ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಕ್ಕೆ 10 ಸಾವಿರ ಶಿಕ್ಷಕರ ನೇಮಕ: ಶಿಕ್ಷಣ ಸಚಿವ ಸುರೇಶ್ ಕುಮಾರ್

Last Updated 5 ಫೆಬ್ರುವರಿ 2020, 11:58 IST
ಅಕ್ಷರ ಗಾತ್ರ

ಕೋಲಾರ: ರಾಜ್ಯದಲ್ಲಿ 30 ಸಾವಿರ ಶಿಕ್ಷಕರ ಕೊರತೆಯಿದೆ. 10,650 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿದೆ. ಶೀಘ್ರವೇ 2 ಸಾವಿರ ಶಿಕ್ಷಕರ ನೇಮಕಾತಿ ಆಗಲಿದೆ. ಮುಂದಿನ 3 ವರ್ಷದಲ್ಲಿ 24 ಸಾವಿರ ಶಿಕ್ಷಕರು ನಿವೃತ್ತರಾಗಲಿದ್ದು, 30 ಸಾವಿರ ಶಿಕ್ಷಕರ ನೇಮಕಾತಿಗೆ ಹಣಕಾಸು ಇಲಾಖೆ ಒಪ್ಪಿಗೆ ಕೊಟ್ಟಿದೆ. ವರ್ಷಕ್ಕೆ 10 ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತದೆ’ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಇದಲ್ಲದೆ‘ಶಿಕ್ಷಕರ ಸ್ನೇಹಿ ವರ್ಗಾವಣೆ ಕಾಯ್ದೆ ಜಾರಿಗೆ ಚಿಂತಿಸಿದ್ದು, ವಿಧಾನಮಂಡಲ ಅಧಿವೇಶನದಲ್ಲಿ ಕಾಯ್ದೆಗೆ ಅನುಮೋದನೆ ಸಿಗಲಿದೆ’ ಎಂದು ಅವರು ತಿಳಿಸಿದರು.

ತಾಲ್ಲೂಕಿನ ಕೆಂಬೋಡಿ ಮತ್ತು ವಡಗೂರು ಸರ್ಕಾರಿ ಶಾಲೆಗಳಿಗೆ ಬುಧವಾರ ಭೇಟಿ ನೀಡಿ ಮಾತನಾಡಿ, ಶಿಕ್ಷಕರ ವರ್ಗಾವಣೆ ನೀತಿ ಜಟಿಲವಾಗಿದೆ. ಕಡ್ಡಾಯ ವರ್ಗಾವಣೆ ಹೆಸರಿನಲ್ಲಿ ಶಿಕ್ಷಕರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಇಲಾಖೆಯಲ್ಲಿ ಶಿಕ್ಷಕರ ವರ್ಗಾವಣೆಯು ದಂಧೆಯಾಗಿದೆ. ಇದರಲ್ಲಿ ಪ್ರಭಾವಿಗಳ ಕೈವಾಡವಿದೆ. ವರ್ಗಾವಣೆ ಸ್ಥಳವನ್ನು ಪ್ರಭಾವಿಗಳು ಬ್ಲಾಕ್ ಮಾಡಿಸುತ್ತಿದ್ದು, ಧ್ವನಿ ಇಲ್ಲದವರಿಗೆ ಇದರಿಂದ ತೊಂದರೆಯಾಗುತ್ತಿದೆ. ಈ ಬಗ್ಗೆ ಸಾಕಷ್ಟು ದೂರು ಬಂದಿವೆ’ ಎಂದು ಹೇಳಿದರು.

‘ಇಲಾಖೆಯಲ್ಲಿ ಶೇ 60ರಷ್ಟು ಮಹಿಳಾ ಶಿಕ್ಷಕರಿದ್ದಾರೆ. ನಿವೃತ್ತಿಯ 2 ವರ್ಷ ಮುಂಚೆ ವರ್ಗಾವಣೆ ಮಾಡುವುದಿಲ್ಲ. ವಲಯ ಹಂತದ ವರ್ಗಾವಣೆ ಕೈಬಿಟ್ಟು, ಜಿಲ್ಲೆ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ವರ್ಗಾವಣೆ ಮಾಡಲಾಗುತ್ತದೆ’ ಎಂದು ವಿವರಿಸಿದರು.

‘ಮುಂದಿನ ಶೈಕ್ಷಣಿಕ ವರ್ಷದಲ್ಲಿ ವರ್ಗಾವಣೆ ಸಂಪೂರ್ಣ ಪಾರದರ್ಶಕವಾಗಿ ನಡೆಯಲಿದೆ. ಇಡೀ ವರ್ಷ ವರ್ಗಾವಣೆ ಮಾಡುವುದಿಲ್ಲ. ಮೇ ಅಂತ್ಯದೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ. ಎಲ್ಲಾ ಶಿಕ್ಷಕರು ಜೂನ್‌ನಿಂದಲೇ ಶಾಲೆಗೆ ಹೋಗಬೇಕು’ ಎಂದರು.

ಸಿರಿಧಾನ್ಯದ ಊಟ: ‘ಸಿರಿಧಾನ್ಯಗಳ ಬಳಕೆಯು ಆರೋಗ್ಯಕ್ಕೆ ಒಳ್ಳೆಯದು. ಕೋಲಾರ ಜಿಲ್ಲೆಯ ಕೆಲ ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಮಕ್ಕಳಿಗೆ ಸಿರಿಧಾನ್ಯಗಳ ಊಟ ನೀಡಲಾಗುತ್ತಿದೆ. ಈ ಯೋಜನೆಯ ಸಾಧಕಬಾಧಕದ ಬಗ್ಗೆ ಇಲಾಖೆಯ ಅಕ್ಷರ ದಾಸೋಹ ವಿಭಾಗದ ಅಧಿಕಾರಿಗಳೊಂದಿಗೆ ಚರ್ಚಿಸಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೂ ಸೇವೆ ವಿಸ್ತರಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT