ತುಮಕೂರು: ‘ಶಾಸಕ ಮುನಿರತ್ನ ಜತೆಯಲ್ಲಿ ಇದ್ದವರೇ ಅವರ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಪ್ರಕಾರ ಕ್ರಮಕೈಗೊಂಡಿದ್ದಾರೆ. ಇದರಲ್ಲಿ ದ್ವೇಷ ಎಲ್ಲಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಪ್ರಶ್ನಿಸಿದರು.
ಶಿರಾ ತಾಲ್ಲೂಕಿನ ಉಜ್ಜನಕುಂಟೆ ಬಳಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ‘ಪೊಲೀಸರು ಮುನಿರತ್ನ ಅವರನ್ನು ಭಾನುವಾರ ಬೆಳಿಗ್ಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ಮುಂದಿನ ಎರಡು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ಅವರ ಧ್ವನಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್)ಕ್ಕೆ ಕಳುಹಿಸಲಾಗುತ್ತದೆ’ ಎಂದರು.
‘ಅವರಿಂದ ಬೈಸಿಕೊಂಡವರೇ ಅವರ ವಿರುದ್ಧ ದೂರು ಕೊಟ್ಟಿದ್ದಾರೆ. ಇದರಲ್ಲಿ ಕಾಂಗ್ರೆಸ್ ನಾಯಕರ ಪಾತ್ರವಿಲ್ಲ. ಬಿಡುಗಡೆಯಾದ ಆಡಿಯೊಗೆ ಮುನಿರತ್ನ ಧ್ವನಿ ಹೋಲಿಕೆಯಾದರೆ ಪೊಲೀಸರು ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ’ ಎಂದು ಹೇಳಿದರು.