ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಡಾಳ್‌ ವಿರೂಪಾಕ್ಷಪ್ಪ ಲಂಚ ಪ್ರಕರಣ: ಕೆಎಸ್‌ಡಿಎಲ್‌ನಲ್ಲಿ ಲೋಕಾಯುಕ್ತ ಪೊಲೀಸರಿಂದ ಶೋಧ

Published 20 ಜೂನ್ 2023, 5:03 IST
Last Updated 20 ಜೂನ್ 2023, 5:03 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಾಬೂನು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ಕಚೇರಿ ಮೇಲೆ ಸೋಮವಾರ ದಾಳಿ ಮಾಡಿ ಶೋಧ ನಡೆಸಿರುವ ಲೋಕಾಯುಕ್ತ ಪೊಲೀಸರು, ಹಲವು ವರ್ಷಗಳಿಂದ ಈಚೆಗೆ ನಡೆದಿರುವ ಟೆಂಡರ್‌ ಪ್ರಕ್ರಿಯೆ, ಕಚ್ಚಾವಸ್ತು ಖರೀದಿ ಹಾಗೂ ಹಣಕಾಸು ವಹಿವಾಟಿಗೆ ಸಂಬಂಧಿಸಿದ ಕಡತಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಎಸ್‌ಡಿಎಲ್‌ಗೆ ಕಚ್ಚಾವಸ್ತು ಪೂರೈಸುವ ಗುತ್ತಿಗೆ ಪಡೆದಿದ್ದ ಕಂಪನಿಯೊಂದರ ಮಾಲೀಕರಿಂದ ₹ 40 ಲಕ್ಷ ಲಂಚ ಪಡೆಯುತ್ತಿದ್ದ ಹಿಂದಿನ ಅಧ್ಯಕ್ಷ ಕೆ. ಮಾಡಾಳ್‌ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಮಾಡಾಳ್‌ ಅವರನ್ನು ಲೋಕಾಯುಕ್ತ ಪೊಲೀಸರು ಮಾರ್ಚ್‌ 2ರಂದು ಬಂಧಿಸಿದ್ದರು. ಅವರ ಕಚೇರಿ ಹಾಗೂ ಮನೆಗಳಲ್ಲಿ ಒಟ್ಟು ₹ 8.28 ಕೋಟಿ ನಗದು ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಅವರನ್ನೂ ಬಂಧಿಸಲಾಗಿತ್ತು.

ಕೆಎಸ್‌ಡಿಎಲ್‌ನಲ್ಲಿ ನಡೆದ ಸಮಗ್ರ ಅವ್ಯವಹಾರಗಳ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ವಿಚಾರಣೆ ಆರಂಭಿಸಿದ್ದಾರೆ. ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ನಡೆಯುತ್ತಿರುವ ವಿಚಾರಣೆಗೆ ಪೂರಕವಾಗಿ ದಾಖಲೆಗಳನ್ನು ವಶಕ್ಕೆ ಪಡೆಯಲು ಶೋಧ ನಡೆಸುವಂತೆ ಲೋಕಾಯುಕ್ತರು ವಾರೆಂಟ್‌ ಹೊರಡಿಸಿದ್ದರು. ರಾಜಾಜಿನಗರದಲ್ಲಿರುವ ಸಂಸ್ಥೆಯ ಕಚೇರಿ ಮೇಲೆ ಸೋಮವಾರ ಬೆಳಿಗ್ಗೆ ದಾಳಿಮಾಡಿದ ಲೋಕಾಯುಕ್ತ ಪೊಲೀಸರು, ರಾತ್ರಿಯವರೆಗೂ ಶೋಧ ನಡೆಸಿದರು.

ಲೋಕಾಯುಕ್ತದ ಬೆಂಗಳೂರು ನಗರ ಎಸ್‌ಪಿ ಕೆ.ವಿ. ಅಶೋಕ್‌ ನೇತೃತ್ವದಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಹಲವು ಅಧಿಕಾರಿಗಳು ಸಿಬ್ಬಂದಿ ಪಾಲ್ಗೊಂಡಿದ್ದರು. ಕೆೆಎಸ್‌ಡಿಎಲ್‌ನಲ್ಲಿ ಕಚ್ಚಾವಸ್ತು ಖರೀದಿಗೆ ಟೆಂಡರ್‌ ಆಹ್ವಾನ, ಬಿಡ್‌ ಅಂತಿಮಗೊಳಿಸಿರುವುದು, ಕಚ್ಚಾ ವಸ್ತುಗಳ ಮಾದರಿ ಪರೀಕ್ಷೆ, ಹಣ ಪಾವತಿಗೆ ಸಂಬಂಧಿಸಿದ ಹಲವು ಕಡತಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT