ವಿಜಯಪುರ: ಧಾರವಾಡ ಮತ್ತು ಕಲಬುರ್ಗಿಯಲ್ಲಿ ಹೈಕೋರ್ಟ್ ವಿಭಾಗೀಯ ಪೀಠಗಳಿರುವಂತೆ ಲೋಕಾಯುಕ್ತ ಪ್ರಾದೇಶಿಕ ಕಚೇರಿಗಳನ್ನು ಆರಂಭಿಸುವ ಅಗತ್ಯವಿದೆ. ಜೊತೆಗೆ ಇನ್ನೆರಡು ಉಪ ಲೋಕಾಯುಕ್ತ ಹುದ್ದೆಗಳನ್ನು ಸೃಜಿಸುವ ಅಗತ್ಯವಿದೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತಕ್ಕೆ ಬರುತ್ತಿರುವ ದೂರುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಇದರಿಂದ ಸಂಸ್ಥೆ ಮೇಲೆ ಒತ್ತಡ ಹೆಚ್ಚಾಗಿದೆ. ಈ ದೂರುಗಳ ತ್ವರಿತ ಇತ್ಯರ್ಥಕ್ಕೆ ಲೋಕಾಯುಕ್ತ ಪ್ರಾದೇಶಕ ಕಚೇರಿ ಮತ್ತು ಉಪ ಲೋಕಾಯುಕ್ತರ ನೇಮಕದಿಂದ ಅನುಕೂಲವಾಗಲಿದೆ ಎಂದರು.
ಲೋಕಾಯುಕ್ತ ಮುಂದೆ ಸದ್ಯ 18,886 ಪ್ರಕರಣಗಳು ನೋಂದಣಿಯಾಗಿವೆ. ಇದರಲ್ಲಿ ಲೋಕಾಯುಕ್ತರ ಎದುರು 5495 ಪ್ರಕರಣಗಳು, ಉಪ ಲೋಕಾಯುಕ್ತ(1)ರ ಬಳಿ 7028 ಮತ್ತು ಉಪ ಲೋಕಾಯುಕ್ತ(2)ರ ಬಳಿ 6363 ಹಾಗೂ 1413 ದೂರುಗಳು ಇಲಾಖಾ ವಿಚಾರಣೆಗೆ ಬಾಕಿ ಇವೆ ಎಂದರು.
ಲೋಕಾಯುಕ್ತ ಸಂಸ್ಥೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಹಂತ, ಹಂತವಾಗಿ ಸರ್ಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಭರ್ತಿ ಮಾಡಿಲ್ಲ ಎಂದು ಹೇಳಿದರು.