ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾರೋಗ್ಯ: ಮಾತು ನಿಲ್ಲಿಸಿದ ‘ಗಡ್ಡಪ್ಪ’ನತ್ತ ತಿರುಗಿಯೂ ನೋಡದ ಚಿತ್ರರಂಗ

ಪುತ್ರಿಯರಿಂದ ಉಪಚಾರ
Last Updated 1 ಜನವರಿ 2019, 6:50 IST
ಅಕ್ಷರ ಗಾತ್ರ

ಮಂಡ್ಯ: ‘ಅಪ್ಪ ಚೆನ್ನಾಗಿದ್ದಾಗ ನಿತ್ಯ ಹತ್ತಾರು ಜನ ಬರುತ್ತಿದ್ದರು. ಅವರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು, ಮಾತು ಕೇಳಿ ನಕ್ಕು ನಲಿಯುತ್ತಿದ್ದರು. ಈಗ ಅಪ್ಪ ಮಾತು ನಿಲ್ಲಿಸಿದ್ದು, ಮನೆಗೆ ಯಾರೂ ಬರುತ್ತಿಲ್ಲ. ಚಿತ್ರರಂಗದವರೂ ಈ ಕಡೆ ತಿರುಗಿಯೂ ನೋಡಿಲ್ಲ’ ಎಂದು ನಟ ಗಡ್ಡಪ್ಪ (ಚನ್ನೇಗೌಡ) ಅವರ ಹಿರಿಯ ಪುತ್ರಿ ಯಶೋದಾ ಕಣ್ಣೀರಿಟ್ಟರು.

‘ತಿಥಿ’ ಚಿತ್ರದಲ್ಲಿ ಮಾತುಗಳ ಮೂಲಕವೇ ಜನರ ಮನಸೂರೆಗೊಂಡಿದ್ದ ಗಡ್ಡಪ್ಪ ಈಗ ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ. ಡಿಸೆಂಬರ್‌24ರಿಂದ ಮಾತನಾಡಿಲ್ಲ. ಪಾಂಡವಪುರ–ಮಂಡ್ಯ ರಸ್ತೆಯ ನೊದೆಕೊಪ್ಪಲು ಗ್ರಾಮದ ಶೀಟ್‌ ಮನೆಯಲ್ಲಿ ಮಲಗಿದ್ದು, ಪುತ್ರಿಯರು ಆರೈಕೆ ಮಾಡುತ್ತಿದ್ದಾರೆ. ಅವರ ಯೋಗಕ್ಷೇಮ ವಿಚಾರಿಸಲು ಚಿತ್ರರಂಗದ ಯಾರೊಬ್ಬರೂ ಬಂದಿಲ್ಲ ಎನ್ನುವ ನೋವು ಗ್ರಾಮಸ್ಥರು ಹಾಗೂ ಅವರ ಪುತ್ರಿಯರನ್ನು ಕಾಡುತ್ತಿದೆ.

ನೊದೆಕೊಪ್ಪಲು ಗ್ರಾಮದಲ್ಲಿ ಸಣ್ಣ ಟೀ ಅಂಗಡಿ ಇಟ್ಟುಕೊಂಡು ಜೀವನ ರೂಪಿಸಿಕೊಂಡಿದ್ದ ಅವರಿಗೆ ನಾಲ್ಕು ಮಂದಿ ಪುತ್ರಿಯರು. ಎಂಟು ವರ್ಷಗಳ ಹಿಂದೆ ಪತ್ನಿ ತೀರಿಕೊಂಡಿದ್ದಾರೆ. ಪುತ್ರಿಯರನ್ನು ಮದುವೆ ಮಾಡಿ ಗುಡಿಸಲಿನಲ್ಲಿ ಜೀವನ ಮಾಡುತ್ತಿದ್ದರು. 2016ರಲ್ಲಿ ಪ್ರದೀಪ್‌ ರೆಡ್ಡಿ ನಿರ್ಮಿಸಿ, ರಾಮ್‌ರೆಡ್ಡಿ ನಿರ್ದೇಶಿಸಿದ ‘ತಿಥಿ’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡ ಚನ್ನೇಗೌಡರು ‘ಗಡ್ಡಪ್ಪ’ನಾಗಿ ಬದಲಾದರು. ಯಾವುದೇ ಮೇಕಪ್‌ ಇಲ್ಲದೆ ಸಹಜ ಅಭಿನಯ ಜನರಿಗೆ ಇಷ್ಟವಾಗಿತ್ತು. ಆ ನಂತರ ಕನ್ನಡ ಚಿತ್ರರಂಗದಲ್ಲಿ ಆಕರ್ಷಣೆಯ ವ್ಯಕ್ತಿಯಾದರು.

ದುರುಪಯೋಗ: ತಿಥಿ ನಂತರ ಗಡ್ಡಪ್ಪ ಅಭಿನಯದ ಯಾವ ಚಿತ್ರವೂ ಗೆಲುವು ಕಾಣಲಿಲ್ಲ. ಚಿತ್ರರಂಗ ಅವರಿಂದ ದ್ವಂದ್ವಾರ್ಥದ ಸಂಭಾಷಣೆಗಳನ್ನೇ ಹೇಳಿಸಿತು. ಯಾರೂ ₹ 5 ಸಾವಿರದ ಮೇಲೆ ಸಂಭಾವನೆ ಕೊಟ್ಟಿಲ್ಲ. ಜೊತೆಗಿದ್ದ ಬಡತನವೂ ಅಳಿಯಲಿಲ್ಲ. ಬಸ್‌ನಲ್ಲಿ ಕರೆಸಿಕೊಂಡು ಶೂಟಿಂಗ್‌ ಪೂರೈಸಿ ಬಸ್‌ನಲ್ಲೇ ಕಳುಹಿಸುತ್ತಿದ್ದರು. 80 ವರ್ಷ ದಾಟಿದ್ದ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲು ಇದೇ ಪ್ರಮುಖ ಕಾರಣ ಎಂಬುದು ಗ್ರಾಮಸ್ಥರ ಆರೋಪ.

‘ಚಿತ್ರಗಳಲ್ಲಿ ಅಭಿನಯಿಸಿ ಅಪ್ಪ ಅಪಾರ ಹೆಸರು ಗಳಿಸಿದ್ದರು. ಹಣಕಾಸಿನ ವಿಚಾರವಾಗಿ ಯಾವುದೇ ಅನುಕೂಲವಾಗಿಲ್ಲ. ಚಿತ್ರನಟ ಗುಡಿಸಲಿನಲ್ಲಿ ಇರಬಾರದು ಎಂಬ ಕಾರಣಕ್ಕೆ ನಾವೇ ಹೆಣ್ಣುಮಕ್ಕಳು ಹಣಹಾಕಿ ಮನೆ ಗಿಲಾವು ಮಾಡಿಸಿ, ಶೀಟ್‌ ಹಾಕಿಸಿಕೊಟ್ಟಿದ್ದೆವು. ಹೃದಯ ರೋಗಕ್ಕೆ ಮಂಡ್ಯದಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆವು. ಈಗ ನರರೋಗಕ್ಕೆ ಮೈಸೂರು ಆಸ್ಪತ್ರೆಗೆ ತೋರಿಸುತ್ತಿದ್ದೇವೆ. ನಮ್ಮ ಕೈಯಲ್ಲಿ ಹಣ ಇಲ್ಲ. ಈಗಲಾದರೂ ಚಿತ್ರರಂಗದವರು ಅಪ್ಪನಿಗೆ ಸಹಾಯ ಮಾಡಬೇಕು’ ಎಂದು ಗಡ್ಡಪ್ಪ ಪುತ್ರಿ ಶೋಭಾ ಮನವಿ ಮಾಡಿದರು.

‘ತಿಥಿ’ ವೇಳೆ ಹೃದಯಾಘಾತ: ‘ಗಡ್ಡಪ್ಪ ಇಟ್ಟಿಗೆ ಫ್ಯಾಕ್ಟರಿ, ಕೋಳಿಫಾರಂನಲ್ಲಿ ಕೆಲಸ ಮಾಡಿಕೊಂಡು ಗಟ್ಟಿಮುಟ್ಟಾಗಿದ್ದರು. ನಂತರ ಕ್ಯಾಂಟೀನ್‌ ಇಟ್ಟುಕೊಂಡಿದ್ದು, ಯಾವ ಆರೋಗ್ಯ ಸಮಸ್ಯೆಯೂ ಇರಲಿಲ್ಲ. ಆದರೆ ತಿಥಿ ಚಿತ್ರದ ಶೂಟಿಂಗ್‌ ನಡೆಯುವಾಗ ಹೃದಯಾಘಾತವಾಗಿತ್ತು. ಚಿತ್ರತಂಡವೇ ಆಸ್ಪತ್ರೆಗೆ ಸೇರಿಸಿತ್ತು. ಆನಂತರ ಅನಾರೋಗ್ಯ ಸಮಸ್ಯೆ ಹೆಚ್ಚಾಯಿತು. ಊರಿನಲ್ಲೇ ಇದ್ದಿದ್ದರೆ ಅವರಿಗೆ ಏನೂ ಆಗುತ್ತಿರಲಿಲ್ಲ.ಚಿತ್ರರಂಗಕ್ಕೆ ಹೋದ ಮೇಲೆ ಆರೋಗ್ಯ ಹಾಳಾಯಿತು’ ಎಂದು ಗಡ್ಡಪ್ಪ ಸಂಬಂಧಿಯೊಬ್ಬರು ತಿಳಿಸಿದರು.

ಇನ್ನಷ್ಟು ಸುದ್ದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT