ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ ಯೋಜನೆ: ಮತ್ತೆ ಕಗ್ಗಂಟು

Published 10 ಸೆಪ್ಟೆಂಬರ್ 2023, 3:25 IST
Last Updated 10 ಸೆಪ್ಟೆಂಬರ್ 2023, 3:25 IST
ಅಕ್ಷರ ಗಾತ್ರ

ನವದೆಹಲಿ: ಹುಬ್ಬಳ್ಳಿ-ಧಾರವಾಡ, ಸುತ್ತಮುತ್ತಲಿನ ಪಟ್ಟಣಗಳು ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿರುವ ಮಹದಾಯಿ ಯೋಜನೆಗೆ ಮತ್ತೆ ಅಡ್ಡಿ ಎದುರಾಗಿದೆ. ಕಳಸಾ ನಾಲಾ ತಿರುವು ಯೋಜನೆಗೆ 26.92 ಹೆಕ್ಟೇರ್‌ ಬಳಕೆಗೆ ಅನುಮೋದನೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಗೆ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯಕ್ಕೆ ಒಪ್ಪಿಗೆ ನೀಡಿಲ್ಲ. 

ಈ ಸಂಬಂಧ ಕರ್ನಾಟಕ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರಿಗೆ ಗುರುವಾರ ಪತ್ರ ಬರೆದಿರುವ ಸಚಿವಾಲಯದ ಉಪ ಮಹಾನಿರೀಕ್ಷಕ (ಅರಣ್ಯ) ಎಂ.ಕೆ.ಶಂಭು, ‘ಯೋಜನೆಗೆ ಅರಣ್ಯ ಬಳಕೆಗೆ ಅನುಮೋದನೆ ನೀಡುವಂತೆ ರಾಜ್ಯ ಪ್ರಸ್ತಾವನೆ ಸಲ್ಲಿಸಿತ್ತು. ಈ ಸಂಬಂಧ ರಾಜ್ಯ ಸರ್ಕಾರದಿಂದ ಕೆಲವು ಸ್ಪಷ್ಟೀಕರಣವನ್ನು ಕೇಳಲಾಗಿತ್ತು. ರಾಜ್ಯ ಸರ್ಕಾರ ಆಗಸ್ಟ್‌ 30ರಂದು ಪತ್ರ ಬರೆದು ವಿವರಣೆ ನೀಡಿತ್ತು. ಆದರೆ, ಈ ಸ್ಪಷ್ಟೀಕರಣ ಅಪೂರ್ಣವಾಗಿದೆ’ ಎಂದು ತಿಳಿಸಿದ್ದಾರೆ. 

ಈ ಯೋಜನೆಗೆ ಮಹದಾಯಿ ನ್ಯಾಯಮಂಡಳಿಯು 2018ರ ಆಗಸ್ಟ್‌ 14ರಂದು 3.90 ಟಿಎಂಸಿ ಅಡಿ ನೀರಿನ ಹಂಚಿಕೆ ಮಾಡಿತ್ತು. ಈ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ 2022ರ ಡಿಸೆಂಬರ್‌ 29ರಂದು ಅನುಮೋದನೆ ನೀಡಿತ್ತು. ಇದರಲ್ಲಿ ಕಳಸಾ ನಾಲಾ ತಿರುವು ಯೋಜನೆಗೆ 1.78 ಟಿಎಂಸಿ ಅಡಿ ಮೀಸಲಿಡಲಾಗಿದೆ.

ಈ ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಏಳು ಗ್ರಾಮಗಳ ಅರಣ್ಯ ಬಳಕೆಗೆ (ಜಾಕ್‌ವೆಲ್‌ ನಿರ್ಮಾಣ, ಪಂಪ್‌ ಹೌಸ್‌, ಎಲೆಕ್ಟ್ರಿಕಲ್‌ ಸಬ್‌ ಸ್ಟೇಷನ್‌, ಪೈಪ್‌ಲೈನ್‌) ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವು ಸಚಿವಾಲಯಕ್ಕೆ ಈ ವರ್ಷದ ಜನವರಿಯಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಇದರ ನಡುವೆ, ವನ್ಯಜೀವಿ ಧಾಮದಿಂದ ಕರ್ನಾಟಕವು ನೀರು ಕೊಂಡೊಯ್ಯುತ್ತಿದೆ ಎಂದು ಆರೋಪಿಸಿ ಗೋವಾ ಸರ್ಕಾರವು ವನ್ಯಜೀವಿ ಕಾಯ್ದೆಯಡಿ ರಾಜ್ಯ ಸರ್ಕಾರಕ್ಕೆ ನೋಟಿಸ್‌ ನೋಟಿಸ್‌ ನೀಡಿತ್ತು.

ಕಳಸಾ ನಾಲಾ ತಿರುವು ಯೋಜನೆಗೆ ಅರಣ್ಯ ಬಳಕೆಗೆ ಸಚಿವಾಲಯದ ಪ್ರಾದೇಶಿಕ ಉನ್ನತಾಧಿಕಾರ ಸಮಿತಿಯು ಜನವರಿ 20ರಂದು ನಿರಾಕರಿಸಿತ್ತು. ಹುಲಿ ಕಾರಿಡಾರ್‌ ಹಾಗೂ ಪರಿಹಾರಾತ್ಮಕ ಹಸಿರು ಬೆಳೆಸುವ ಯೋಜನೆ ಮತ್ತಿತರ ವಿಷಯಗಳ ಕುರಿತು ವಿಸ್ತೃತ ಚರ್ಚೆ ಹಾಗೂ ವಿವರಣೆಯ ಅಗತ್ಯ ಇದೆ ಎಂದು ಸ್ಪಷ್ಟಪಡಿಸಿತ್ತು. ‍

ಹುಲಿ ಕಾರಿಡಾರ್‌ ಹಾಗೂ ಪರಿಹಾರಾತ್ಮಕ ಹಸಿರುವ ಬೆಳೆಸುವ ಕುರಿತು ರಾಜ್ಯ ಸರ್ಕಾರ ನೀಡಿರುವ ಪ್ರತಿಕ್ರಿಯೆ ಸಮರ್ಪಕವಾಗಿಲ್ಲ ಎಂದು ಉಪ ಮಹಾನಿರೀಕ್ಷಕರು (ಅರಣ್ಯ) ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ’ಮಹಾದಾಯಿ ಯೋಜನೆ ಬಗ್ಗೆ ನ್ಯಾಯಾಲಯದ ಆದೇಶಗಳು ಹಾಗೂ ಕಾನೂನು ಹೋರಾಟದ ಕುರಿತು ಗೋವಾ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅವರು ಸಚಿವಾಲಯಕ್ಕೆ ಜನವರಿಯಲ್ಲಿ ಪತ್ರ ಬರೆದಿದ್ದಾರೆ. ಅವರು ಎತ್ತಿರುವ ಆಕ್ಷೇಪಗಳ ಕುರಿತು ಕರ್ನಾಟಕವು ಸಮಗ್ರ ಅಭಿಪ್ರಾಯ ನೀಡಬೇಕು’ ಎಂದು ಅವರು ಸೂಚಿಸಿದ್ದಾರೆ. 

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತಾವನೆಗೆ ಅನುಮೋದನೆ ನೀಡಲು ಅಗತ್ಯವಾದ ವಿವರಗಳು ಹಾಗೂ ಮಾಹಿತಿ ನೀಡಬೇಕು. ಯಾವುದೇ ಅರಣ್ಯ ಕಾನೂನು / ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಬೇಕು ಎಂದೂ ತಾಕೀತು ಮಾಡಿದ್ದಾರೆ. 

ಇನ್ನೊಂದೆಡೆ, ಈ ಯೋಜನೆಗೆ ವನ್ಯಜೀವಿ ಅನುಮೋದನೆಯನ್ನೂ ಪಡೆಯಬೇಕಿದೆ. ಈ ಪ್ರಸ್ತಾವನೆಗೆ ರಾಜ್ಯ ವನ್ಯಜೀವಿ ಮಂಡಳಿ ಈಗಾಗಲೇ ಒಪ್ಪಿಗೆ ನೀಡಿದೆ. ಆದರೆ, ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರವು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಗೆ ಇಲ್ಲಿಯವರೆಗೂ ಕಳುಹಿಸಿಲ್ಲ. ಇದರಿಂದಾಗಿ, ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಬಂಡೂರಾ ನಾಲಾ ತಿರುವು ಯೋಜನೆಗೆ 22.80 ಹೆಕ್ಟೇರ್‌ ಅರಣ್ಯ ಬಳಸಿಕೊಳ್ಳಲು ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರವು ವರ್ಷದ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಸಹ ಸಚಿವಾಲಯ ಒಪ್ಪಿಗೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT