ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಕರ್ತವ್ಯದಿಂದ ವೈದ್ಯರು, ನರ್ಸ್ ಗಳಿಗೆ ವಿನಾಯಿತಿ: ಹೈಕೋರ್ಟ್

Published 6 ಏಪ್ರಿಲ್ 2024, 18:17 IST
Last Updated 6 ಏಪ್ರಿಲ್ 2024, 18:17 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯರು, ನರ್ಸ್‌ಗಳು ಸೇರಿದಂತೆ ಫಾರ್ಮಸಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಯಶವಂತಪುರದ ಇಎಸ್‌ಐ ಡಿಸ್ಪೆನ್ಸರಿಯ ಫಾರ್ಮಸಿ ಅಧಿಕಾರಿ ಕೆ.ಪ್ರದೀಪ್‌ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಬಿ.ಎಂ.ಸಂತೋಷ್‌, "ವೈದ್ಯರು, ನರ್ಸ್‌ ಗಳು, ಫಾರ್ಮಸಿ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯದಿಂದ ವಿನಾಯ್ತಿ ನೀಡಲಾಗಿದೆ. ಆದರೂ, ಬೃಹತ್ ಬೆಂಗಳೂರು ‌ಮಹಾನಗರ ಪಾಲಿಕೆ (ಬಿಬಿಎಂಪಿ) ಫಾರ್ಮಸಿ ಅಧಿಕಾರಿಗಳಿಗೆ ಕಾನೂನು ಬಾಹಿರ ಆದೇಶ ಹೊರಡಿಸಿದ್ದು, ಚುನಾವಣಾ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಲಾಗಿದೆ" ಎಂದು ಅಕ್ಷೇಪಿಸಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, "ವೈದ್ಯರು, ನರ್ಸ್‌ಗಳು ಮತ್ತು ಎಎನ್‌ಎಂ ಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸದಂತೆ ಚುನಾವಣಾ ಆಯೋಗವೇ ಆದೇಶಿಸಿದೆ. ಹೀಗಾಗಿ, ಅವರಿಗೆ ಸೇವೆಯಿಂದ ವಿನಾಯಿತಿ ನೀಡಬೇಕು’’ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗೆ ನಿರ್ದೇಶಿಸಿತು.

ಪ್ರತಿವಾದಿಗಳಾದ ಕೇಂದ್ರ ಚುನಾವಣಾ ಆಯೋಗ, ರಾಜ್ಯ ಸರ್ಕಾರ ಮತ್ತು ಜಿಲ್ಲಾ ಚುನಾವಣಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮು‌ಂದೂಡಿತು.

‘‘ಅರ್ಜಿದಾರರು ಫಾರ್ಮಸಿ ಅಧಿಕಾರಿಗಳಾಗಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ನಡೆದ ಚುನಾವಣೆ ಸಮಯದಲ್ಲಿ ಫಾರ್ಮಸಿ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಲಾಗಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಅವರನ್ನು ಪುನಃ ನಿಯೋಜನೆ ಮಾಡಲಾಗಿದೆ. ಇದು ಭಾರತೀಯ ಚುನಾವಣಾ ಆಯೋಗ ಹೊರಡಿಸಿರುವ ಕೈಪಿಡಿಗೆ ವಿರುದ್ಧವಾಗಿದೆ" ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT