ಬೆಂಗಳೂರು: ನಗರದ 62 ಅಬಕಾರಿ ವಿಭಾಗ ಕಚೇರಿಗಳ ಮೇಲೆ ಲೋಕಾಯುಕ್ತವು ಮಂಗಳವಾರ ಏಕಕಾಲದಲ್ಲಿ ದಾಳಿ ನಡೆಸಿದೆ. ಈ ವೇಳೆ ಹಲವು ಕಚೇರಿಗಳಲ್ಲಿ ಗಾಂಜಾ, ಗಾಂಜಾ ತುಂಬಿದ ಸಿಗರೇಟ್ ಮತ್ತು ದಾಖಲೆ ಇಲ್ಲದ ಮದ್ಯದ ಬಾಟಲಿಗಳು ಪತ್ತೆಯಾಗಿವೆ.
ಮದ್ಯದಂಗಡಿಗಳ ಪರವಾನಗಿ ಅರ್ಜಿ, ಪರವಾನಗಿ ನವೀಕರಣ ಅರ್ಜಿ, ಸ್ಥಳಾಂತರಕ್ಕೆ ಸಲ್ಲಿಸಿದ ಅರ್ಜಿಗಳು ವಿಲೇವಾರಿ ಆಗುವುದೇ ಇಲ್ಲ ಎಂದು 132 ದೂರುಗಳು ಬಂದಿದ್ದವು. ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಪರಿಶೀಲನೆಯ ಭಾಗವಾಗಿ 62 ಕಚೇರಿಗಳಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ದಾಳಿ ನಡೆಸಲಾಗಿದೆ ಎಂದು ಲೋಕಾಯಕ್ತವು ಮಾಹಿತಿ ನೀಡಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಮತ್ತು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದಲ್ಲಿ ಯಶವಂತಪುರ ಮತ್ತು ಬ್ಯಾಟರಾಯನಪುರ ಅಬಕಾರಿ ಕಚೇರಿಗಳಲ್ಲಿ ದಾಳಿ ನಡೆಸಲಾಗಿದೆ. ‘ಎರಡೂ ಕಚೇರಿಗಳಲ್ಲಿ, ಅಧಿಕಾರಿಗಳ ಕೊಠಡಿಗಳಲ್ಲಿ ದಾಖಲೆ ಇಲ್ಲದ ಮದ್ಯದ ಬಾಟಲಿಗಳು ಮತ್ತು ಸುಮಾರು 1 ಕೆ.ಜಿ.ಯಷ್ಟು ಗಾಂಜಾ ಪತ್ತೆಯಾಗಿದೆ. ಕೆಲವು ಅಧಿಕಾರಿಗಳ ಕೊಠಡಿಗಳಲ್ಲಿ, ಡ್ರಾಯರ್‌ಗಳಲ್ಲಿ ಗಾಂಜಾ ತುಂಬಿಸಿದ್ದ ಸಿಗರೇಟ್‌ಗಳು ಪತ್ತೆಯಾಗಿವೆ’ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಮಾಹಿತಿ ನೀಡಿದರು.
‘ಅಧಿಕಾರಿಗಳು ಮತ್ತು ನೌಕರರು ಕಚೇರಿಯಲ್ಲೇ ಮದ್ಯ ಸೇವಿಸಿರುವ ಸಾಧ್ಯತೆ ಇದೆ. ಹೀಗಾಗಿಯೇ ಕೆಲವು ಬಾಟಲಿಗಳು ಪೂರ್ತಿ ಖಾಲಿಯಾಗಿದ್ದು, ಕೆಲವು ಬಾಟಲಿಗಳಲ್ಲಿ ಅಲ್ಪ–ಸ್ವಲ್ಪ ಮದ್ಯ ಉಳಿದಿತ್ತು. ಯಶವಂತಪುರ ಕಚೇರಿಯಲ್ಲಿ ಮೂರ್ತಿ ಎಂಬಾತನ ಬ್ಯಾಗ್‌ನಲ್ಲಿ ಒಂದು ಬಾಟಲಿ ಮದ್ಯ ಇತ್ತು. ಆ ಬಗ್ಗೆ ಕೇಳಿದರೆ, ‘ನನ್ನ ಸ್ನೇಹಿತ ಈ ಬಾಟಲಿ ಕೊಟ್ಟಿದ್ದ. ಅದನ್ನು ಬ್ಯಾಗ್‌ನಲ್ಲೇ ಇಟ್ಟುಕೊಂಡಿದ್ದೆ’ ಎಂದ. ಆ ಎಲ್ಲ ಬಾಟಲಿಗಳು, ಗಾಂಜಾ ಮತ್ತು ಗಾಂಜಾ ತಂಬಿದ್ದ ಸಿಗರೇಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ವಿವರಣೆ ನೀಡುವಂತೆ ಸೂಚಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
‘ಎರಡೂ ಕಡೆ ಹಲವು ಅಧಿಕಾರಿಗಳು ಕಚೇರಿಯಲ್ಲಿ ಇರಲಿಲ್ಲ. ಕರೆ ಮಾಡಿದರೂ ಸ್ವೀಕರಿಸಲಿಲ್ಲ, ಬದಲಿಗೆ ಫೋನ್ ಸ್ವಿಚ್ ಆಫ್ ಮಾಡಿಕೊಂಡರು. ಯಶವಂತಪುರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಕಚೇರಿಗೆ ಬರಲೇ ಇಲ್ಲ. ಎಲ್ಲ ಕಚೇರಿಗಳಲ್ಲಿ ಕಡತಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದರು.
ಎಲ್ಲ ಕಚೇರಿಗಳಲ್ಲಿ ಶೋಧಕಾರ್ಯ ಮುಂದುವರೆದಿದ್ದು, ವರದಿ ಬಂದ ನಂತರ ಅಧಿಕಾರಿಗಳನ್ನು ವಿಚಾರಣೆಗೆ ಕರೆಸಲಾಗುತ್ತದೆ ಎಂದು ಲೋಕಾಯುಕ್ತವು ಮಾಹಿತಿ ನೀಡಿದೆ.
ಸ್ಕೂಟರ್ ಡಿಕ್ಕಿಯಲ್ಲಿ ₹1 ಲಕ್ಷ
‘ಶೋಧ ಕಾರ್ಯದ ವೇಳೆ ಬ್ಯಾಟರಾಯನಪುರ ಅಬಕಾರಿ ಕಚೇರಿಯಲ್ಲಿ ₹2 ಲಕ್ಷ ನಗದು ಪತ್ತೆಯಾಗಿದೆ. ಇದರಲ್ಲಿ ₹ 1 ಲಕ್ಷ ನಗದು ಕಚೇರಿ ಸಿಬ್ಬಂದಿಗೆ ಸೇರಿದ ಸ್ಕೂಟರ್‌ನ ಡಿಕ್ಕಿಯಲ್ಲಿ ಇತ್ತು’ ಎಂದು ಉಪ ಲೋಕಾಯುಕ್ತರು ಮಾಹಿತಿ ನೀಡಿದರು. ‘ಈ ನಗದಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ. ಕಚೇರಿಯಲ್ಲಿ ದಾಖಲೆಗಳೂ ಇಲ್ಲ. ನಗದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ವಿವರಣೆ ನೀಡುವಂತೆ ಸೂಚಿಸಲಾಗಿದೆ’ ಎಂದರು. ‘ಎರಡೂ ಕಚೇರಿಯಲ್ಲಿ ಲೋಕಾಯುಕ್ತಕ್ಕೆ ಸಂಬಂಧಿಸಿದ ಫಲಕಗಳನ್ನು ಪ್ರದರ್ಶಿಸಿಲ್ಲ. ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡಲು ಅಗತ್ಯವಾದ ಸಂಪರ್ಕ ಸಂಖ್ಯೆಯನ್ನೂ ಪ್ರದರ್ಶಿಸಿಲ್ಲ. ಈ ಬಗ್ಗೆಯೂ ವಿವರಣೆ ಕೇಳಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.