ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿ ಪತ್ರ

ಶಾಸಕ ಶ್ರೀರಾಮುಲು ವಿರುದ್ಧದ ಭೂಕಬಳಿಕೆ ಆರೋಪ ಪ್ರಕರಣ
Last Updated 28 ಆಗಸ್ಟ್ 2018, 1:05 IST
ಅಕ್ಷರ ಗಾತ್ರ

ಬೆಂಗಳೂರು: ಬಳ್ಳಾರಿ ಹೊರವಲಯದಲ್ಲಿ ಬೆಲೆಬಾಳುವ ಜಮೀನು ಕಬಳಿಸಿದ ಆರೋಪಕ್ಕೆ ಒಳಗಾಗಿರುವ ಬಿಜೆಪಿ ಶಾಸಕ ಬಿ. ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೇಳಿ ವಿಧಾನಸಭೆ ಅಧ್ಯಕ್ಷ ಕೆ.ಆರ್‌. ರಮೇಶ್‌ ಕುಮಾರ್‌ ಅವರಿಗೆ ಲೋಕಾಯುಕ್ತ ಎಡಿಜಿ‍ಪಿ ಪತ್ರ ಬರೆದಿದ್ದಾರೆ.

ಈ ಪ್ರಕರಣದಲ್ಲಿ ಶ್ರೀರಾಮುಲು 6ನೇ ಆರೋಪಿ ಆಗಿದ್ದಾರೆ. ಬಳ್ಳಾರಿಯ ಆಗಿನ ತಹಶೀಲ್ದಾರ್‌ ಶಶಿಧರ್‌ ಬಗಲಿ ಸೇರಿದಂತೆ ಆರೋಪಿಗಳಾಗಿರುವ ಐವರು ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕಳೆದ ವರ್ಷದ ಜೂನ್‌ನಲ್ಲಿ ಸರ್ಕಾರ ಅನುಮತಿ ನೀಡಿದೆ.

ಆಗಿನ ಜಿಲ್ಲಾಧಿಕಾರಿ ಡಿ.ಶಿವಪ್ಪ, ಅಸಿಸ್ಟೆಂಟ್‌ ಕಮಿಷನರ್‌ ವೆಂಕಟೇಶಲು, ಕಂದಾಯ ಅಧಿಕಾರಿ ವೀರೇಶಬಾಬು, ಭೂ ದಾಖಲೆಗಳ ಉಪ ನಿರ್ದೇಶಕ ನಾರಾಯಣ ಸ್ವಾಮಿ ಅವರನ್ನು ಈ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.

ಲೋಕಾಯುಕ್ತ ಎಡಿಜಿಪಿ ಅವರು ಬರೆದಿರುವ ಎರಡನೇ ಪತ್ರ ಇದಾಗಿದೆ. 2017ರ ಅಕ್ಟೋಬರ್‌ನಲ್ಲಿ ಕೆ.ಬಿ.ಕೋಳಿವಾಡ ವಿಧಾನಸಭೆ ಅಧ್ಯಕ್ಷರಾಗಿದ್ದಾಗ ಮೊದಲ ಬಾರಿಗೆ ಪತ್ರ ಬರೆದಿದ್ದರು. ಅದಕ್ಕೆ ಉತ್ತರ ಕಳುಹಿಸಿದ್ದ ವಿಧಾನಸಭೆ ಸಚಿವಾಲಯ, ‘ಶ್ರೀರಾಮುಲು ಸಂಸತ್‌ಸದಸ್ಯರಾಗಿರುವುದರಿಂದ ಲೋಕಸಭೆ ಸ್ಪೀಕರ್‌ ಅವರ ಅನುಮತಿ ಪಡೆಯಬೇಕು’ ಎಂದು ಸಲಹೆ ನೀಡಿತ್ತು.

ಆದರೆ, ಇದಕ್ಕೂ ಮುನ್ನ 2016ರ ಆಗಸ್ಟ್‌ನಲ್ಲಿ ಲೋಕಸಭೆ ಸ್ಪೀಕರ್‌ಗೂ ಅನುಮತಿ ಕೇಳಿ ಪತ್ರ ಬರೆಯಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಲೋಕಸಭೆ ಸಚಿವಾಲಯ, ‘ಶ್ರೀರಾಮುಲು ವಿಧಾನಸಭೆ ಸದಸ್ಯರಾಗಿದ್ದಾಗ ಈ ಪ್ರಕರಣ ನಡೆದಿರುವುದರಿಂದ ಸ್ಪೀಕರ್‌ ಅನುಮತಿ ಅಗತ್ಯವಿಲ್ಲ’ ಎಂದು 2017ರ ಜುಲೈನಲ್ಲಿ ಸೂಚಿಸಿತ್ತು.

ಇದರಿಂದಾಗಿ ಲೋಕಾಯುಕ್ತ ಅಧಿಕಾರಿಗಳು ಗೊಂದಲಕ್ಕೆ ಒಳಗಾಗಿದ್ದರು. ‘2018ರ ಮೇನಲ್ಲಿ ನಡೆದ ಚುನಾವಣೆಯಲ್ಲಿ ಶ್ರೀರಾಮುಲು ಮೊಳಕಾಲ್ಮುರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವುದರಿಂದ ವಿಧಾನಸಭಾಧ್ಯಕ್ಷರಿಗೆ ಮತ್ತೆ ಪತ್ರ ಬರೆಯಲಾಗಿದೆ. ಸಭಾಧ್ಯಕ್ಷರ ಅನುಮತಿ ಪಡೆಯದೆ ದೋಷಾರೋಪ ಪಟ್ಟಿ ಸಲ್ಲಿಸಿದರೆ ತಾಂತ್ರಿಕ ಕಾರಣದ ಮೇಲೆ ಪ್ರಕರಣ ಬಿದ್ದುಹೋಗಬಹುದು ಎಂಬ ಕಾರಣಕ್ಕೆ ಮತ್ತೆ ಪತ್ರ ಕಳುಹಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

2008ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರವನ್ನೂ ಪ್ರತಿನಿಧಿಸಿದ್ದ ಶ್ರೀರಾಮುಲು ಕೌಲ್‌ ಬಜಾರ್‌ ಪ್ರದೇಶದಲ್ಲಿ ಸರ್ಕಾರಿ ಮತ್ತು ಖಾಸಗಿ ಜಮೀನು ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆಗ ಅವರು ಸಂಪುಟ ದರ್ಜೆ ಸಚಿವರಾಗಿದ್ದರು. ಇದರಿಂದಾಗಿ, ನಿವೇಶನ ಕಳೆದುಕೊಂಡಿರುವ ಹಿರಿಯ ನಾಗರಿಕ ಜಿ.ಕೃಷ್ಣಮೂರ್ತಿ ಎಂಬುವರು ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿತ್ತು. ‘ಜಿಲ್ಲೆಯ ಅಧಿಕಾರಿಗಳು ಶ್ರೀರಾಮುಲು ಅವರಿಗೆ ಲಾಭ ಮಾಡಿಕೊಡಲು ದಾಖಲೆಗಳನ್ನು ತಿದ್ದಿದ್ದಾರೆ. ಅಲ್ಲದೆ, ಸಚಿವರ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ’ ಎಂದೂ ಆರೋಪಿಸಿತ್ತು.

ಈ ಕುರಿತ ಪ್ರತಿಕ್ರಿಯೆಗೆ ಶ್ರೀರಾಮುಲು ಅವರು ಸಿಗಲಿಲ್ಲ.

* ಶ್ರೀರಾಮುಲು ಅವರ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಸಂಬಂಧಪಟ್ಟ ವಿಚಾರ ಕುರಿತು ಲೋಕಾಯುಕ್ತ ಐ.ಜಿ ಅವರನ್ನು ಕೇಳಿ. ನಾನೀಗ ಹೊರಗೆ ಬಂದಿದ್ದೇನೆ
-ಸಂಜಯ್‌ ಸಹಾಯ್‌, ಎಡಿಜಿಪಿ ಲೋಕಾಯುಕ್ತ

*ರಾಜ್ಯಪಾಲರ ಮುಂದೆ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದವರನ್ನು ಪ್ರಾಸಿಕ್ಯೂಷನ್‌ಗೆ ಗುರಿಪಡಿಸಲು ಅನುಮತಿ ಬೇಕು. ಶಾಸಕರ ಪ್ರಾಸಿಕ್ಯೂಷನ್‌ಗೆ ಅನುಮತಿ ಬೇಕಿಲ್ಲ

-ಕೆ.ಆರ್‌. ರಮೇಶ್‌ ಕುಮಾರ್‌, ವಿಧಾನಸಭಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT