ಅಚ್ಚರಿಯ ಅಭ್ಯರ್ಥಿ’ಯಾಗಿಯೇ ರಾಜಕಾರಣಕ್ಕೆ ಬಂದು, ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಿಂದ ಸತತ ಎರಡು ಬಾರಿಗೆ ಸಂಸದರಾಗಿದ್ದ ಪ್ರತಾಪ ಸಿಂಹ ಅವರಿಗೆ ಬಿಜೆಪಿ ಟಿಕೆಟ್‌ ಕೈತಪ್ಪಲು ಹಲವು ವಿಷಯಗಳು ಕಾರಣವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಸಂಸತ್ತಿನಲ್ಲಿ ಭದ್ರತಾ ಲೋಪ ಪ್ರಕರಣದ ಆರೋಪಿ ಮೈಸೂರಿನ ಡಿ.ಮನೋರಂಜನ್ ಅವರಿಗೆ ಪಾಸ್‌ಗೆ ಶಿಫಾರಸು ಮಾಡಿದ್ದ ಪ್ರಕರಣ ದೇಶದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಕೇಂದ್ರ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರವನ್ನೂ ಉಂಟು ಮಾಡಿತ್ತು. ಈ ವಿಷಯವನ್ನು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಮುಂದಿಟ್ಟುಕೊಂಡು ದೊಡ್ಡ ಮಟ್ಟದಲ್ಲಿ ವಾಗ್ದಾಳಿ ನಡೆಸಬಹುದು; ಇದರಿಂದ ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲಿ ಮುಜುಗರ ಉಂಟಾಗಬಹುದು ಎಂಬ ಕಾರಣದಿಂದ ಪ್ರತಾಪ ಅವರಿಗೆ ಟಿಕೆಟ್‌ ತಪ್ಪಿಸಲಾಗಿದೆ’ ಎಂದು ವಿಶ್ಲೇಷಿಸಲಾಗುತ್ತಿದೆ.

ಹಾಲಿ ಸಂಸದರ ಬಗ್ಗೆ ಸ್ಥಳೀಯ ನಾಯಕರಲ್ಲೇ ತೀವ್ರ ವಿರೋಧ ಇತ್ತು. ಮಹಿಷ ದಸರಾ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಗಳೂ ಸೇರಿದಂತೆ ಕೆಲವು ವಿವಾದಗಳಿಗೂ ಅವರು ಕಾರಣವಾಗಿದ್ದರು. ಮೈಸೂರು, ಕೊಡಗಿನಲ್ಲಿರುವ ಪಕ್ಷದ ನಾಯಕರೊಂದಿಗೆ ಸಮನ್ವಯ ಸಾಧಿಸುವಲ್ಲಿ ವಿಫಲವಾಗಿದ್ದರು.

2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ವಿ.ಸೋಮಣ್ಣ ಅವರು ಸ್ಪರ್ಧಿಸಿದ್ದ ವರುಣ ಕ್ಷೇತ್ರ ಹೊರತುಪಡಿಸಿದರೆ ಇತರ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಅಷ್ಟೇನೂ ಒತ್ತು ನೀಡಿರಲಿಲ್ಲ. ಇದು, ಪರಾಜಿತ ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಕಾರ್ಯಕರ್ತರ ಜೊತೆಗೂ ಅಷ್ಟೇನು ಉತ್ತಮ ಒಡನಾಟ ಹೊಂದಿಲ್ಲ ಎಂಬ ಮಾತುಗಳೂ ಕೇಳಿಬಂದಿದ್ದವು. ಈ ಭಾಗದಲ್ಲಿನ ಪಕ್ಷದ ನಾಯಕರಾದ ಮಾಜಿ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಅಪ್ಪಚ್ಚು ರಂಜನ್‌, ಸಿ.ಎಚ್. ವಿಜಯಶಂಕರ್‌ ಮೊದಲಾದವರೊಂದಿಗೆ ಶೀತಲಸಮರ ನಡೆಯುತ್ತಲೇ ಇತ್ತು. ಮುಖಂಡರಿಂದ ತೀವ್ರ ವಿರೋಧವಿದೆ ಎನ್ನುವ ಸಂಗತಿಯು ಹೈಕಮಾಂಡ್‌ ಮಟ್ಟಕ್ಕೆ ಹೋಗಿತ್ತು; ಅದನ್ನು ತಲುಪಿಸುವ ಕೆಲಸವನ್ನು ಪಕ್ಷದ ಮಟ್ಟದಲ್ಲೇ ಮಾಡಲಾಗಿತ್ತು.

‘ಎಲ್ಲವನ್ನೂ ನಾನೇ ಮಾಡಿದ್ದು’ ಎಂಬ ಅತಿಯಾದ ಆತ್ಮವಿಶ್ವಾಸದ ಮಾತುಗಳು ಹಾಗೂ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇದ್ದುದು ಮುಳುವಾಗಿ ಪರಿಣಮಿಸಿದೆ. ತಮ್ಮ ವರ್ಚಸ್ಸು ವೃದ್ಧಿಗೆ ನೀಡಿದಷ್ಟು ಒತ್ತನ್ನು ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಕೊಡಲಿಲ್ಲ ಎಂಬ ಅಸಮಾಧಾನವೂ ಪಕ್ಷದ ವಲಯದಲ್ಲಿತ್ತು. ಇದೂ ಕೂಡ ಅವರ ರಾಜಕೀಯ ಭವಿಷ್ಯವನ್ನು ಅತಂತ್ರಗೊಳಿಸಿದೆ.

ವಿ.ಸೋಮಣ್ಣ ಅವರೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದು ಬಿ.ಎಸ್.ಯಡಿಯೂರಪ್ಪ ಅವರ ಕೆಂಗಣ್ಣಿಗೆ ಗುರಿಯಾಗಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.

ಅವರು ತಳಮಟ್ಟದ, ಅದರಲ್ಲೂ ಗ್ರಾಮಾಂತರ ಕಾರ್ಯಕರ್ತರೊಂದಿಗೆ ಹೆಚ್ಚಿನ ಒಡನಾಟ ಹೊಂದಿರಲಿಲ್ಲ. ಇದು ನಿಷ್ಠಾವಂತ ಕಾರ್ಯಕರ್ತರು–ಸ್ಥಳೀಯ ಬಿಜೆಪಿ ಮುಖಂಡರು ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿತ್ತು. ಅವರದ್ದೇ ಪಕ್ಷದ ಮಹಾನಗರಪಾಲಿಕೆ ಸದಸ್ಯರೊಂದಿಗೂ ಉತ್ತಮ ಬಾಂಧವ್ಯ ಹೊಂದಿರಲಿಲ್ಲ. ರಾಜಕಾರಣಿಯ ಪ್ರಬುದ್ಧತೆ; ವಿನಯ ಇರಲಿಲ್ಲ ಎನ್ನುವುದು ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಪಕ್ಷದ ಮುಖಂಡರು ಹೇಳುತ್ತಾರೆ.

ಸಹೋದರ ವಿಕ್ರಂ ಸಿಂಹ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಮರ ಕಡಿದ ಪ್ರಕರಣ ವಿವಾದವಾಗಿತ್ತು. ಅವರ ತಮ್ಮನ ವಿರುದ್ಧ ಮೊಕದ್ದಮೆಯೂ ದಾಖಲಾಗಿತ್ತು; ಬಂಧನವೂ ಆಗಿತ್ತು. ಇದೂ ಕೂಡ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ.

ಮೈಸೂರು ರಾಜವಂಶಸ್ಥರ ಬಗ್ಗೆ ಈ ಭಾಗದಲ್ಲಿ ಗೌರವ ಹಾಗೂ ಪೂಜ್ಯ ಭಾವನೆ ಇದೆ. ಅವರು ನೀಡಿದ ಕೊಡುಗೆಗಳನ್ನು ಇಲ್ಲಿನ ಜನರು ಇಂದಿಗೂ ಸ್ಮರಿಸುತ್ತಾರೆ. ಈ ಭಾವನೆಯನ್ನು ರಾಜಕೀಯ ಲಾಭವನ್ನಾಗಿ ಮಾಡಿಕೊಳ್ಳುವುದು ಬಿಜೆಪಿ ನಾಯಕರ ಯೋಜನೆಯ ಭಾಗ. ಇದು ಪ್ರತಾಪಗೆ ಮುಳುವಾಗಿ ಪರಿಣಮಿಸಿದೆ ಎನ್ನುವ ವಿಶ್ಲೇಷಣೆಯನ್ನು ಮಾಡಲಾಗುತ್ತಿದೆ.

ಬಿಜೆಪಿಯ ಹೊಸ ಪ್ರಯೋಗದಿಂದ ಮೈಸೂರು–ಕೊಡಗು ಕ್ಷೇತ್ರದೊಂದಿಗೆ ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲೂ ಪಕ್ಷಕ್ಕೆ ಅನುಕೂಲ ಆಗಬಹುದು ಎನ್ನುವುದು ಬಿಜೆಪಿ ವರಿಷ್ಠರ ಲೆಕ್ಕಾಚಾರವಾಗಿದೆ. ಈ ವಿಷಯವನ್ನು ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಹೈಕಮಾಂಡ್‌ ಮಟ್ಟದಲ್ಲಿ ಮನವರಿಕೆ ಮಾಡಿಕೊಟ್ಟಿದ್ದರು.

ರಾಜವಂಶಸ್ಥ ಸ್ಪರ್ಧಿಸಿದರೆ ಹಳೆಯ ಮೈಸೂರು ಭಾಗದಲ್ಲಿ ಸಂಚಲನ ಉಂಟಾಗಲಿದೆ. ಜಾತ್ಯತೀತವಾಗಿ ಎಲ್ಲ ವರ್ಗದವರಿಂದಲೂ ಬೆಂಬಲ ದೊರೆಯುತ್ತದೆ. ಅದರಿಂದ ಪಕ್ಷಕ್ಕೆ ಒಳ್ಳೆಯ ಇಮೇಜ್ ಸೃಷ್ಟಿಯಾಗುತ್ತದೆ. ಇದೆಲ್ಲವನ್ನೂ ವರಿಷ್ಠರು ಪರಿಗಣಿಸಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT