ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನುದಾನ ಮಂಜೂರಾತಿಯಲ್ಲಿ ಅಕ್ರಮ: 18 ಗ್ರಾ.ಪಂಗಳ ಮೇಲೆ ಲೋಕಾಯುಕ್ತ ದಾಳಿ

Published : 8 ಆಗಸ್ಟ್ 2024, 23:35 IST
Last Updated : 8 ಆಗಸ್ಟ್ 2024, 23:35 IST
ಫಾಲೋ ಮಾಡಿ
Comments

ಬೆಂಗಳೂರು: ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ 18 ಗ್ರಾಮ ಪಂಚಾಯತಿಗಳ ಮೇಲೆ ಲೋಕಾಯುಕ್ತ ನ್ಯಾಯಾಂಗ ವಿಭಾಗದ ಅಧಿಕಾರಿಗಳು ಮತ್ತು ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿ, ಶೋಧ ಕಾರ್ಯ ನಡೆಸಿದ್ದಾರೆ. ಈ ಶೋಧ ಕಾರ್ಯಗಳು ನಡೆಯುತ್ತಿರುವ ಸಂದರ್ಭದಲ್ಲೇ 12 ಗ್ರಾಮ ಪಂಚಾಯತಿಗಳಿಗೆ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಭೇಟಿ ನೀಡಿ, ಶೋಧಕಾರ್ಯ ಪರಿಶೀಲಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಕಸಘಟ್ಟಪುರ, ರಾಜಾನುಕುಂಟೆ, ಬನ್ನೇರುಘಟ್ಟ, ಕಲ್ಲುಬಾಳು, ಕಣ್ಣೂರು, ಮಂಡೂರು, ಕುಂಬಳಗೋಡು, ಆಗರ, ದಾಸನಪುರ, ಅಡಕಮಾರನಹಳ್ಳಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಣ್ಣೇಶ್ವರ, ಜಾಲಿಗೆ, ದೊಡ್ಡತುಮಕೂರು, ಮಜಿರೆ ಹೊಸಹಳ್ಳಿ, ಬೂದಿಹಾಳ್‌, ಸೋಂಪುರ, ನಂದಗುಡಿ, ಸೂಲಿಬೆಲೆ ಗ್ರಾಮ ಪಂಚಾಯತಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಕಚೇರಿ ಮಾಹಿತಿ ನೀಡಿದೆ.

ಈ ಗ್ರಾಮ ಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಣೆಯಲ್ಲಿ ಅನಗತ್ಯ ವಿಳಂಬ, ಅನರ್ಹ ಫಲಾನುಭವಿಗಳಿಗೆ ಮನೆ–ಶೌಚಾಲಯ ಅನುದಾನ ಮಂಜೂರಿಗೆ ಶಿಫಾರಸು, ಸಾರ್ವಜನಿಕರ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ, ನರೇಗಾ ಕೂಲಿ ಹಣ ದುರುಪಯೋಗ, ತೆರಿಗೆ ಸಂಗ್ರಹದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಸಂಬಂಧ ಹಲವು ದೂರುಗಳು ಬಂದಿದ್ದವು. ಕರ್ತವ್ಯ ಲೋಪ ಮತ್ತು ಅಕ್ರಮ ಪರಿಶೀಲನೆಗೆ ಪೊಲೀಸರ ಮತ್ತು ನ್ಯಾಯಾಂಗ ಅಧಿಕಾರಿಗಳ ತಂಡವನ್ನು ರಚಿಸಲಾಗಿತ್ತು ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಲೋಕಾಯುಕ್ತ ಪೊಲೀಸ್‌ ಸಿಬ್ಬಂದಿ ಇದ್ದ ತಂಡವು ಗುರುವಾರ ಮಧ್ಯಾಹ್ನ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದೆ. ಗ್ರಾಮ ಪಂಚಾಯತಿಗಳ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಜತೆಗೆ ಎಲ್ಲ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಶೋಧಕಾರ್ಯ ಮುಂದುವರೆದಿದೆ ಎಂದು ಪ್ರಕಟಣೆ ಹೇಳಿದೆ.

ಈ ಶೋಧ ಕಾರ್ಯ ನಡೆಯುತ್ತಿರುವ ವೇಳೆಯಲ್ಲೇ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಅವರು ದಾಸನಪುರ ಮತ್ತು ಅಡಕಮಾರನಹಳ್ಳಿ ಗ್ರಾಮ ಪಂಚಾಯತಿಗಳಿಗೆ ದಿಢೀರ್ ಭೇಟಿ ನೀಡಿ, ಶೋಧ ಕಾರ್ಯವನ್ನು ಪರಿಶೀಲಿಸಿದರು. ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಅವರು ಮಂಡೂರು, ಕಣ್ಣೂರು, ರಾಜಾನುಕುಂಟೆ ಮತ್ತು ಕಸಘಟ್ಟಪುರ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಅಣ್ಣೇಶ್ವರ, ಜಾಲಿಗೆ, ದೊಡ್ಡತುಮಕೂರು, ಮಜಿರೆ ಹೊಸಹಳ್ಳಿ, ಬೂದಿಹಾಳ್‌ ಮತ್ತು ಸೋಂಪುರ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿದರು. ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಸಂಚರಿಸುವಾಗ ಶಾಲಾಬಸ್‌ ಕಂಡ ಉಪಲೋಕಾಯುಕ್ತರು, ಬಸ್‌ ನಿಲ್ಲಿಸಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು. ಚೆನ್ನಾಗಿ ಓದಬೇಕು ಮತ್ತು ಅನ್ಯಾಯ ಮತ್ತು ಭ್ರಷ್ಟಾಚಾರ ಕಂಡರೆ ದೂರು ನೀಡಿ ಎಂದು ಉಪಲೋಕಾಯುಕ್ತ ಕಚೇರಿಯ ಮೊಬೈಲ್‌ ಸಂಖ್ಯೆ ನೀಡಿದರು.

  • ಗ್ರಾಮ ಪಂಚಾಯತಿಗಳ ಮೇಲಿನ ದಾಳಿ ವೇಳೆ ಬಹುತೇಕ ಕಡೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಕಚೇರಿಯಲ್ಲಿ ಇರಲಿಲ್ಲ.

  • ಪಿಡಿಒಗಳು ಕಚೇರಿಯಲ್ಲಿ ಇಲ್ಲದೇ ಇರುವ ಬಗ್ಗೆ ಕಚೇರಿ ಸಿಬ್ಬಂದಿಗೆ ಮಾಹಿತಿ ನೀಡಿರಲಿಲ್ಲ, ಹಾಜರಾತಿ ಪುಸ್ತಕದಲ್ಲೂ ನಮೂದಿಸಿರಲಿಲ್ಲ.

  • ಗ್ರಾಮ ಪಂಚಾಯತಿಗಳಲ್ಲಿ ನಗದು ವಹಿಯನ್ನು ನಿರ್ವಹಣೆ ಮಾಡಿಲ್ಲ. ಕಚೇರಿಗೆ ಸೇರಿದ ನಗದು ಎಷ್ಟು ಮತ್ತು ಸಿಬ್ಬಂದಿ ಬಳಿ ಇರುವ ನಗದಿಗೆ ಸಂಬಂಧಿಸಿದ ಮಾಹಿತಿ ನಮೂದಿಸಿಲ್ಲ

ಪಿಡಿಒ ಕಾರಿನಲ್ಲಿ ₹42,000
ದಾಸನಪುರ ಗ್ರಾಮ ಪಂಚಾಯತಿ ಮಹಿಳಾ ಪಿಡಿಒ ಕಾರಿನಲ್ಲಿ ₹42,000 ಪತ್ತೆಯಾಗಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ. ‘ಕಚೇರಿ ಆವರಣದಲ್ಲಿ ಇದ್ದ ಕಾರನ್ನು ಪರಿಶೀಲಿಸುವ ಸಲುವಾಗಿ ಕೀ ನೀಡುವಂತೆ ಕೇಳಿದಾಗ, ಪಿಡಿಒ ನಿರಾಕರಿಸಿದರು. ಕಾರನ್ನು ವಶಕ್ಕೆ ಪಡೆದು ಎಳೆದೊಯ್ಯುತ್ತೇವೆ. ನಂತರ ಪರಿಶೀಲನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದೆವು. ಆಗ ಕಾರಿನ ಕೀ ನೀಡಿದರು. ಕಾರಿನ ಬಾಗಿಲು ತೆರೆದು ಪರಿಶೀಲಿಸಿದಾಗ ಹಣ ಪತ್ತೆಯಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT