ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Municipalika 2023 | ಮ್ಯಾನ್‌ಹೋಲ್‌ ಸ್ವಚ್ಛತೆಗೆ ರೋಬಾಟ್‌

ಮುನಿಸಿಪಾಲಿಕಾ–2023 ಸಮ್ಮೇಳನದಲ್ಲಿ ಪ್ರದರ್ಶನ
Published 29 ನವೆಂಬರ್ 2023, 0:30 IST
Last Updated 29 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಮ್ಯಾನ್‌ಹೋಲ್‌ಗಳ ಸ್ವಚ್ಛತೆಗೆ ಇನ್ನುಮುಂದೆ ಆಧುನಿಕ ರೋಬಾಟ್‌ಗಳು ಬಳಕೆಯಾಗಲಿವೆ. 

ಅರಮನೆ ಮೈದಾನದಲ್ಲಿ ಮಂಗಳವಾರ ಆರಂಭವಾದ ಮೂರು ದಿನಗಳ ಮುನಿಸಿಪಾಲಿಕಾ–2023 ಸಮ್ಮೇಳನದಲ್ಲಿ ಇಂತಹ ಹತ್ತುಹಲವು ರೋಬಾಟ್‌ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸಫಾಯಿ ಕರ್ಮಚಾರಿಗಳ ಬಳಕೆ ನಿಷೇಧದ ನಂತರ ಇಂತಹ ರೋಬಾಟ್‌ಗಳ ಆವಿಷ್ಕಾರಕ್ಕೆ ಹಲವು ಕಂಪನಿಗಳು ಮುಂದಾಗಿದ್ದವು. ರೋಬಾಟ್‌ ಒಮ್ಮೆ ಗುಂಡಿಗೆ ಇಳಿದರೆ 30 ಕೆ.ಜಿಯಿಂದ 160 ಕೆ.ಜಿ.ವರೆಗಿನ ಕಲ್ಮಶ ಹೊರತೆಗೆದು ಯಂತ್ರದ ಹೊಟ್ಟೆಯೊಳಗೆ ತುಂಬುತ್ತದೆ. ಒಳಚರಂಡಿಗಳು, ಸಾಮೂಹಿಕ ಶೌಚಾಲಯಗಳು, ಮನೆಯ ಶೌಚಗಳು, ಸೇತುವೆ, ಡೆಕ್‌ ಸ್ಲ್ಯಾಬ್‌ಗಳ ಒಳಗೆ ಕಟ್ಟಿಕೊಂಡ ತ್ಯಾಜ್ಯಗಳನ್ನೂ ತೆಗೆಯಲು ಬಳಸಬಹುದು. ಸಮ್ಮೇಳನದಲ್ಲಿ ಸದ್ಯ ₹10 ಲಕ್ಷದಿಂದ ₹39 ಲಕ್ಷದವರೆಗಿನ ರೋಬಾಟ್‌ಗಳು ಲಭ್ಯವಿವೆ. 

ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ವಸತಿ ಇಲಾಖೆ ಸಹಯೋಗದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ.

ಮ್ಯಾನ್‌ಹೋಲ್‌, ಯುಜಿಡಿಗೂ ಫೈಬರ್‌: 

ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನವಸತಿಗಳಲ್ಲಿ ಯುಜಿಡಿ ಕಾಮಗಾರಿಗಳಿಗೆ ಹಾಗೂ ಮ್ಯಾನ್‌ಹೋಲ್‌ ಸಿದ್ಧಪಡಿಸಲು ಮೊದಲು ಸಿಮೆಂಟ್‌ ಸಾಮಗ್ರಿಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಹಲವು ಕಂಪನಿಗಳು ಫೈಬರ್‌ ಬಳಸಿ ಆಧುನಿಕ ಪೈಪ್‌ಗಳನ್ನು ಸಿದ್ಧಪಡಿಸಿವೆ. 2.5 ಇಂಚಿನಿಂದ 32 ಇಂಚಿನ ವ್ಯಾಸ ಒಳಗೊಂಡ ಪೈಪ್‌ಗಳು, 2.5 ಮೀಟರ್‌ ಎತ್ತರದ ಮ್ಯಾನ್‌ಹೋಲ್‌ ಛೇಂಬರ್‌ಗಳು ಮಾರುಕಟ್ಟೆಗೆ ಬಂದಿವೆ.

ಘನತ್ಯಾಜ್ಯ ನಿರ್ವಹಣೆ, ಆಧುನಿಕ ಕಸ ಸಂಗ್ರಹ ಸಾಮಗ್ರಿಗಳು, ಘನತ್ಯಾಜ್ಯ ಸಂಸ್ಕರಣ ಘಟಕಗಳು, ಕಸ ಸಾಗಣೆಯ ವೈವಿಧ್ಯ ವಾಹನಗಳು, ನೀರು ಶುದ್ಧೀಕರಣ ಘಟಕಗಳು, ಸಾರ್ವಜನಿಕ ಶೌಚಾಲಯದ ವಿವಿಧ ಮಾದರಿಗಳು ಸಮ್ಮೇಳನದ ಪ್ರಮುಖ ಆಕರ್ಷಣೆಗಳಾಗಿವೆ.

ಆಧುನಿಕ ಕಟ್ಟಡ ಸಾಮಗ್ರಿಗಳು, ತಂತ್ರಜ್ಞಾನ, ಸಮಕಾಲೀನ ವಾಸ್ತುಶಿಲ್ಪಗಳು, ಸ್ಮಾರ್ಟ್‌ಸಿಟಿ ಸೇರಿದಂತೆ ಭವಿಷ್ಯದ ನಗರಗಳ ನಿರ್ಮಾಣಕ್ಕೆ ಅಗತ್ಯವಾದ ಸಾಮಗ್ರಿಗಳು, ಪರಿಹಾರೋಪಾಯಗಳು ಸಮ್ಮೇಳನದಲ್ಲಿ ದೊರಕಲಿವೆ.

ಕುಡಿಯುವ ನೀರಿಗೆ ₹9 ಸಾವಿರ ಕೋಟಿ

ನಗರ ಪ್ರದೇಶಗಳಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಸಲು ₹9 ಸಾವಿರ ಕೋಟಿ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮುನಿಸಿಪಾಲಿಕಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು  ದೇಶ ಸುಸ್ಥಿರ ಬೆಳವಣಿಗೆಗೆ ನಗರ-ಗ್ರಾಮೀಣ ಅಭಿವೃದ್ಧಿ ಮುಖ್ಯ. ರಾಜ್ಯದ 316 ನಗರಗಳಿಗೂ ನಾಗರಿಕ ಸವಲತ್ತುಗಳನ್ನು ಸರ್ಕಾರ ಒದಗಿಸುತ್ತಿದೆ. ರಾಜ್ಯದಲ್ಲಿ ಶೇ 38ರಷ್ಟು ಮಂದಿ ನಗರ ಪ್ರದೇಶಗಳಲ್ಲಿ‌ ನೆಲೆಸಿದ್ದಾರೆ. ಸುಗಮ ಸಂಚಾರ ಘನತ್ಯಾಜ್ಯ ನಿರ್ವಹಣೆ ಒಳಚರಂಡಿ ವ್ಯವಸ್ಥೆ ಸೇರಿದಂತೆ ಅಗತ್ಯ ನಾಗರಿಕ‌ ಸವಲತ್ತುಗಳನ್ನು ಒದಗಿಸಲು ಇನ್ನಷ್ಟು ಆಧುನಿಕ ಸುಧಾರಿತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.   ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಪೌರಾಡಳಿತ ಸಚಿವ ರಹೀಂ ಖಾನ್ ಶಾಸಕ ಎಚ್.ಡಿ. ತಮ್ಮಯ್ಯ ವಿಧಾನ ಪರಿಷತ್‌ ಸದಸ್ಯ ಎಸ್.ರವಿ ಆಸ್ಟ್ರೇಲಿಯಾ ವ್ಯಾಪಾರ ಮತ್ತು ಹೂಡಿಕೆ ಆಯೋಗದ ಅಧ್ಯಕ್ಷೆ ಕ್ಯಾಥರಿನ್ ಗಲೇಘರ್‌ ಉಸ್ಥಿತರಿದ್ದರು.

ಕೊಳವೆಬಾವಿಗೆ ₹50 ಶುಲ್ಕ: ಡಿ.ಕೆ.ಶಿವಕುಮಾರ್

ಕೊಳವೆಬಾವಿ ಕೊರೆಸಲು ಅನುಮತಿಗಾಗಿ ₹50 ಶುಲ್ಕ ನಿಗದಿ ಮಾಡಿದರೆ ರಾಜ್ಯದಲ್ಲಿ ಕೊರೆಯುವ ಕೊಳವೆಬಾವಿಗಳ ಲೆಕ್ಕ ಸಿಗಲಿದೆ ಎಂದು  ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ಕೊಳವೆ ಬಾವಿ ಕೊರೆಯಲು ಅನುಮತಿ ಸೇರಿದಂತೆ ಇತರ ಮಾರ್ಗಸೂಚಿಗಳನ್ನು ಅಧಿಕಾರಿಗಳು ಅನುಸರಿಸಬೇಕು. ಜನರಿಂದ ಹಣ ವಸೂಲಿಗಾಗಿ ಶುಲ್ಕ ನಿಗದಿ ಮಾಡಲು ಹೇಳುತ್ತಿಲ್ಲ. ಆದರೆ ಕೃಷಿ ಗೃಹೋಪಯೋಗಿ ವಾಣಿಜ್ಯ ಬಳಕೆಗೆ ಎಷ್ಟು ಕೊಳವೆಬಾವಿಗಳನ್ನು ಬಳಸಲಾಗುತ್ತಿದೆ ಎನ್ನುವ ಮಾಹಿತಿ ದೊರೆಯುತ್ತದೆ ಎಂದರು. ರಾಜಕೀಯ ಕಾರಣಗಳಿಗಾಗಿ 12 ವರ್ಷಗಳಿಂದ ನೀರಿನ ದರ ಏರಿಕೆ ಮಾಡಿಲ್ಲ. ಪ್ರತಿಯೊಂದು ಹನಿ ನೀರನ್ನೂ ಜವಾಬ್ದಾರಿಯುತವಾಗಿ ಬಳಸುವ ಕೆಲಸ ಆಗಬೇಕಿದೆ. ಇದು ಸ್ಥಳೀಯ ಸಂಸ್ಥೆಗಳ ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT