ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ದರೋಡೆಕೋರನ ಬಂಧನ- ₹50 ಲಕ್ಷ ಮೌಲ್ಯದ ಆಭರಣ ವಶ

Last Updated 11 ಸೆಪ್ಟೆಂಬರ್ 2018, 11:58 IST
ಅಕ್ಷರ ಗಾತ್ರ

ಮಂಡ್ಯ: ವೃದ್ಧ ಮಹಿಳೆಯರಿಗೆ ಡ್ರಾಪ್‌ ಕೊಡುವ ನೆಪದಲ್ಲಿ ಕಾರಿನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಿನ್ನಾಭರಣ ದರೋಡೆ ಮಾಡುತ್ತಿದ್ದ ಬೆಂಗಳೂರು ಮೂಲದ ದರೋಡೆಕೋರನನ್ನು ಪೊಲೀಸರು ಬಂಧಿಸಿದ್ದು ಆತನಿಂದ ₹ 50 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌ ಈ ಕುರಿತು ಮಾಹಿತಿ ನೀಡಿದರು.

‘ಆರೋಪಿಯು ಬಿ.ಸೋಮಶೇಖರ್‌, ಸೂರ್ಯ, ಸೋಮು, ಸೋಮಶೇಖರಚಾರಿ, ಸುರೇಶ್‌ ಮುಂತಾದ ಹೆಸರುಗಳಿಂದ ದರೋಡೆ ಮಾಡುತ್ತಿದ್ದ. ಆತನ ಮೇಲೆ ಮಂಡ್ಯ, ತುಮಕೂರು, ರಾಮನಗರ, ಹಾಸನ ಪೊಲೀಸ್‌ ಠಾಣೆಗಳಲ್ಲಿ 45 ದರೋಡೆ ಪ್ರಕರಣ ದಾಖಲಾಗಿವೆ. ಸದ್ಯ 22 ಪ್ರಕರಣಗಳನ್ನು ಭೇದಿಸಿ ಆಭರಣ ವಶಕ್ಕೆ ಪಡೆಯಲಾಗಿದೆ. ನಾಗಮಂಗಲ ಹಾಗೂ ಬೆಳ್ಳೂರು ಠಾಣೆ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ’ ಎಂದರು.

‘ವೃದ್ಧ ಮಹಿಳೆಯರನ್ನು ಪರಿಚಯಸ್ಥನಂತೆ ನಂಬಿಸಿ ಕಾರಿಗೆ ಹತ್ತಿಸಿಕೊಳ್ಳುತ್ತಿದ್ದ. ಮಹಿಳೆಯರ ಮಕ್ಕಳು, ಸಂಬಂಧಿಕರು ತನಗೆ ಪರಿಚಯ ಇರುವುದಾಗಿ ಹೇಳಿ ಆತ್ಮೀಯತೆ ಬೆಳೆಸಿಕೊಳ್ಳುತ್ತಿದ್ದ. ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕೊಲೆ ಬೆದರಿಕೆ ಹಾಕಿ ಆಭರಣ ಕಿತ್ತು ಪರಾರಿಯಾಗುತ್ತಿದ್ದ. ಈಗಾಗಲೇ ದರೋಡೆ ಪ್ರಕರಣದಲ್ಲಿ ಮೈಸೂರು ಕೇಂದ್ರ ಕಾರಾಗೃಹದಲ್ಲಿ 5 ವರ್ಷ ಶಿಕ್ಷೆ ಅನುಭವಿಸಿ 2017 ರಲ್ಲಿ ಬಿಡುಗಡೆಯಾಗಿದ್ದ. ನಂತರವೂ ದರೋಡೆ ಮುಂದುವರಿಸಿದ್ದ’ ಎಂದರು.

‘ಸುಲಿಗೆ ಮಾಡಿದ ಆಭರಣಗಳನ್ನು ಮಾರಾಟ ಮಾಡದೆ ಗಿರವಿ ಇಡುತ್ತಿದ್ದ. ಬೆಂಗಳೂರಿನ ಟಿಂಬರ್‌ಯಾರ್ಡ್‌ ಲೇಔಟ್‌ ನಿವಾಸಿಯಾಗಿದ್ದ ಈತನಿಗೆ 34 ವರ್ಷ ವಯಸ್ಸಾಗಿದೆ. ಸದ್ಯ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ವಾಸವಾಗಿದ್ದ. ಈತನ ಚಟುವಟಿಕೆ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಸಾಕ್ಷ್ಯ ಸಮೇತ ಬಂಧಿಸಿದ್ದಾರೆ. ಡಿವೈಎಸ್ಪಿ ಎಚ್.ಎನ್.ಧರ್ಮೇಂದ್ರ, ಸರ್ಕಲ್‌ ಇನ್‌ಸ್ಪೆಕ್ಟರ್‌ ಡಿ.ಪಿ.ಧನಂಜಯ, ಬೆಳ್ಳೂರು ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಎಚ್.ಪಿ.ಶರತ್‌ಕುಮಾರ್‌, ನಾಗಮಂಗಲ ಗ್ರಾಮಾಂತರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಬಿ.ಚಿದಾನಂದ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು’ ಎಂದು ಹೇಳಿದರು. ಎಎಸ್‌ಪಿ ಎನ್.ಲಾವಣ್ಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT