ಕಾರಟಗಿ (ಕೊಪ್ಪಳ ಜಿಲ್ಲೆ): ಗುತ್ತಿಗೆದಾರರಿಗೆ ನೀಡಬೇಕಾದ ಹಣದ ಬಗ್ಗೆ ಬಿಜೆಪಿ ಹೋರಾಟ ಮಾಡುತ್ತಿರುವುದೇ ಹಾಸ್ಯಾಸ್ಪದ. ಇದರಲ್ಲಿ ಬಸವರಾಜ ಬೊಮ್ಮಾಯಿ ಮತ್ತು ಸಿ.ಟಿ. ರವಿ ಪಾಲುದಾರರಿರಬೇಕು. ಅದಕ್ಕೆ ಹಣ ಬಿಡುಗಡೆಗೆ ಅಷ್ಟೊಂದು ಒತ್ತಾಯ ಮಾಡುತ್ತಿದ್ದಾರೆ ಎಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.
ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಪ್ರಾಮಾಣಿಕ ಗುತ್ತಿಗೆದಾರರಿಗೆ ಹಣ ಬಂದೇ ಬರುತ್ತದೆ. ತನಿಖೆ ಮಾಡುವ ತನಕ ವಿರೋಧ ಪಕ್ಷದವರು ಸುಮ್ಮನಿರಬೇಕು. ಇವರಿಗೆ ಇಷ್ಟೊಂದು ಅವಸರ ಯಾಕೆ?’ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಶಾಸಕರು ವಸೂಲಿಗಿಳಿದಿದ್ದಾರೆ ಎಂಬ ಸಿ.ಟಿ. ರವಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿ ‘ಅವರ ಕಾಲದಲ್ಲಿ ವಸೂಲಿ ಮಾಡಿದ್ದು ಬಹುಶಃ ಈಗ ಅವರಿಗೆ ಮತ್ತೆ ನೆನಪಾಗಿರಬೇಕು. ಕಾಂಗ್ರೆಸ್ ಶಾಸಕರಿಗೆ ಕಮಿಷನ್ ಹೊಡೆಯುವ ಪರಿಸ್ಥಿತಿ ಬಂದಿಲ್ಲ. ಬಿಜೆಪಿ ಅಧಿಕಾರದ ಸಮಯದಲ್ಲಿ ವಸೂಲಿ ಮಾಡಿದ ಸಾಕಷ್ಟು ಉದಾಹರಣೆಗಳು ನಾವು ಕೊಡಬಲ್ಲೆವು’ ಎಂದು ತಿರುಗೇಟು ನೀಡಿದರು.
‘ಸರ್ಕಾರ ಯಾರಿಗೂ ಹಣ ಬಿಡುಗಡೆಯೇ ಮಾಡಿಲ್ಲ. ಇನ್ನು ಶೇ. 15ರಷ್ಟು ಕಮಿಷನ್ ಮಾತು ಎಲ್ಲಿಂದ ಬಂತು. ಕಮಿಷನ್ ಆರೋಪದ ಬಗ್ಗೆ ತನಿಖೆ ನಡೆಸಲು ಈಗಾಗಲೇ ತಂಡ ರಚಿಸಲಾಗಿದ್ದು, ವರದಿ ಬಂದ ಬಳಿ ತಪ್ಪಿತಸ್ಥರು ಯಾರು ಎಂಬುದು ಗೊತ್ತಾಗುತ್ತದೆ. ನಮ್ಮ ಮೇಲೆ ಆರೋಪ ಮಾಡಲು ಬಿಜೆಪಿಯವರಿಗೆ ಬೇರೆ ವಿಷಯಗಳಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.