ಬೆಂಗಳೂರು: ‘ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಮುಡಾ ನಿವೇಶನ ಹಂಚಿಕೆ ಮಾಡುವಾಗ ಪಕ್ಷಪಾತಿ ಧೋರಣೆ ತಳೆಯಲಾಗಿದ್ದು, ಅದಕ್ಕಾಗಿ ತನಿಖೆ ಆಗಲೇಬೇಕು. ಇದೆಲ್ಲವೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಡೆದಿದೆ. 2017ರಲ್ಲಿ ಮುಡಾ ಕೈಗೊಂಡಿರುವ ನಿರ್ಣಯವೇ ಇಡೀ ಪ್ರಕರಣದ ಕೊಂಡಿಯಾಗಿದೆ.
ಪ್ರಕರಣದ ದೂರುದಾರರ ಪರ ಹಿರಿಯ ವಕೀಲ ಕೆ.ಜಿ. ರಾಘವನ್ ಅವರು ನ್ಯಾಯಪೀಠದ ಮುಂದೆ ಅರುಹಿದ್ದು ಹೀಗೆ.
ರಾಜ್ಯಪಾಲರು ನೀಡಿರುವ ಅನುಮತಿ ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಸೋಮವಾರ ಮುಂದುವರಿಸಿದರು.
ದೂರುದಾರ ಮೈಸೂರಿನ ಸ್ನೇಹಮಯಿ ಕೃಷ್ಣ ಪರ ವಾದ ಮಂಡಿಸಿದ ಹೈಕೋರ್ಟ್‌ನ ಹಿರಿಯ ವಕೀಲ ಕೆ.ಜಿ.ರಾಘವನ್, ‘ಮುಡಾ ಹಗರಣ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿ (ವೆಂಕಟಾಚಲಪತಿ) ನೇತೃತ್ವದಲ್ಲಿ, ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿದೆ. ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಕಂಡುಬಂದ ಕಾರಣಕ್ಕಾಗಿಯೇ ಈ ಆಯೋಗ ರಚಿಸಲಾಗಿದೆ. ಸರ್ಕಾರ ಸಾರ್ವಜನಿಕ ನಂಬಿಕೆ ಕಳೆದುಕೊಂಡಿರುವುದನ್ನು ಇದು ತೋರಿಸುತ್ತದೆ’ ಎಂದರು.
‘ಪಾರ್ವತಿ ಅವರಲ್ಲದೇ ಬೇರೆ ಯಾವುದೇ ಸಾಮಾನ್ಯ ವ್ಯಕ್ತಿ ತನ್ನ ಜಮೀನು ವಶಪಡಿಸಿಕೊಂಡಿದ್ದಕ್ಕೆ ಪರಿಹಾರ ಕೇಳಿದ್ದರೆ, ಮುಡಾ ಅಂತಹ ವ್ಯಕ್ತಿಗೆ ಮೊದಲು ಹಕ್ಕು ತೋರಿಸುವಂತೆ ಕೇಳುತ್ತಿತ್ತು. ಆಗ ಆ ವ್ಯಕ್ತಿಯು ನ್ಯಾಯಾಲಯದ ಮೆಟ್ಟಿಲೇರಬೇಕಿತ್ತು. ಆದರೆ, ಪಾರ್ವತಿ ಅವರ ಪ್ರಕರಣದಲ್ಲಿ ಇದೆಲ್ಲಾ ಆಗಿಲ್ಲ. ನಿಯಮಗಳನ್ನು ತಿದ್ದುಪಡಿ ಮಾಡಲಾಗಿದ್ದು, ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ’ ಎಂದು ಆಕ್ಷೇಪಿಸಿದರು.
‘ಸಾರ್ವಜನಿಕ ಸೇವಕರ ನಡೆ ಕರಾರುವಕ್ಕಾಗಿ ಇರಬೇಕು. ಪ್ರಮಾದ ಆಗಿರುವುದರಲ್ಲಿ ಸಾರ್ವಜನಿಕ ಸೇವಕನ ಸಣ್ಣ ಪಾತ್ರವಿದ್ದರೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯವಾಗುತ್ತದೆ’ ಎಂಬ ನ್ಯಾಯಮೂರ್ತಿ ನಾಗಪ್ರಸನ್ನ ಅವರ ತೀರ್ಪೊಂದನ್ನು ಅವರ ಪೀಠದ ಮುಂದೆಯೇ ಉದಾಹರಿಸಿದ ರಾಘವನ್, ‘ಮುಡಾ ನಿರ್ಧಾರದಲ್ಲಿ ಮುಖ್ಯಮಂತ್ರಿ ಪಾತ್ರವಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ’ ಎಂದರು.
‘ಅನುಚಿತ ಅನುಕೂಲ ಪಡೆಯಲು ಅಧಿಕಾರಿ ಮೇಲೆ ಪ್ರಭಾವ ಬಳಸಿದರೆ ಅದು ಅಪರಾಧ. ಕಲಂ 17ಎ ಹಂತದಲ್ಲಿ ಸಹಜ ನ್ಯಾಯತತ್ವ ಅನ್ವಯವೇ ಆಗುವುದಿಲ್ಲ. ಸಾರ್ವಜನಿಕ ಆಡಳಿತದಲ್ಲಿ ಶುದ್ಧತೆ ಕಾಯ್ದುಕೊಳ್ಳಬೇಕಿರುವ ಕಾರಣ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದಾರೆ. ವಂಚನೆ ನಡೆದಿದೆಯೋ, ಇಲ್ಲವೋ ಎಂಬುದನ್ನು ಅರಿಯಲು ಯಾವ ವಿಧಾನ ಅನುಸರಿಸಬೇಕು ಎಂದು ಹೇಳುವುದು ನ್ಯಾಯಪೀಠದ ಜವಾಬ್ದಾರಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.