ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನಷ್ಟು ವೈದ್ಯಕೀಯ ಕಾಲೇಜುಗಳಿಗೆ ಸಂಕಷ್ಟ?

ಸೀಟು ಬ್ಲಾಕಿಂಗ್‌ ಬೆನ್ನುಹತ್ತಿರುವ ಐ.ಟಿ ಇಲಾಖೆ ಅಧಿಕಾರಿಗಳು
Last Updated 28 ಅಕ್ಟೋಬರ್ 2019, 19:13 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯಕೀಯ ಸೀಟು ಬ್ಲಾಕಿಂಗ್‌ ಹಗರಣ ಕುರಿತ ತನಿಖೆಯನ್ನು ಚುರುಕುಗೊಳಿಸಿರುವ ಆದಾಯ ತೆರಿಗೆ ಇಲಾಖೆ (ಐ.ಟಿ), ಎಲ್ಲ ಖಾಸಗಿ ಮೆಡಿಕಲ್‌ ಕಾಲೇಜುಗಳು ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳ ಪ್ರವೇಶ ಪ್ರಕ್ರಿಯೆಗಳನ್ನು ಪರಿಶೀಲನೆಗೆ ಒಳಪಡಿಸಲು ಉದ್ದೇಶಿಸಿದೆ.

ಹಿಂದಿನ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಈ. ತುಕಾರಾಂ ಅವರೇ ಇದನ್ನು ‘ಸೀಟ್ ಬ್ಲಾಕಿಂಗ್‌’ ಎಂದು ಹೆಸರಿಸಿದ್ದರು. ಆದರೆ ರಾಜ್ಯ ಸರ್ಕಾರ ಮಾತ್ರ ಯಾವುದೇ ಕ್ರಮಕ್ಕೂ ಮುಂದಾಗದೆ ತಟಸ್ಥವಾಗಿ ಉಳಿದಿದೆ.

ಹಿರಿಯ ಕಾಂಗ್ರೆಸ್‌ ಮುಖಂಡ ಡಾ. ಜಿ. ಪರಮೇಶ್ವರ ಅವರ ಸಿದ್ಧಾರ್ಥ ಶಿಕ್ಷಣ ಟ್ರಸ್ಟ್‌ ಹಾಗೂ ಮಾಜಿ ಸಚಿವ ಆರ್‌.ಎಲ್‌. ಜಾಲಪ್ಪ ಅವರಿಗೆ ಸೇರಿದ ದೇವರಾಜ ಅರಸು ಉನ್ನತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಗಳ ಮೇಲೆ ಈಚೆಗೆ ದಾಳಿ ನಡೆಸಿದ ಐ.ಟಿ ಇಲಾಖೆ ವೈದ್ಯಕೀಯ ಸೀಟು ಹಗರಣವನ್ನು ಬಯಲಿಗೆ ಎಳೆದಿತ್ತು. ಈ ದಾಳಿಯ ಬಳಿಕ ಎಲ್ಲ ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಡೀಮ್ಡ್‌ ವಿ.ವಿಗಳ ಮೇಲೆ ಐ.ಟಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.

‘ನಾವು ಎಲ್ಲ ಖಾಸಗಿ ವೈದ್ಯಕೀಯ ಕಾಲೇಜುಗಳು ಅದರಲ್ಲೂ ಡೀಮ್ಡ್‌ ವಿಶ್ವವಿದ್ಯಾಲಯಗಳ ಸೀಟು ಬ್ಲಾಕಿಂಗ್‌ ಮೇಲೆ ನಿಗಾ ಇಟ್ಟಿದ್ದೇವೆ. ಪ್ರವೇಶ ಪ್ರಕ್ರಿಯೆ ಅವ್ಯವಹಾರಗಳನ್ನು ಬಯಲಿಗೆ ಎಳೆಯಲಿದ್ದೇವೆ. ಈ ಸಂಬಂಧ ಈಗಾಗಲೇ ಮಾಹಿತಿ ಕಲೆ ಹಾಕಿದ್ದೇವೆ’ ಎಂದು ಉನ್ನತ ಮೂಲಗಳು ತಿಳಿಸಿವೆ.

‘ವೈದ್ಯಕೀಯ ಪ್ರವೇಶಕ್ಕೆ ನಡೆಸುವ ಅಂತಿಮ ಸುತ್ತಿನ ಪ್ರಕ್ರಿಯೆ (ಮಾಪ್‌ ಅಪ್‌ ರೌಂಡ್‌) ಬಳಿಕ ಹಿಂತಿರುಗಿಸುವ ಸೀಟುಗಳಲ್ಲಿ ಡಜನ್‌, ಎರಡು ಡಜನ್‌, ಮೂರು ಡಜನ್‌ ಸೀಟುಗಳನ್ನು ಅಕ್ರಮವಾಗಿ ಭಾರಿ ಹಣಕ್ಕೆ ಮಾರಾಟ ಮಾಡಲಾಗಿದೆ’ ಎಂದೂ ಮೂಲಗಳು ಹೇಳಿವೆ.

ರಾಜ್ಯದಲ್ಲಿ ಒಟ್ಟು 59 ಮೆಡಿಕಲ್‌ ಕಾಲೇಜುಗಳಿದ್ದು, ಇದರಲ್ಲಿ 29 ಖಾಸಗಿ ಕಾಲೇಜುಗಳು ಮತ್ತು 11 ಡೀಮ್ಡ್‌ ವಿ.ವಿಗಳೂ ಸೇರಿವೆ. ಈ ಪೈಕಿ 17 ಕಾಲೇಜುಗಳಲ್ಲಿ 2018–19ನೇ ಸಾಲಿನ ಪ್ರವೇಶದಲ್ಲಿ ಅಕ್ರಮ ನಡೆದಿರುವ ಬಗ್ಗೆ ವರದಿಯಾಗಿತ್ತು. ಇದರಲ್ಲಿ ಸಿದ್ಧಾರ್ಥ ಶಿಕ್ಷಣ ಟ್ರಸ್ಟ್‌ ಅಥವಾ ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಹೆಸರು ಸೇರಿರಲಿಲ್ಲ.

ವಿಚಾರಣೆಗೆ ಸರ್ಕಾರದ ನಿರಾಸಕ್ತಿ?

ಜೂನ್‌ 4ರಂದು ವೈದ್ಯಕೀಯ ಇಲಾಖೆ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸೇರಿದ್ದ ಸಭೆಯಲ್ಲಿ ಸೀಟ್ ಬ್ಲಾಕಿಂಗ್‌ ಹಗರಣದ ಬಗ್ಗೆ ವಿಸ್ತೃತ ತನಿಖೆ ನಡೆಸುವಂತೆ ಶಿಫಾರಸು ಮಾಡಲಾಗಿತ್ತು. ಇಷ್ಟಾದರೂ ಈ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ.

ಸರ್ಕಾರಿ ಸೀಟುಗಳನ್ನು ಯಾರೂ ಬಿಡುವುದಿಲ್ಲ. ಸೀಟ್‌ ಬ್ಲಾಕಿಂಗ್‌ ಎಂಬುದು ತಪ್ಪು ಕಲ್ಪನೆ. ಅಂತಿಮ ಕ್ಷಣದಲ್ಲಿ ಹಿಂತಿರುಗಿಸುವ ಕೆಲವು ಸ್ಟ್ರೇ ಸೀಟುಗಳನ್ನು ಅರ್ಹತೆ ಪ್ರಕಾರವೇ ತುಂಬಲಾಗುತ್ತದೆ
-ಡಾ. ಪಿ.ಜಿ. ಗಿರೀಶ್‌, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT