ಬೆಂಗಳೂರು: ಕಬ್ಬಿಣದ ಅದಿರನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಯುವಜನ ಸಬಲೀಕರಣ, ಕ್ರೀಡೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಖಾತೆ ಸಚಿವ ಬಿ. ನಾಗೇಂದ್ರ ವಿರುದ್ಧ ದಾಖಲಾಗಿರುವ 16 ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ಹೈಕೋರ್ಟ್ ಜುಲೈ 14ಕ್ಕೆ ಮುಂದೂಡಿದೆ.
ಪ್ರಕರಣಗಳನ್ನು ವಜಾ ಮಾಡುವಂತೆ ಕೋರಿ ನಾಗೇಂದ್ರ ಸಲ್ಲಿಸಿದ್ದ ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿ, ‘ಮುಂದಿನ ಮುದ್ದತಿನಲ್ಲಿ ಯಾವುದೇ ಕಾರಣಕ್ಕೂ ವಿಚಾರಣೆಯನ್ನು ಪುನಃ ಮುಂದೂಡುವುದಿಲ್ಲ’ ಎಂದು ಕಟ್ಟುನಿಟ್ಟಾಗಿ ಆದೇಶಿಸಿತು.
‘ಲೋಕಾಯುಕ್ತ ವಿಶೇಷ ತನಿಖಾ ದಳವನ್ನು (ಎಸ್ಐಟಿ) ಪ್ರತಿನಿಧಿಸಿರುವ ವಕೀಲ ಬಿ. ಎಸ್. ಪ್ರಸಾದ್ ಅವರಿಗೆ, ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಇವತ್ತೇ ಪೂರೈಸಲಾಗಿದೆ. ಈ ಸಂಬಂಧ ಸೂಚನೆ ಪಡೆಯಬೇಕಿದೆ ಎಂದು ಅವರು ತಿಳಿಸಿರುವ ಕಾರಣ ಎಲ್ಲ ಪ್ರಕರಣಗಳನ್ನೂ ಜುಲೈ 14ಕ್ಕೆ ಪಟ್ಟಿ ಮಾಡಬೇಕು’ ಎಂದು ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು. ನಾಗೇಂದ್ರ ಪರವಾಗಿ ಹಿರಿಯ ವಕೀಲ ಮೂರ್ತಿ ಡಿ. ನಾಯಕ್ ಹಾಜರಿದ್ದರು. ವಕೀಲ ಜಯಶ್ಯಾಮ್ ಜಯಸಿಂಹ ರಾವ್ ವಕಾಲತ್ತು ವಹಿಸಿದ್ದಾರೆ.
ಪ್ರಕರಣವೇನು?: ಅಕ್ರಮ ಅದಿರು ಮಾರಾಟ ಮತ್ತು ಇತರ ಆರೋಪಗಳಡಿ ನಾಗೇಂದ್ರ ವಿರುದ್ಧ ಒಟ್ಟು 16 ಪ್ರಕರಣಗಳಿವೆ. ಗಣಿ, ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣಗಳ (ಎಂಎಂಡಿಆರ್) ಕಾಯ್ದೆ–1957ರ ಕಲಂ 21 ಮತ್ತು 23ರ ಜೊತೆಗೆ 4 (1), 4 (1ಎ) ಹಾಗೂ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಕಲಂಗಳ ಅಡಿಯಲ್ಲಿ ಈ ಪ್ರಕರಣಗಳನ್ನು ದಾಖಲಿಸಲಾಗಿದೆ.
ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಎಸ್‌ಐಟಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ವಿವಿಧ ಹಂತಗಳಲ್ಲಿ ವಿಚಾರಣೆಗೆ ಒಳಪಟ್ಟಿರುವ ಈ ಪ್ರಕರಣಗಳನ್ನು ವಜಾ ಮಾಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.