ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಕೊಳವೆ ಬಾವಿ: ವರದಿ ಸಲ್ಲಿಸಲು ಸಚಿವರ ಸೂಚನೆ

Published 8 ನವೆಂಬರ್ 2023, 16:34 IST
Last Updated 8 ನವೆಂಬರ್ 2023, 16:34 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಾದ್ಯಂತ ಅನಧಿಕೃತವಾಗಿ ಕೊಳವೆ ಬಾವಿಗಳನ್ನು ಕೊರೆಯುವುದನ್ನು ತಡೆಯಲು ಮುಂದಾಗಿರುವ ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಬೋಸರಾಜು, ಈ ಕುರಿತು ಗುರುವಾರ (ನ.9) ಮಧ್ಯಾಹ್ನದ ಒಳಗೆ ವರದಿ ನೀಡುವಂತೆ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಅಂತರ್ಜಲ ಅಭಿವೃದ್ಧಿ ಮತ್ತು ಅದರ ಸುಸ್ಥಿರ ನಿರ್ವಹಣೆ ವಿಚಾರದಲ್ಲಿ ಮಾಧ್ಯಮಗಳಲ್ಲಿ ಇತ್ತೀಚೆಗೆ ನಕಾರಾತ್ಮಕ ವರದಿಗಳು ಬರುತ್ತಿವೆ. ವಿಶೇಷವಾಗಿ ಬೆಂಗಳೂರು ನಗರದಲ್ಲಿ ಅನಧಿಕೃತವಾಗಿ ಕೊಳವೆ ಬಾವಿಗಳನ್ನು ಕೊರೆಯಲಾಗುತ್ತಿದೆ. ಅಂತರ್ಜಲವನ್ನು ಅನಧಿಕೃತವಾಗಿ ವಿವೇಚನಾರಹಿತವಾಗಿ ಬಳಸುತ್ತಿರುವುದಕ್ಕೆ ಕಡಿವಾಣ ಹಾಕಬೇಕಿದೆ ಎಂದೂ ಅವರು ತಿಳಿಸಿದ್ದಾರೆ.

ಅಂತರ್ಜಲದ ವೃದ್ಧಿಯ ಉದ್ದೇಶದಿಂದ ಅಂತರ್ಜಲ ಅಭಿವೃದ್ಧಿ ನಿರ್ದೇಶನಾಲಯ ಸ್ಥಾಪಿಸಲಾಗಿದೆ. ಈ ಸಂಸ್ಥೆಯ ಇಲ್ಲಿಯವರೆಗೆ ಅನುಷ್ಠಾನಗೊಳಿಸಿದ ಯೋಜನೆಗಳು, ಸಾರ್ವಜನಿಕ ವಲಯದಲ್ಲಿ ಅರಿವು ಮೂಡಿಸಲು ತೆಗೆದುಕೊಂಡ ಕ್ರಮಗಳು, ಬೆಂಗಳೂರು ನಗರದಲ್ಲಿ ಕೊರೆದ ಕೊಳವೆ ಬಾವಿಗಳ ಪರವಾನಗಿ ವಿವರಗಳನ್ನು ಒಳಗೊಂಡ ವರದಿ ನೀಡಬೇಕು ಎಂದು ಕಾರ್ಯದರ್ಶಿಗೆ ಸಚಿವರು ತಿಳಿಸಿದ್ದಾರೆ.

ಅಸಮರ್ಥ ಅಧಿಕಾರಿಗಳ ವಿರುದ್ಧ ಕ್ರಮ: ಅನಧಿಕೃತ ಕೊಳವೆ ಬಾವಿ ಕೊರೆಯುವುದನ್ನು ತಡೆಯಲು ಅಸಮರ್ಥರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಕೂಡಾ ಸಚಿವರು ನಿರ್ಧರಿಸಿದ್ದಾರೆ.

‘ಕೊಳವೆ ಬಾವಿ ಕೊರೆಸಲು ಪ್ರಾಧಿಕಾರದ ಅನುಮತಿ ಅಗತ್ಯ. ಅನುಮತಿ ಇಲ್ಲದೆ ಕೊಳವೆ ಬಾವಿಗಳನ್ನು ಅವ್ಯಾಹತವಾಗಿ ಕೊರೆಸುತ್ತಿರುವುದನ್ನು ತಪ್ಪಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲವೆಂದು ದೂರುಗಳು ಬಂದಿವೆ. ಈ ಬಗ್ಗೆ ಇದೇ 10ರ ಒಳಗೆ ವರದಿ ವಿವರಣೆ ನೀಡಬೇಕು’ ಎಂದು ಕರ್ನಾಟಕ ಅಂತರ್ಜಲ ಪ್ರಾಧಿಕಾರದ ನಿರ್ದೇಶಕರಿಗೆ ಸಚಿವರು ಸೂಚಿಸಿದ್ದಾರೆ.

‘ಬೆಂಗಳೂರು ನಗರದಲ್ಲಿ ಅವ್ಯಾಹತವಾಗಿ ಅನಧಿಕೃತ ಕೊಳವೆ ಬಾವಿಗಳನ್ನು ಕೊರೆಯುತ್ತಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ‘ವೈಟ್‌ ಫೀಲ್ಡ್‌ ಸಿಟಿಜನ್ಸ್‌ ವಾರ್ಡ್ ಕಮಿಟಿ’ ಎಂಬ ಹೆಸರಿನ ‘X’ (ಟ್ವಿಟರ್‌) ಖಾತೆಯಲ್ಲಿ ಮುಖ್ಯಮಂತ್ರಿ ಮತ್ತು ನನ್ನನ್ನು‌ ಉಲ್ಲೇಖಿಸಿ ಹಲವು ದೂರುಗಳು ಬಂದಿವೆ’ ಎಂದೂ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಸಚಿವರ ಸೂಚನೆಯ ಬೆನ್ನಿಗೆ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕೊಳವೆ ಬಾವಿ ಕೊರೆಯುತ್ತಿರುವುದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಂತರ್ಜಲ ಕಚೇರಿಯ ಉಪ ನಿರ್ದೇಶಕರಿಗೆ ಪ್ರಾಧಿಕಾರದ ನಿರ್ದೇಶಕರು ಸೂಚಿಸಿದ್ದಾರೆ. ಅಲ್ಲದೆ, ಈಗಾಗಲೇ ಅನಧಿಕೃತವಾಗಿ ಕೊಳವೆ ಬಾವಿ ಕೊರೆದವರ ಮೇಲೆ ಕರ್ನಾಟಕ ಅಂತರ್ಜಲ ಕಾಯ್ದೆ– 2011 ಮತ್ತು ನಿಯಮಾವಳಿ 2012ರ ಅನ್ವಯ ಕೈಗೊಂಡ ಕ್ರಮದ ಕುರಿತು ಗುರುವಾರದ (ನ. 9) ಒಳಗೆ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT