ಮಂಡ್ಯ: ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರಿನ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಂಡ್ಯ ಜಿಲ್ಲೆಯ ಕೊಪ್ಪ ಗ್ರಾಮದ ಕೆ.ಎಸ್. ರಾಜಣ್ಣ ಈ ಮೂವರಿಗೆ ಮಂಡ್ಯ ವಿಶ್ವವಿದ್ಯಾಲಯದಿಂದ ‘ಗೌರವ ಡಾಕ್ಟರೇಟ್’ ನೀಡಲು ಆಯ್ಕೆ ಮಾಡಲಾಗಿದೆ.
ಸೆ.13ರಂದು ಬೆಳಿಗ್ಗೆ 11.30ಕ್ಕೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿರುವ ಮಂಡ್ಯ ವಿಶ್ವವಿದ್ಯಾಲಯದ ಮೊದಲನೇ ಮತ್ತು ಎರಡನೇ ಘಟಿಕೋತ್ಸವ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹಾಗೂ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ್ ಭಾಗವಹಿಸಲಿದ್ದಾರೆ ಎಂದು ಮಂಡ್ಯ ವಿವಿ ಕುಲಪತಿ ಪ್ರೊ.ಪುಟ್ಟರಾಜು ತಿಳಿಸಿದ್ದಾರೆ.