ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ ಹೂಡಿಕೆಗೆ ಸಮ್ಮತಿಸಿದ ಜಪಾನಿನ 150 ಕಂಪನಿಗಳು

Published 25 ಜೂನ್ 2024, 23:55 IST
Last Updated 25 ಜೂನ್ 2024, 23:55 IST
ಅಕ್ಷರ ಗಾತ್ರ

ಬೆಂಗಳೂರು: ಜಪಾನಿನ 150ಕ್ಕೂ ಹೆಚ್ಚು ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಸಮ್ಮತಿ ಸೂಚಿಸಿವೆ.

ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕಾಗಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇತೃತ್ವದ ಕರ್ನಾಟಕ ಸರ್ಕಾರದ ಉನ್ನತ ಮಟ್ಟದ ನಿಯೋಗ ಜಪಾನ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಕೆಲ ಕಂಪನಿಗಳು ಹೂಡಿಕೆಯ ಒಪ್ಪಂದಕ್ಕೆ ಸಹಿ ಮಾಡಿದರೆ, ಕೆಲ ಕಂಪನಿಗಳು ಹೂಡಿಕೆಯ ಭರವಸೆ ನೀಡಿವೆ.  

ಪರಿಸರ ಸಂರಕ್ಷಣೆ ಉಪಕರಣ ತಯಾರಿಸುವ ಬಹುರಾಷ್ಟ್ರೀಯ ಕಂಪನಿ ಡೈಕಿ ಆ್ಯಕ್ಸಿಸ್‌, ಕೈಗಾರಿಕಾ ಯಂತ್ರೋಪಕರಣ ತಯಾರಿಸುವ ಸುಮಿಟೊಮೊ ಹೆವಿ ಇಂಡಸ್ಟ್ರೀಸ್‌ (ಎಸ್‌ಎಚ್‌ಐ), ಸೆಮಿಕಂಡಕ್ಟರ್‌ ಪರಿಕರ ತಯಾರಿಸುವ ರೆನೆಸಸ್‌ ಎಲೆಕ್ಟ್ರಾನಿಕ್ಸ್‌ ಕಾರ್ಪೊರೇಷನ್‌  ಹಾಗೂ ಜಪಾನ್‌ ಸರ್ಕಾರದ ಸಣ್ಣ ಕೈಗಾರಿಕೆಗಳ ಸಂಘಟನೆ (ಎಸ್‌ಎಂಆರ್‌ಜೆ) ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಯಿತು. ಜಪಾನಿನ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸಹಯೋಗದಲ್ಲಿ ಕರ್ನಾಟಕದ ಎಸ್‌ಎಂಇಗಳ ಬೆಳವಣಿಗೆ ಉತ್ತೇಜಿಸಲು ನೆರವಾಗುವ ಒಪ್ಪಂದಕ್ಕೆ ಸಹಿ ಹಾಕಲಾಯಿತು. ₹100 ಕೋಟಿ ವೆಚ್ಚದಲ್ಲಿ ಕರ್ನಾಟಕದಲ್ಲಿ ತ್ಯಾಜ್ಯ ನೀರು ನಿರ್ವಹಣಾ ಉಪಕರಣಗಳ ತಯಾರಿಕಾ ಘಟಕ ಸ್ಥಾಪಿಸುವ ಒಪ್ಪಂದಕ್ಕೆ ಡೈಕಿ ಆ್ಯಕ್ಸಿಸ್‌ ನಿರ್ದೇಶಕ ರಿಯೊ ರಿಯೊಟಾ ವಾಜಾ ಸಹಿ ಹಾಕಿದರು. 

‘ಸುಮಿಟೊಮೊ ಹೆವಿ ಇಂಡಸ್ಟ್ರೀಸ್‌ 2024ರ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ ತನ್ನ ಪ್ರಧಾನ ಕಚೇರಿ ಆರಂಭಿಸಲಿದೆ. ಜಪಾನ್‌ ಸರ್ಕಾರದ ಎಸ್‌ಎಂಆರ್‌ಜೆ ಸಂಸ್ಥೆ ವಾಹನ ಬಿಡಿಭಾಗ, ಎಲೆಕ್ಟ್ರಾನಿಕ್ಸ್‌, ವೈಮಾಂತರಿಕ್ಷ ಹಾಗೂ ರಕ್ಷಣೆ, ಆಹಾರ ಸಂಸ್ಕರಣೆ,  ಭಾರಿ ಯಂತ್ರೋಪಕರಣ ತಯಾರಿಕೆ ಕ್ಷೇತ್ರಗಳಲ್ಲಿ ತಮ್ಮ ವಹಿವಾಟು ವಿಸ್ತರಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಜಪಾನ್‌ ಮತ್ತು ಭಾರತದ ಎಸ್‌ಎಂಇ ಮುಖ್ಯಸ್ಥರ ಸಭೆಯನ್ನು ಆಗಸ್ಟ್‌ನಲ್ಲಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT