ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖನಿಜ ನಿಕ್ಷೇಪ ಹುಡುಕಲು ರಾಜ್ಯಕ್ಕೆ ಅನುಮತಿ ನೀಡುವಂತೆ ಕೋರಿ ಅರ್ಜಿ: ಸಿದ್ದರಾಮಯ್ಯ

Published 27 ಜುಲೈ 2023, 15:57 IST
Last Updated 27 ಜುಲೈ 2023, 15:57 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಇರಬಹುದಾದ ಖನಿಜ ನಿಕ್ಷೇಪಗಳನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮೂಲಕ  ಹುಡುಕಲು ಅನುಮತಿ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗಣಿ ಮತ್ತು ಭೂವಿಜ್ಞಾನ, ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. 

ಅನುಮತಿ ಸೇರಿದಂತೆ ಗಣಿಗುತ್ತಿಗೆ ಪಡೆದ ಸಂಸ್ಥೆಗಳ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಏಕಗವಾಕ್ಷಿ ವ್ಯವಸ್ಥೆ ರೂಪಿಸಬೇಕು. ರಾಜ್ಯದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅರಣ್ಯ ಇಲಾಖೆಗೆ ಕಳುಹಿಸಿದ ಹಲವು ಕಡತಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ರಾಜ್ಯದಲ್ಲಿ ಗಣಿ ಗುತ್ತಿಗೆ ಪಡೆದಿರುವ ಸಂಸ್ಥೆಗಳಿಗೆ ನಿರಾಕ್ಷೇಪಣಾ ಪತ್ರ, ಅನುಮತಿ ಪತ್ರ ನೀಡಲು ಅರಣ್ಯ ಇಲಾಖೆ ವಿಳಂಬ ಮಾಡುತ್ತಿದೆ. ಇಂತಹ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಕಂದಾಯ, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರು, ಅಧಿಕಾರಿಗಳು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ನಿಯಮಗಳ ಉಲ್ಲಂಘನೆಗಾಗಿ ಕಲ್ಲುಗಣಿ ಗುತ್ತಿಗೆದಾರರಿಗೆ ವಿಧಿಸಿರುವ ದಂಡ ಸಂಗ್ರಹಿಸಲು ಒಟಿಎಸ್‌ (ಒಂದು ಬಾರಿ ತೀರುವಳಿ) ಸೌಲಭ್ಯ ನೀಡುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಸಭೆಯಲ್ಲಿ ಮಂಡಿಸಬೇಕು ಎಂದು ಸೂಚಿಸಿದರು. 

ಗಣಿ ಗುತ್ತಿಗೆ ಪಡೆದ ಸಂಸ್ಥೆಗಳು ಅರಣ್ಯ ಬೆಳೆಸಲು ಪರ್ಯಾಯ ಭೂಮಿ ನೀಡದೆ ಇರುವುದು ವಿಳಂಬಕ್ಕೆ ಕಾರಣ. ಆನೆಗಳು ಮತ್ತಿತರ ಕಾಡು ಪ್ರಾಣಿಗಳ ಉಪಟಳದಿಂದಾಗಿ ಕೃಷಿ ಭೂಮಿ ಮಾರಾಟ ಮಾಡಲು ಮುಂದಾಗಿರುವ ರೈತರಿಂದ ಭೂಮಿ ಖರೀದಿಸಬೇಕು. ನಂತರ ಅರಣ್ಯ ಬೆಳೆಸಲು ನೀಡಬೇಕು ಎಂದು ಸಲಹೆ ನೀಡಿದರು. 

ಹಿಂದೆ ಅಕ್ರಮ ಗಣಿಗಾರಿಕೆಯಿಂದ ವಶಪಡಿಸಿಕೊಂಡಿರುವ 2.7 ದಶಲಕ್ಷ ಮೆಟ್ರಿಕ್‌ ಟನ್‌ ಅದಿರು ಅರಣ್ಯ ಪ್ರದೇಶದಲ್ಲಿದೆ. ಕಾನೂನು ತಜ್ಞರ ಸಲಹೆ ಪಡೆದು ಅದಿರು ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದರು.

ಅರಣ್ಯ ಸಚಿವ ಈಶ್ವರ ಖಂಡ್ರೆ, ತೋಟಗಾರಿಕೆ ಮತ್ತು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ನಾಸಿರ್ ಅಹಮದ್‌  ಇದ್ದರು.

ನಿಗಮದ ಬೈಲಾ ತಿದ್ದುಪಡಿಗೆ ಸೂಚನೆ

ಗಣಿಗಾರಿಕೆ ವಲಯಗಳ ಸಮಗ್ರ ಅಭಿವೃದ್ಧಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಬೈಲಾ ತಿದ್ದುಪಡಿ ಮಾಡಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.

ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಗಣಿಗಾರಿಕೆಯಿಂದ ಹಾನಿಗೆ ಒಳಗಾದ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ರೂಪಿಸಿದ ಕ್ರಿಯಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿಗಮದ ಬೈಲಾ ತಿದ್ದುಪಡಿ ಅಗತ್ಯವಿದೆ. ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ 466 ಗ್ರಾಮಗಳನ್ನು ಗಣಿಗಾರಿಕೆ ಬಾಧಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಈ ಗ್ರಾಮಗಳ ಅಭಿವೃದ್ಧಿಗಾಗಿ ರೂಪಿಸಿದ ₹ 24,996 ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ಸುಪ್ರೀಂಕೋರ್ಟ್‌ ಅನುಮೋದನೆ ನೀಡಿದೆ. ನಿವೃತ್ತ ನ್ಯಾಯಮೂರ್ತಿ ಸುದರ್ಶನ ರೆಡ್ಡಿ ಅವರನ್ನು ಮೇಲುಸ್ತುವಾರಿ ಪ್ರಾಧಿಕಾರವಾಗಿ ನೇಮಕ ಮಾಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT