ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯ‘ಭಾರ’ಕ್ಕೆ ಸೋತ ಅಂಗನವಾಡಿ ‘ಸ್ಮಾರ್ಟ್‌ಫೋನ್‌’

ಕಡಿಮೆ ಸಂಗ್ರಹ ಸಾಮರ್ಥ್ಯ, ಕೈಕೊಡುವ ನೆಟ್‌ವರ್ಕ್‌, ಮಾಹಿತಿ ದಾಖಲೀಕರಣಕ್ಕೆ ತೊಂದರೆ
Published 23 ಜುಲೈ 2023, 0:57 IST
Last Updated 23 ಜುಲೈ 2023, 0:57 IST
ಅಕ್ಷರ ಗಾತ್ರ

ಬೆಳಗಾವಿ: ಅಂಗನವಾಡಿ ಕೇಂದ್ರದ ಕಾರ್ಯಚಟುವಟಿಕೆಗಳ ದಾಖಲೆಯನ್ನಷ್ಟೇ ನಿರ್ವಹಿಸುವ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ ವಿತರಿಸಿದ ಸರ್ಕಾರ, ಆರೋಗ್ಯ ಇಲಾಖೆಯ ಸಮೀಕ್ಷೆ ಮತ್ತು ಚುನಾವಣೆ ಕರ್ತವ್ಯದ ದಾಖಲೆಗಳನ್ನು ಅದರಲ್ಲೇ ನಿರ್ವಹಿಸುವಂತೆ ಸೂಚಿಸಿರುವುದು ಕಾರ್ಯಕರ್ತೆಯರ ಪಾಲಿಗೆ ಸಮಸ್ಯೆಯಾಗಿ ಪರಿಣಮಿಸಿದೆ. 

ರಾಜ್ಯದಲ್ಲಿ 63 ಸಾವಿರಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದಿಂದ ‘ಪೋಷಣ’ ಅಭಿಯಾನದಡಿ 2020–21ನೇ ಸಾಲಿನಲ್ಲಿ ಸ್ಮಾರ್ಟ್‌ಫೋನ್‌ ವಿತರಿಸಲಾಗಿತ್ತು. ಸ್ಯಾಮ್‌ಸಂಗ್‌ ಕಂಪನಿಯ 2 ಜಿಬಿ ರ್‍ಯಾಮ್‌ ಮತ್ತು 32 ಜಿಬಿ ಸಂಗ್ರಹ ಸಾಮರ್ಥ್ಯದ ಮತ್ತು ಎಲ್‌ಜಿ ಕಂಪನಿಯ 2 ಜಿಬಿ ರ್‍ಯಾಮ್‌, 16 ಜಿಬಿ ಸಂಗ್ರಹ ಸಾಮರ್ಥ್ಯದ ಮೊಬೈಲ್‌, ‍ಪವರ್‌ಬ್ಯಾಂಕ್‌ ಹಾಗೂ ಸಿಮ್‌ಕಾರ್ಡ್‌ ಕೊಡಲಾಗಿತ್ತು. ಆರಂಭಿಕ ದಿನಗಳಲ್ಲಿ ಈ ಮೊಬೈಲ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದವು.

‘ದಿನಗಳು ಕಳೆದಂತೆ ವಿವಿಧ ಇಲಾಖೆಗಳ ಸಮೀಕ್ಷೆ ಮತ್ತು ಚುನಾವಣೆ ಕರ್ತವ್ಯದ ಚಟುವಟಿಕೆಗಳು ದಾಖಲಿಸುವ ಕೆಲಸ ನಡೆಯಿತು. ದಾಖಲೆಗಳ ‘ಭಾರ’ ಹೆಚ್ಚಾದಂತೆ, ಮೊಬೈಲ್‌ ಕಾರ್ಯಸಾಮರ್ಥ್ಯ ಕುಂದಿತು. ಇದರೊಂದಿಗೆ ಇಂಟರ್‌ನೆಟ್‌ ಸಮಸ್ಯೆ ಕಾಡಿತು. ಈಗ ಮೊಬೈಲ್‌ ಬಳಕೆಯೇ ಕಷ್ಟಕರವಾಗಿದೆ. ಮಾಹಿತಿ ಸುಗಮವಾಗಿ ದಾಖಲಿಸಲು ಆಗುತ್ತಿಲ್ಲ. ಪದೇ ಪದೇ ಸ್ಥಗಿತಗೊಳ್ಳುತ್ತಿದೆ’ ಎಂದು ಅಂಗನವಾಡಿ ಕಾರ್ಯಕರ್ತೆಯರು ತಿಳಿಸಿದರು.

ಅಪ್ಲೋಡ್‌ ಕಷ್ಟ: ‘ನಮಗೆ ಕೊಟ್ಟಿರುವುದು 2ಜಿ ಅಂತರ್ಜಾಲ ಸಂಪರ್ಕದ ಮೊಬೈಲ್. ವಿವಿಧ ಫೈಲ್‌ಗಳು ಬೇಗ ಡೌನ್‌ಲೋಡ್‌ ಆಗುವುದಿಲ್ಲ. ಎಲ್ಲ ದಾಖಲೆಗಳನ್ನು ನಿರ್ವಹಿಸುವಷ್ಟು ಸಾಮರ್ಥ್ಯ ಮೊಬೈಲ್‌ಗಳಿಗಿಲ್ಲ. ಕೇಂದ್ರದ ಕಾರ್ಯ ಚಟುವಟಿಕೆಗಳ ನಿರ್ವಹಣೆ ಜೊತೆಗೆ ವಿವಿಧ ಮಾಹಿತಿ, ಚಿತ್ರಗಳನ್ನು ಅಪ್ಲೋಡ್‌ ಮಾಡಲು ಕಷ್ಟವಾಗುತ್ತಿದೆ’ ಎಂದು ಅಖಿಲ ಭಾರತ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ (ಎಐಟಿಯುಸಿ) ಸಂಘಟನೆಯ ರಾಜ್ಯ ಸಮಿತಿ ಸದಸ್ಯೆ ಯಲ್ಲುಬಾಯಿ ಶೀಗಿಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೂರು ವರ್ಷಗಳ ಹಿಂದೆ ಕೊಟ್ಟ ಸಂದರ್ಭದಲ್ಲಿ ಮೊಬೈಲ್‌ಗಳು ಚೆನ್ನಾಗಿಯೇ ಇದ್ದವು. ಆದರೆ, ಕಾರ್ಯಭಾರ ಹೆಚ್ಚಾದಂತೆ ಮತ್ತು ವಿವಿಧ ದಾಖಲೀಕರಣ ಪ್ರಕ್ರಿಯೆ ನಡೆದಂತೆ ಸಮಸ್ಯೆ ಹೆಚ್ಚಾಗುತ್ತಿದೆ’ ಎಂದು ಹೇಳಿದರು.

‘ಆರೋಗ್ಯ ಇಲಾಖೆಯೊಂದಿಗೆ ಪೌಷ್ಟಿಕ ಮತ್ತು ಆರೋಗ್ಯ ಸಮೀಕ್ಷೆ ಕೈಗೊಳ್ಳಲು ಸರ್ಕಾರ ಆದೇಶಿಸಿದೆ. ನನ್ನ ಅಂಗನವಾಡಿ ಕೇಂದ್ರದ ವ್ಯಾಪ್ತಿಯಲ್ಲಿ 300 ಮನೆಗಳಿವೆ. ಪ್ರತಿ ಮನೆಯ ಮಾಹಿತಿ ದಾಖಲಿಸಲು ಒಂದು ಗಂಟೆ ಸಾಲದು. ಸರ್ಕಾರದ ಕಠಿಣ ಕ್ರಮದ ಎಚ್ಚರಿಕೆಗೆ ಹೆದರಿ ಕೆಲಸ ಮಾಡುತ್ತಿದ್ದೇವೆ’ ಎಂದು ಬೈಲಹೊಂಗಲದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರೊಬ್ಬರು ಹೇಳಿದರು.

ಸರ್ಕಾರ ನೀಡಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ವಿವಿಧ ಮಾಹಿತಿ ದಾಖಲೀಕರಣಕ್ಕೆ ತುಂಬಾ ಸಮಸ್ಯೆಯಾಗುತ್ತಿದೆ. ನಮಗೆ ಹೊಸ ಮೊಬೈಲ್‌ ಕೊಡಲೇಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ
-ಮಂದಾ ನೇವಗಿ ಅಧ್ಯಕ್ಷೆ ಸಿಐಟಿಯು ಬೆಳಗಾವಿ ತಾಲ್ಲೂಕು ಘಟಕ
ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟಿರುವ ಸ್ಮಾರ್ಟ್‌ಫೋನ್‌ಗಳ ಲೋಪ–ದೋಷಗಳನ್ನು ಪರಿಶೀಲಿಸಲಾಗುವುದು. ಸಮಸ್ಯೆ ಪರಿಹಾರಕ್ಕೆ ಆದ್ಯತೆ ಕೊಡಲಾಗುವುದು
–ಎಂ.ಎಸ್‌.ಅರ್ಚನಾ, ನಿರ್ದೇಶಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು
ಸ್ಮಾರ್ಟ್‌ಫೋನ್‌ಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದು ಗಮನಕ್ಕೆ ಬಂದಿದೆ. ಅವರಿಗೆ ಹೊಸ ಮೊಬೈಲ್‌ ಕೊಡಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆ
–ಆರ್‌.ನಾಗರಾಜ್‌ ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT