ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುಂಡರನ್ನು ಹೀಗೇ ಬಿಟ್ಟರೆ ದೇಶಕ್ಕೇ ಬೆಂಕಿ ಹತ್ತುತ್ತೆ: ಹೈಕೋರ್ಟ್‌

ಶಿಗ್ಗಾಂವಿ: ಭಗವಾ ಧ್ವಜ ಇಳಿಸುವ ಪಿತೂರಿ ಆರೋಪದ ಅರ್ಜಿ ವಿಚಾರಣೆ‌
Published 5 ಏಪ್ರಿಲ್ 2024, 14:46 IST
Last Updated 5 ಏಪ್ರಿಲ್ 2024, 14:46 IST
ಅಕ್ಷರ ಗಾತ್ರ

ಬೆಂಗಳೂರು: ‘ಯಾವುದೇ ಸಮುದಾಯದಲ್ಲಿ ಎಲ್ಲೋ ನಾಲ್ಕಾರು ಪುಂಡರು ಇರುತ್ತಾರೆ. ಅವರನ್ನು ಗುರುತಿಸಿ ಸರಿಯಾದ ಬಂದೋಬಸ್ತ್ ಮಾಡಿದರೆ ಎಲ್ಲವೂ ನೆಟ್ಟಗಾಗುತ್ತೆ! ಇಲ್ಲಾಂದ್ರೆ, ಇವತ್ತು ಭಗವಾ ಧ್ವಜ ಇಳಿಸ್ತಾರೆ, ನಾಳೆ ರಾಷ್ಟ್ರಧ್ವಜ ಇಳಿಸ್ತಾರೆ, ದೇಶಕ್ಕೇ ಬೆಂಕಿ ಹಚ್ಚುತ್ತಾರೆ...’ ಎಂದು ಹೈಕೋರ್ಟ್‌ ಕಿಡಿ ಕಾರಿದೆ.

‘ಶಿಗ್ಗಾಂವಿ ತಾಲ್ಲೂಕಿನ ಕಾರಡಗಿ ಗ್ರಾಮದ ಜುಮ್ಮಾ ಮಸೀದಿಯ ಪಕ್ಕದಲ್ಲಿರುವ ಸರ್ಕಾರಿ ಶಾಲೆಯ ಎದುರಿಗಿನ ಸಾರ್ವಜನಿಕ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ಇರುವ ಭಗವಾ ಧ್ವಜವನ್ನು ಕೆಳಗಿಳಿಸಿ ಗ್ರಾಮದಲ್ಲಿ ಕೋಮು ಸೌಹಾರ್ದ ಕದಡಲು ಪಿತೂರಿ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹುಲಗೂರು ಪೊಲೀಸರು ನನ್ನ ವಿರುದ್ಧ ದಾಖಲಿಸಿರುವ ದೂರನ್ನು ರದ್ದುಪಡಿಸಬೇಕು’ ಎಂದು ಕೋರಿ ಶಿಗ್ಗಾಂವಿಯ ಮಾಜಿ ಶಾಸಕ ಸೈಯ್ಯದ್‌ ಅಜ್ಜಂಪೀರ್‌ ಖಾದ್ರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಸಂಬಂಧ ಸಲ್ಲಿಸಲಾಗಿದ್ದ ಕ್ರಿಮಿನಲ್ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣ’ಗಳ ವಿಶೇಷ ಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಶುಕ್ರವಾರ ವಿಚಾರಣೆ ನಡೆಸಿದರು. ಈ ವೇಳೆ ಎಫ್‌ಐಆರ್ ಪ್ರತಿಯನ್ನು ವಿಸ್ತೃತವಾಗಿ ಮುಕ್ತ ನ್ಯಾಯಾಲಯದಲ್ಲಿ ಓದಿದ ನ್ಯಾಯಮೂರ್ತಿಗಳು, ‘ಎಫ್‌ಐಆರ್‌ನಲ್ಲಿ ಆರೋಪಿಗಳು ಬಳಸಿರುವ ಅದರಲ್ಲೂ ಮಾಜಿ ಶಾಸಕರ ಭಾಷೆಯನ್ನು ಗಮನಿಸಿದರೆ ಒಂದಷ್ಟೂ ಸೌಜನ್ಯಯುತವಾಗಿಲ್ಲ. ಅವರಲ್ಲಿ ಗೂಂಡಾ ಪ್ರವೃತ್ತಿ ಇದ್ದಂತೆ ಕಾಣುತ್ತಿದೆ. ಇಂತಹವರಿಗೆ ಕರುಣೆ ತೋರಿಸಬಾರದು. ಸಮಾಜದಲ್ಲಿ ನಾಳೆ ಏನಾದರೂ ಏರುಪೇರಾದರೆ ಇಂತಹ ಕಿಡಿಗೇಡಿಗಳಿಂದ ಇಡೀ ಸಮುದಾಯಕ್ಕೇ ಕೆಟ್ಟ ಹೆಸರು ಬರುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿ.ಲಕ್ಷ್ಮಿನಾರಾಯಣ, ‘ದೂರಿನ ಅನ್ವಯ ದಾಖಲಿಸಿರುವ ಆಪಾದನೆಯ ಕಲಂಗಳಿಗೆ ಅನುಗುಣವಾಗಿ ನೋಡಿದರೆ, ಅರ್ಜಿದಾರರು ಎಲ್ಲೂ ಕೋಮು ಪ್ರಚೋದನೆ ಉಂಟು ಮಾಡುವಂತಹ ಮಾತುಗಳನ್ನು ಆಡಿಲ್ಲ’ ಎಂದು ಪ್ರತಿಪಾದಿಸಿದರು. ಆದರೆ ಇದನ್ನು ಒಪ್ಪದ ನ್ಯಾಯಮೂರ್ತಿಗಳು, ಕೇವಲ ಧರ್ಮಗಳ ಮಧ್ಯದಲ್ಲೇ ಪ್ರಚೋದನೆ ಉಂಟು ಮಾಬೇಕೆಂದೇನೂ ಇಲ್ಲ. ಅದು ಎರಡು ಊರು, ಕೇರಿ, ಜಾತಿಗಳ ನಡುವೆಯೂ ಆಗಬಹುದು. ಇದಕ್ಕೆ ಕಲಂ 153 (ಎ) ಅನ್ವಯವಾಗುತ್ತದೆ’ ಎಂದು ಹೇಳಿದರು.

ಸ್ಥಳದಲ್ಲಿ ಧ್ವಜ ಇಳಿಸಿದ್ದಾರೆಯೇ ಇಲ್ಲವೇ ಎಂಬುದನ್ನು ಅರ್ಜಿದಾರರ ಪರ ವಕೀಲರಿಂದ ವಿಚಾರಣೆ ಮಧ್ಯದಲ್ಲೇ ವಾಟ್ಸ್‌ ಆ್ಯಪ್ ಮೂಲಕ ಛಾಯಾಚಿತ್ರ ತರಿಸಿಕೊಂಡು ವೀಕ್ಷಿಸಿದ ನ್ಯಾಯಮೂರ್ತಿಗಳು ಧ್ವಜಕ್ಕೆ ಯಾವುದೇ ಹಾನಿಯಾಗಿಲ್ಲ ಎಂಬುದನ್ನು ಖಾತರಿಪಡಿಸಿಕೊಂಡರು. ತನಿಖೆಗೆ ಮಧ್ಯಂತರ ತಡೆ ನೀಡಿ, ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದರು.

‘ಸಂಭಾಷಣೆ ನಡೆಸಿರುವ ಆರೋಪಿಗಳ ಧ್ವನಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಒಂದು ವೇಳೆ ಆರೋಪಿಗಳು ಯಾವುದಾದರೂ ಅಹಿತಕರ ಘಟನೆಯಲ್ಲಿ ಭಾಗಿಯಾಗಿದ್ದೇ ಆದರೆ ಪೊಲೀಸರು ತಕ್ಷಣವೇ ಅವರನ್ನು ಬಂಧಿಸಬೇಕು. ಆರೋಪಿಯ ಕುಟುಂಬದಲ್ಲಿ ಯಾರಾದರೂ ಕ್ರಿಮಿನಲ್ ಹಿನ್ನೆಲೆ ಉಳ್ಳವರು ಇದ್ದಾರೆಯೇ ಹೇಗೆ ಎಂಬುದನ್ನು ಮುಂದಿನ ವಿಚಾರಣೆ ವೇಳೆಗೆ ತಿಳಿಸಬೇಕು’ ಎಂದು ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌–2 ಬಿ.ಎನ್‌.ಜಗದೀಶ್‌ ಅವರಿಗೆ ಆದೇಶಿಸಿದರು. 

ಪ್ರಕರಣವೇನು: ಹುಲಗೂರು ಪೊಲೀಸ್ ಠಾಣೆಯ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಪರುಶರಾಮ ಕಟ್ಟೀಮನಿ 2024ರ ಮಾರ್ಚ್‌ 3ರಂದು ತಮ್ಮ ಮೊಬೈಲ್‌ ವಾಟ್ಸ್ ಆ್ಯಪ್‌ನಲ್ಲಿ ಬಾತ್ಮಿದಾರರಿಂದ ಆಡಿಯೊ ಸಂದೇಶವೊಂದನ್ನು ಸ್ವೀಕರಿಸಿದ್ದರು.

ಈ ಸಂಭಾಷಣೆಯಲ್ಲಿ, ‘ಕಾರಡಗಿ ಗ್ರಾಮದ ಅಂಜುಮನ್‌ ಸಮಿತಿ ಅಧ್ಯಕ್ಷ ರಬ್ಬಾನಿ ಬಿನ್‌ ಅಬ್ದುಲ್‌ ಮುನಾಫ್‌ ಹಾಗೂ ಮಾಜಿ ಶಾಸಕ ಸೈಯ್ಯದ್‌ ಅಜ್ಜಂಪೀರ್‌ ಖಾದ್ರಿ ಉರ್ದುವಿನಲ್ಲಿ ಪ್ರಚೋದನಕಾರಿ ಮಾತುಗಳನ್ನು ಆಡಿದ್ದಾರೆ. ಈ ಸಂಭಾಷಣೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಭಾವನೆಗಳಿವೆ’ ಎಂದು ಎಫ್‌ಐಆರ್ ದಾಖಲಿಸಲಾಗಿತ್ತು. ಈ ದೂರಿನ ಅನ್ವಯ ಭಾರತೀಯ ದಂಡ ಸಂಹಿತೆ–1860ರ ಕಲಂ 153 (ಎ), 295 (ಎ), 120 (ಬಿ) ಮತ್ತು 290ರ ಅಡಿಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT