ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಗಳಲ್ಲಿ ಹವಾಮಾನ ವೈಪರೀತ್ಯ ತಡೆಗೆ ಕ್ರಮ: ಡಾ.ಎಂ.ವಿ.ರಾಜೀವ್‌ಗೌಡ

Published 11 ಮಾರ್ಚ್ 2024, 15:30 IST
Last Updated 11 ಮಾರ್ಚ್ 2024, 15:30 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ದಿನಗಳಲ್ಲಿ ಹವಾಮಾನ ವೈಪರೀತ್ಯಗಳಿಂದ ಉಂಟಾಗುವ ಪರಿಣಾಮಗಳನ್ನು ತಡೆದು ಕರ್ನಾಟಕ ನಗರಗಳನ್ನು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಬದ್ಧವಾಗಿದೆ ಎಂದು ಆಯೋಗದ ಉಪಾಧ್ಯಕ್ಷ ಡಾ.ಎಂ.ವಿ.ರಾಜೀವ್‌ಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಸಂಬಂಧ ಕ್ಲೈಮೇಟ್‌ ರೈಸ್ ಅಲಯನ್ಸ್‌ ಸಂಘಟನೆಯ ಜತೆಗೆ ಅಧ್ಯಯನ ನಡೆಸುವ ಉದ್ದೇಶದಿಂದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು. 

ನಗರಗಳ ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ವಿವಿಧ ಸಂಸ್ಥೆಗಳ ಜ್ಞಾನ, ಸಂಶೋಧನೆ, ವಿಶ್ಲೇಷಣೆ ಮತ್ತು ಆಳವಾದ ಅನುಭವ ಸಹಕಾರಿಯಾಗಲಿದೆ. ಇದಕ್ಕೆ ಪೂರಕವಾಗಿ ಕಾರ್ಯಸೂಚಿಯೊಂದನ್ನು ರೂಪಿಸಲಾಗುವುದು ಎಂದರು.

ಕರ್ನಾಟಕದ ಎಲ್ಲ ನಗರಗಳಲ್ಲಿ ಸುಸ್ಥಿರ ಮತ್ತು ಏಕೀಕೃತ ನೀರಿನ ನಿರ್ವಹಣೆಯ ಮೂಲಕ ನೀರಿನ ಅಭಾವವನ್ನು ನೀಗಿಸಬಹುದು. ಮುಖ್ಯವಾಗಿ ಕೆರೆಗಳನ್ನು ರಕ್ಷಿಸುವುದು, ನೀರಿನ ಗುಣಮಟ್ಟವನ್ನು ಹೆಚ್ಚಿಸುವುದು, ಮಳೆ ನೀರಿನ ಸಂಗ್ರಹದ ವಿಧಾನಗಳು, ಕೌಶಲ, ವೆಚ್ಚ ಮತ್ತು ಜ್ಞಾನದಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರಬಹುದಾಗಿದೆ.  ಎಲ್ಲರೂ ಈ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ನಗರಗಳಲ್ಲಿ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡುವ ಮತ್ತು ವಾಸಯೋಗ್ಯ ನೆರೆ ಹೊರೆಯನ್ನು ಕಲ್ಪಿಸುವ ಯೋಜನೆಗಳು ಹಾಗೂ ನಗರದ ತಾಪಮಾನ ಹಾಗೂ ಪ್ರವಾಹದ ನಿರ್ವಹಣೆಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸಲಾಗುವುದು ಎಂದರು.

ಸಂಪನ್ಮೂಲದ ದಕ್ಷತೆಯನ್ನು ಹೆಚ್ಚಿಸುವುದರ ಜತೆಗೆ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಬಗ್ಗೆ ಆದ್ಯತೆ ನೀಡಲಾಗಿದೆ. ಹವಾಮಾನ ವೈಪರೀತ್ಯಗಳಿಂದ ಪಾರಾಗುವಂತೆ ನಗರಗಳನ್ನು ಸಜ್ಜುಗೊಳಿಸಿ ಸುಸ್ಥಿರ ನಗರಗಳ ನಿರ್ಮಾಣಕ್ಕಾಗಿ ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ವಿಭಾಗ ಆರಂಭಿಸಲಾಗುವುದು ಎಂದು ರಾಜೀವ್‌ಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT