ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಕಿಯರಿಗೆ ಸಲಾಂ: ಸಾವಿರ ಹೆರಿಗೆ ಮಾಡಿಸಿದ ‌ ಸೂಲಗಿತ್ತಿ ಬೇಬಿ ಡಿ.ರೋಸ್

Last Updated 15 ಅಕ್ಟೋಬರ್ 2018, 1:58 IST
ಅಕ್ಷರ ಗಾತ್ರ

ಕಳಸ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರು ಮತ್ತು ಶುಶ್ರೂಷಕಿಯರನ್ನು ನೇಮಿಸಲು ಉಪವಾಸ ಸತ್ಯಾಗ್ರಹ ನಡೆಸುವ ಅನಿವಾರ್ಯ ಒಂದೆಡೆಯಾದರೆ, ಮತ್ತೊಂದೆಡೆ ಎಡೂರಿನಂತಹ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯೊಬ್ಬರು ವೈದ್ಯಕೀಯ ಸೇವೆಯನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸುವ ಮೂಲಕ ಬಡವರ ಪಾಲಿಗೆ ಅಕ್ಷರಶಃ ಸಂಜೀವಿನಿಯಾಗಿದ್ದಾರೆ.

ಕೆರದಿಡಿಗೆ ಪ್ರದೇಶದಲ್ಲಿ ಪುಟ್ಟ ಮನೆ ಹೊಂದಿರುವ 75 ವರ್ಷದ ಬೇಬಿ ಡಿ. ರೋಸ್ ಅಸಾಧಾರಣಾ ಮಹಿಳೆ. ಚಹಾ, ಕಾಫಿ ತೋಟ ಮತ್ತು ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಾ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಇವರು, ತನ್ನ ಅಜ್ಜಿಯಿಂದ ಸೂಲಗಿತ್ತಿಯ ಕೆಲಸ ಮತ್ತು ನಾಟಿ ಔಷಧಿಯ ಜ್ಞಾನ ಪಡೆದಿದ್ದರು. ಈತನಕ ಸಾವಿರಾರು ಹೆರಿಗೆಗಳನ್ನು ಮಾಡಿಸಿರುವ ಇವರು, ಗ್ರಾಮದಲ್ಲಿ 'ಅಜ್ಜಿ' ಎಂದೇ ಪ್ರಸಿದ್ಧಿ.

ತಮಿಳುನಾಡಿನಿಂದ 60 ವರ್ಷದ ಹಿಂದೆ ಬೇಬಿ ತನ್ನ ತಂದೆ ಮತ್ತು ಅಜ್ಜಿ ಜೊತೆ ಅಲಗೇಶ್ವರ ಚಹಾ ತೋಟಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದರು. ಆ ನಂತರ 4 ದಶಕದ ಹಿಂದೆ ಎಡೂರು ಗ್ರಾಮಕ್ಕೆ ಬಂದರು. ಇಲ್ಲಿ ಪತಿ ಜತೆ ಪುಟ್ಟ ಮನೆಯಲ್ಲಿ ನೆಲೆಸಿದ್ದ ಅವರು, 9 ಮಕ್ಕಳನ್ನೂ ಪಡೆದರು. ಪತಿಯ ಅಕಾಲಿಕ ಸಾವಿನ ನಂತರ ದೊಡ್ಡ ಕುಟುಂಬದ ಸಂಪೂರ್ಣ ಜವಾಬ್ದಾರಿ ಮೈಮೇಲೆ ಬಿದ್ದರೂ ಕಂಗೆಡದ ಅವರು, ಸೂಲಗಿತ್ತಿ ಕೆಲಸವನ್ನು ಅತ್ಯಂತ ವೃತ್ತಿಪರವಾಗಿ ನಡೆಸಿಕೊಂಡು ಬಂದಿದ್ದಾರೆ. ಹಾವು ಕಡಿತ ಮತ್ತು ಜಾಂಡೀಸ್‍ನಿಂದ ಬಳಲುತ್ತಿದ್ದ ನೂರಾರು ಜೀವಗಳನ್ನು ಉಳಿಸಿದ ಶ್ರೇಯಸ್ಸು ಬೇಬಿ ಅವರಿಗೆ ಸಲ್ಲುತ್ತದೆ.

ತಮ್ಮ ಕೂಲಿ ಕೆಲಸದ ಆದಾಯದಿಂದ ಮನೆಯನ್ನು ನಿರ್ವಹಿತ್ತಿದ್ದ ಬೇಬಿ ಅವರು, ಎಂದಿಗೂ ಸೂಲಗಿತ್ತಿ ಕೆಲಸವನ್ನು ಆದಾಯದ ಮೂಲ ಎಂದು ಪರಿಗಣಿಸಿಲ್ಲ. ತನ್ನ ಸೇವೆಗೆ ಯಾರಾದರೂ ಸೀರೆ ಕೊಟ್ಟರೆ, ಅಕ್ಕಿ, ಅಷ್ಟಿಷ್ಟು ಹಣ ಕೊಟ್ಟರೆ ಅದನ್ನೇ ಸಂತಸದಿಂದ ಸ್ವೀಕರಿಸುವವರು. ತಾನು ಹೆರಿಗೆ ಮಾಡಿಸಿದ ಮಗು ಬೆಳೆದು ಸಂತಸದಿಂದ ನಕ್ಕರೆ ಸಾಕು, ನನ್ನ ಕಷ್ಟಗಳೆಲ್ಲವೂ ಕಳೆದುಹೋಗುತ್ತದೆ ಎನ್ನುವ ಕೋಮಲ ಭಾವನೆ ಅವರದು.

‘30 ವರ್ಷದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದೇನೆ. ಈ ಕೆಲಸದಲ್ಲಿ ತುಂಬ ಖುಷಿ ಪಟ್ಟಿದ್ದೇನೆ. ಜೀವನ ಸಾರ್ಥಕವಾಗಿದೆ' ಎಂದು ಸಂತೃಪ್ತಿಯಿಂದ ಹೇಳುವ ಬೇಬಿ ಡಿ. ರೋಸ್ ಅವರಿಗೆ ಈಗ ಕಣ್ಣು ಮಂಜಾಗಿದೆ. ಇದರಿಂದಾಗಿ ಈಗ ಸೂಲಗಿತ್ತಿ ಕೆಲಸವನ್ನು ನಿಲ್ಲಿಸಿರುವ ಅವರು, ಮಗಳ ಮನೆಯಲ್ಲಿ ಮೊಮ್ಮಕ್ಕಳನ್ನು ಸಲಹುತ್ತಾ ಕಾಲ ಕಳೆಯುತ್ತಿದ್ದಾರೆ.

'ಅಜ್ಜಿ ಮಾಡಿರುವ ಸೇವೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅಜ್ಜಿಗೆ ಗೊತ್ತಿದ್ದ ನಾಟಿ ಔಷಧಿಯನ್ನೂ ಯಾರಾದರೂ ಕಲಿತರೆ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಆಗುತ್ತದೆ' ಎಂದು ರೋಟರಿ ಅಧ್ಯಕ್ಷ ಮತ್ತು ಎಡೂರು ಗ್ರಾಮದವರೇ ಆದ ಕಿರಣ್ ಶೆಟ್ಟಿ ಹೇಳುತ್ತಾರೆ.

ಇಂತಹ ಅದ್ಭುತ ಸಾಧನೆ ಮಾಡಿರುವ ಬೇಬಿ ಅವರಿಗೆ ಸರ್ಕಾರ ವರ್ಷಗಳ ಹಿಂದೆ ಒಂದು ಹೆರಿಗೆ ಕಿಟ್ ಕೊಟ್ಟಿದ್ದು ಬಿಟ್ಟರೆ ಬೇರೇನೂ ಸೌಲಭ್ಯ ನೀಡಿಲ್ಲ. ತಮ್ಮ ಜೀವನದ ಸಂಧ್ಯಾ ಕಾಲದಲ್ಲಿರುವ ಬೇಬಿ ಅವರಿಗೆ ಆ ಬಗ್ಗೆ ಬೇಸರವೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT