ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಚ್ಚಿನ ಅಧಿಕಾರಿ ಮಧುಕರ್ ಶೆಟ್ಟಿ‌ಗೆ ಅಂತಿಮ ನಮನ

ಡಾ. ಮಧುಕರ್‌ ಶೆಟ್ಟಿ ಅವರ ಇಷ್ಟದ ಹಾಡು ಹಾಡಿ ಕಂಬನಿ ಮಿಡಿದ ಸಹೋದ್ಯೋಗಿ
Last Updated 30 ಡಿಸೆಂಬರ್ 2018, 2:28 IST
ಅಕ್ಷರ ಗಾತ್ರ

ಬೆಂಗಳೂರು: ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದಾಗಿ ಶುಕ್ರವಾರ ರಾತ್ರಿ ನಿಧನರಾದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಪಾರ್ಥಿವ ಶರೀರಕ್ಕೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಶನಿವಾರ ಅಂತಿಮ ನಮನ ಸಲ್ಲಿಸಿದರು.

ಹೈದರಾಬಾದ್‌ನ ಕಾಂಟಿನೆಂಟಲ್ ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ವಿಶೇಷ ವಿಮಾನದಲ್ಲಿ ನಗರದ ಕೆಂಪೇ
ಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ ತರಲಾಯಿತು. ನಂತರ, ಯಲಹಂಕದಲ್ಲಿರುವ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ತರಬೇತಿ ಶಾಲೆ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.

ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಲಾಯಿತು. ಮಧುಕರ್ ಅವರು ಕರ್ತವ್ಯದಲ್ಲಿದ್ದ ವೇಳೆ ಧರಿಸುತ್ತಿದ್ದ ಸಮವಸ್ತ್ರ, ಕ್ಯಾಪ್, ಪೊಲೀಸ್ ಬೆಲ್ಟ್ ಹಾಗೂ ಲಾಠಿಯನ್ನು ಎಡಭಾಗದಲ್ಲಿ ಇರಿಸಲಾಗಿತ್ತು.ಬೆಂಗಳೂರು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಐಪಿಎಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ತಮ್ಮ ನೆಚ್ಚಿನ ಅಧಿಕಾರಿಗೆ ಅಂತಿಮ ನಮನ ಸಲ್ಲಿಸಿದರು. ಅವರೊಂದಿಗೆ ಕಳೆದ ದಿನಗಳನ್ನು ನೆನೆದು ಕಣ್ಣೀರಿಟ್ಟರು.

ಪೊಲೀಸ್ ತರಬೇತಿ ಶಾಲೆಯ ಸಿಬ್ಬಂದಿ, ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಸರ್ಕಾರಿ ಗೌರವ ಸಲ್ಲಿಸಿದರು.

ಇಷ್ಟದ ಹಾಡು ಹಾಡಿ ಕಣ್ಣೀರಿಟ್ಟರು: ಐಪಿಎಸ್ ಅಧಿಕಾರಿಗಳಿಗೆ ತರಬೇತಿ ನೀಡುವ ‘ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ’ ಉಪ ನಿರ್ದೇಶಕರಾಗಿದ್ದ ಮಧುಕರ್ ಶೆಟ್ಟಿಯವರ ನಿಧನ, ಅಕಾಡೆಮಿಯ ಸಹೋದ್ಯೋಗಿಗಳು ಹಾಗೂ ತರಬೇತಿನಿರತ ಅಧಿಕಾರಿಗಳಿಗೆ ನೋವು ತಂದಿದೆ.

ಅಂತಿಮ ನಮನ ಸಲ್ಲಿಸಿದ ಸಹೋದ್ಯೋಗಿ, ಐಪಿಎಸ್ ಅಧಿಕಾರಿ ಪವನ್‌ಕುಮಾರ್, ‘ಜಿಂದಗಿ ಕೋ ಬಹುತ್ ಪ್ಯಾರ್ ಹಮ್ನೇ ದಿಯಾ, ಮೌತ್ ಸೇ ಬೀ ಮೊಹಬ್ಬತ್ ನಿಭಾಯಂಗೆ ಹಮ್...' ಎಂಬ ಮಧುಕರ್‌ ಅವರ ಇಷ್ಟದ ಹಾಡು ಹಾಡಿ ಬಿಕ್ಕಿ ಬಿಕ್ಕಿ ಅತ್ತರು. ಆ ದೃಶ್ಯ ನೆರೆದಿದ್ದ ಹಿರಿಯ ಹಾಗೂ ಕಿರಿಯ ಅಧಿಕಾರಿಗಳ ಕಣ್ಣಲ್ಲೂ ನೀರು ತರಿಸಿತು.

ನೂತನ ಗೃಹ ಸಚಿವ ಎಂ.ಬಿ.ಪಾಟೀಲ, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ಡಿಜಿಪಿಗಳಾದ ಕಿಶೋರ್ ಚಂದ್ರ, ಎಂ.ಎನ್.ರೆಡ್ಡಿ, ಎ.ಎಂ. ಪ್ರಸಾದ್, ನಿವೃತ್ತ ಡಿಜಿಪಿ ಶಂಕರ್ ಬಿದರಿ, ಎಡಿಜಿಪಿ ಕಮಲ್ ಪಂತ್‌, ನಗರ ಪೊಲೀಸ್ ಕಮಿಷನರ್ ಟಿ. ಸುನೀಲ್‌ಕುಮಾರ್ ಅವರು ಪುಷ್ಪ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಮಧುಕರ್ ಅವರ ಪತ್ನಿ ಹಾಗೂ ಮಗಳಿಗೆ ಸಾಂತ್ವನ ಹೇಳಿದರು.

ಸಂಜೆ 6 ಗಂಟೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಮೂಲಕ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ತೆಗೆದುಕೊಂಡು ಹೋಗಲಾಯಿತು.

* ಇದನ್ನೂ ಓದಿ...

‘ಸಾವಿನ ಬಗ್ಗೆ ಆಸ್ಪತ್ರೆ ವರದಿ ಪರಿಶೀಲನೆ’

‘ಮಧುಕರ್ ಶೆಟ್ಟಿ ಅವರು ಚಿಕ್ಕ ವಯಸ್ಸಿನಲ್ಲೇ ಅಕಾಲಿಕ ಮರಣಕ್ಕೀಡಾಗಿದ್ದಾರೆ. ಅವರ ಸಾವಿನ ಬಗ್ಗೆ ನನಗೆ ಅನುಮಾನವಿದೆ. ಅವರ ಸಾವು ಸ್ವಾಭಾವಿಕವೋ ಅಥವಾ ಅಲ್ಲವೋ ಎಂಬುದು ತನಿಖೆಯಿಂದ ತಿಳಿಯಬೇಕು’ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ವರದಿ ಪರಿಶೀಲಿಸಿ ತನಿಖೆ: ಮಧುಕರ್ ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿ ಮಾತನಾಡಿದ ಗೃಹ ಸಚಿವ ಎಂ.ಬಿ.ಪಾಟೀಲ, ‘ಶಿವಕುಮಾರ್ ಅವರು ಜವಾಬ್ದಾರಿಯುತ ಸಚಿವರಾಗಿ ಹೇಳಿಕೆ ನೀಡಿದ್ದಾರೆ. ಮಧುಕರ್ ಶೆಟ್ಟಿ ಅವರ ಸಾವಿನ ಬಗ್ಗೆ ಆಸ್ಪತ್ರೆಯ ವರದಿ ಪರಿಶೀಲಿಸಿ, ಅಗತ್ಯಬಿದ್ದರೆ ತನಿಖೆ ನಡೆಸುವಂತೆ ಡಿಜಿಪಿಗೆ ಸೂಚಿಸಿದ್ದೇನೆ’ ಎಂದು ಹೇಳಿದರು.

ಪೋಷಕರ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ
ಉಡುಪಿ: ಐಪಿಎಸ್‌ ಅಧಿಕಾರಿ ಡಾ.ಮಧುಕರ ಶೆಟ್ಟಿ ಅವರ ಅಂತ್ಯಕ್ರಿಯೆ ಕುಂದಾಪುರ ತಾಲ್ಲೂಕಿನ ಹೊಂಬಾಡಿ–ಮಂಡಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡಾಡಿ–ಮತ್ಯಾಡಿ ಗ್ರಾಮದಲ್ಲಿನ ಅವರ ತಂದೆ ವಡ್ಡರ್ಸೆ ರಘುರಾಮ ಶೆಟ್ಟಿ ಹಾಗೂ ತಾಯಿ ಪ್ರಫುಲ್ಲ ಶೆಟ್ಟಿ ಅವರ ಸಮಾಧಿ ಪಕ್ಕದಲ್ಲೇ ಭಾನುವಾರ ಬೆಳಿಗ್ಗೆ 10ಕ್ಕೆ ನೆರವೇರಲಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿವೆ.

ಭಾನುವಾರ ಬೆಳಿಗ್ಗೆ 8ಕ್ಕೆ ಕುಂದಾಪುರದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು. ಬೆಳಿಗ್ಗೆ 10 ಗಂಟೆಯ ನಂತರ ಫಾರ್ಮ್‌ಹೌಸ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮಧುಕರ ಶೆಟ್ಟಿ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ಎಸ್ಪಿ ಸ್ಥಳಕ್ಕೆ ಭೇಟಿ ನೀಡಿದ್ದು, ಸಿದ್ಧತೆಗಳ ಉಸ್ತುವಾರಿ ಹೊತ್ತುಕೊಂಡಿದ್ದಾರೆ. ಅಂತ್ಯಕ್ರಿಯೆ ನಡೆಯುವ ಜಾಗ ಕಿರಿದಾಗಿರುವುದರಿಂದ ವಾಹನಗಳು ಬರದಂತೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.

ವಡ್ಡರ್ಸೆ ರಘುರಾಮ ಶೆಟ್ಟಿ ಅವರಿಗೆ ಮೂವರು ಗಂಡುಮಕ್ಕಳು. ಹಿರಿಯ ಪುತ್ರ ಮುರಳೀಧರ ಶೆಟ್ಟಿ ದುಬೈನಲ್ಲಿದ್ದಾರೆ. ಕಿರಿಯವರಾದ ಸುಧಾಕರ ಶೆಟ್ಟಿ ಅಮೆರಿಕದಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT