ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಮನೂರು, ಬಿಎಸ್‌ವೈ ಹೊಂದಾಣಿಕೆ ರಾಜಕೀಯ: ಹರಿಹರ ಬಿಜೆಪಿ ಶಾಸಕ BP ಹರೀಶ್

Published 3 ಜೂನ್ 2024, 16:23 IST
Last Updated 3 ಜೂನ್ 2024, 16:23 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬ ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ಮಾಡುತ್ತಿದೆ’ ಎಂದು ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಅವರಿಗೆ ಸೇರಿದ ಕಲ್ಲೇಶ್ವರ ಮಿಲ್‌ ಹಿಂಭಾಗದ ಫಾರ್ಮ್‌ ಹೌಸ್‌ನಲ್ಲಿ 2023ರಲ್ಲಿ ಕೃಷ್ಣಮೃಗ, ಜಿಂಕೆ ಸೇರಿದಂತೆ ಒಟ್ಟು 30 ವನ್ಯಜೀವಿಗಳು ಪತ್ತೆ ಆಗಿದ್ದವು. ಆದರೆ, ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನಮ್ಮದೇ ಸರ್ಕಾರ ಇದ್ದರೂ ಅವರನ್ನು ಬಂಧಿಸಲಿಲ್ಲ. ಈ ಪ್ರಕರಣದಲ್ಲಿ ಶಾಮನೂರು ಅವರ ಕುಟುಂಬಕ್ಕೆ ಯಡಿಯೂರಪ್ಪ ಅವರು ಸಹಾಯ ಮಾಡಿದ್ದರು’ ಎಂದು ದೂರಿದರು.

‘ಲೋಕಸಭಾ ಚುನಾವಣೆಗೆ ಮುಂಚಿತವಾಗಿ ದಾವಣಗೆರೆಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ದಾವಣಗೆರೆ ಕ್ಷೇತ್ರವೊಂದರಲ್ಲಿ ಸೋತರೆ ಏನೂ ಆಗುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಶಾಸಕ ಶಾಮನೂರು ಶಿವಶಂಕರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂಬ ಹೇಳಿಕೆ ನೀಡಿದ್ದರು. ಇದನ್ನು ನಾವು ಹೊಂದಾಣಿಕೆ ರಾಜಕೀಯ ಅನ್ನದೇ ಏನನ್ನಬೇಕು. ಅಂದಿನಿಂದಲೇ ರಾಜ್ಯದಲ್ಲಿ ವೀರಶೈವ ನಾಯಕರ ಹೊಂದಾಣಿಕೆ ರಾಜಕೀಯ ಪ್ರಾರಂಭವಾಗಿದೆ’ ಎಂದರು.

ರಾಜ್ಯದ ವಿಧಾನಸಭೆ ಚುನಾವಣೆ ನಡೆಯಲು ಇನ್ನೂ ನಾಲ್ಕು ವರ್ಷ ಇದೆ. ರಾಜ್ಯ ಬಿಜೆಪಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ನಾಯಕರ ಅಗತ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿಗೆ ಇನ್ನೂ 10 ವರ್ಷ ಅಧಿಕಾರ ಸಿಗದಿದ್ದರೂ ಪರವಾಗಿಲ್ಲ. ಆದರೆ, ಪಕ್ಷಕ್ಕೆ ಭ್ರಷ್ಟ ನಾಯಕರು ಬೇಕಾಗಿಲ್ಲ. ಉತ್ತಮ ನಾಯಕತ್ವದಲ್ಲಿ ಪಕ್ಷವನ್ನು ತಳಹಂತದಿಂದ ಕಟ್ಟುವ ಕೆಲಸ ಆಗಬೇಕಿದೆ’ ಎಂದು ಹೇಳಿದರು.

‘ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ನದಿ ಪಾತ್ರದ ಮರಳನ್ನು ಅಕ್ರಮವಾಗಿ ತೆಗೆದು, ಸಂಗ್ರಹಿಸಿ ಸಾವಿರಾರು ಲೋಡ್ ಮರಳನ್ನು ಬೇರೆ ಕಡೆ ಸಾಗಿಸುವ ಮೂಲಕ ದಂಧೆ ನಡೆಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT