ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಎಂಕೆ ಕಚೇರಿ ಮುಂದೆ ಸಿಎಂ, ಡಿಸಿಎಂ ಧರಣಿ ಮಾಡಲಿ: ಆರ್.ಅಶೋಕ

Published 21 ಮಾರ್ಚ್ 2024, 14:20 IST
Last Updated 21 ಮಾರ್ಚ್ 2024, 14:20 IST
ಅಕ್ಷರ ಗಾತ್ರ

ಬೆಂಗಳೂರು: ‘ಮೇಕೆದಾಟು ಯೋಜನೆ ಜಾರಿಯನ್ನು ತಡೆಯುವುದಾಗಿ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ್ಮ ನಿಲುವು ಬಹಿರಂಗಪಡಿಸಬೇಕು. ಮೈತ್ರಿ ಮುಖ್ಯವೋ ಅಥವಾ ರಾಜ್ಯದ ಹಿತ ಮುಖ್ಯವೋ ಎಂಬುದನ್ನು ತಿಳಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಒತ್ತಾಯಿಸಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಮೇಕೆದಾಟು ಯೋಜನೆಗೆ ತಮಿಳುನಾಡಿನ ಅಪ್ಪಣೆ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಪಕ್ಷದ 135 ಶಾಸಕರೊಂದಿಗೆ ಚೆನ್ನೈನ ಡಿಎಂಕೆ ಕಚೇರಿ ಮುಂದೆ ‘ನಮ್ಮ ನೀರು ನಮ್ಮ ಹಕ್ಕು’ ಘೋಷಣೆಯೊಂದಿಗೆ ಹೋರಾಟ ಮಾಡಲಿ’ ಎಂದು ವ್ಯಂಗ್ಯವಾಡಿದರು.

‘ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಕೋವಿಡ್‌ ಸಮಯದಲ್ಲಿ ಮೇಕೆದಾಟು ಯೋಜನೆಗಾಗಿ ‘ನಮ್ಮ ನೀರು ನಮ್ಮ ಹಕ್ಕು’ ಹೆಸರಿನಲ್ಲಿ ಪಾದಯಾತ್ರೆ ಮಾಡಿದ್ದರು. ಆದರೆ, ಇವರ ಮೈತ್ರಿಕೂಟದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ತಮ್ಮ ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆ ಜಾರಿಯಾಗಲು ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ. ಅಂದು ಡಿ.ಕೆ.ಶಿವಕುಮಾರ್ ಅವರು ಮೇಕೆದಾಟುವಿನಲ್ಲಿ ಸ್ನಾನ ಮಾಡಿದ್ದರು. ಆದರೆ ಈಗ ಸ್ನಾನಕ್ಕಲ್ಲ, ಮುಖ ತೊಳೆಯುವುದಕ್ಕೂ ನೀರಿಲ್ಲ’ ಎಂದು ಹೇಳಿದರು.

‘ಬೆಂಗಳೂರಿನ ಜನರು ಕುಡಿಯಲು ನೀರಿಲ್ಲದೆ ವಲಸೆ ಹೋಗುತ್ತಿದ್ದಾರೆ. ಇಂತಹ ಸ್ಥಿತಿಯನ್ನು ಈವರೆಗೆ ನಾನಂತೂ ನೋಡಿಲ್ಲ. ಕರ್ನಾಟಕ ಕಾಂಗ್ರೆಸ್‌ಗೆ ‘ಇಂಡಿಯಾ’ ಒಕ್ಕೂಟ ಮುಖ್ಯವೋ, ರಾಜ್ಯದ ಹಿತ ಮುಖ್ಯವೋ ಎಂಬುದನ್ನು ಈ ಮೂಲಕ ಸಾಬೀತುಪಡಿಸಬೇಕು. ಮೇಕೆದಾಟು ಬಗ್ಗೆ ನಿಜವಾದ ಕಾಳಜಿ ಇದ್ದರೆ ಮಾತನಾಡಿ’ ಎಂದು ಅಶೋಕ ಸವಾಲು ಹಾಕಿದರು.

‘ಡಿ.ಕೆ.ಶಿವಕುಮಾರ್ ಪಾದಯಾತ್ರೆ ವೇಳೆ ಮೇಕೆದಾಟುವಿನಲ್ಲಿ ತರ್ಪಣ ಬಿಟ್ಟಿದ್ದರು. ಈ ಮೂಲಕ ರಾಜ್ಯದ ಜನರಿಗೆ ಅನ್ಯಾಯದ ತರ್ಪಣ ನೀಡಿದ್ದಾರೆ. ಕಾಂಗ್ರೆಸ್‌ಗೆ ಧೈರ್ಯವಿದ್ದರೆ ಡಿಎಂಕೆ ಪ್ರಣಾಳಿಕೆಯಿಂದ ಮೇಕೆದಾಟಿನ ಅಂಶವನ್ನು ತೆಗೆದುಹಾಕಿಸಲು ಪ್ರಯತ್ನ ಮಾಡಲಿ. ಅಲ್ಲಿಯವರೆಗೆ ಕೇಂದ್ರ ಸರ್ಕಾರದ ಬಗ್ಗೆ ಆರೋಪ ಮಾಡುವ ನೈತಿಕತೆ ಕಾಂಗ್ರೆಸ್‌ ನಾಯಕರಿಗೆ ಇಲ್ಲ’ ಎಂದೂ ತಿಳಿಸಿದರು.

‘ಹಿಂದೆ ಮಹದಾಯಿ ನದಿ ನೀರಿನ ವಿವಾದದ ಸಂಬಂಧ ಗೋವಾದಲ್ಲಿ ಸೋನಿಯಾ ಗಾಂಧಿಯವರು ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಕೊಡುವುದಿಲ್ಲ ಎಂದು ಹೇಳಿದ್ದರು. ಈಗ ಮತ್ತೊಮ್ಮೆ ಡಿಎಂಕೆ ಮೂಲಕ ಈ ಮಾತನ್ನಾಡಿಸಿದ್ದಾರೆ’ ಎಂದು ಅವರು ಹೇಳಿದರು.

‘ರಾಜ್ಯದಲ್ಲಿ ದುರ್ಬಲ ಸಿಎಂ ಇರುವುದರಿಂದಲೇ ಸರ್ಕಾರವೂ ದುರ್ಬಲವಾಗಿದೆ. ಈ ದೌರ್ಬಲ್ಯವನ್ನು ಉಪಯೋಗಿಸಿ ಇಂಡಿಯಾ ಒಕ್ಕೂಟದ ಮುಖ್ಯಪಾಲುದಾರ ಪಕ್ಷ ಡಿಎಂಕೆ ತನ್ನ ಪ್ರಣಾಳಿಕೆಯ ಮೂಲಕ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಎಂಕೆ ಪ್ರಣಾಳಿಕೆ ಕುರಿತು ಕರ್ನಾಟಕ ಸರ್ಕಾರ ಕಾಂಗ್ರೆಸ್‌ ಪಕ್ಷ ತುಟಿ ಬಿಚ್ಚದೇ ಮೌನವಹಿಸಿದೆ. ಇದು ಸಮ್ಮತಿಯ ಸೂಚನೆಯೇ
ಅಶ್ವತ್ಥನಾರಾಯಣಗೌಡ ವಕ್ತಾರ ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT