ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಲೆ ಪ್ರಕರಣ: ದರ್ಶನ್ ಹೆಸರು ಬಾಯಿಬಿಡದಂತೆ ₹30 ಲಕ್ಷ ಸುಪಾರಿ?

Published 13 ಜೂನ್ 2024, 0:13 IST
Last Updated 13 ಜೂನ್ 2024, 0:13 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ‘ಕೊಲೆ ಪ್ರಕರಣ ಒಪ್ಪಲು, ಮೃತದೇಹದ ವಿಲೇವಾರಿ ಮಾಡಲು ಹಾಗೂ ನಟ ದರ್ಶನ್‌ ಅವರ ಹೆಸರು ಬಾಯ್ಬಿಡದಿರಲು ಬಂಧಿತರ ಪೈಕಿ ಐವರಿಗೆ ₹30 ಲಕ್ಷಕ್ಕೆ ಸುಪಾರಿ ನೀಡಲಾಗಿತ್ತು’ ಎಂಬ ಸಂಗತಿ ಪೊಲೀಸರಿಗೆ ವಿಚಾರಣೆ ವೇಳೆ ಗೊತ್ತಾಗಿದೆ.

ಮೃತದೇಹ ಸಿಗದಂತೆ ವಿಲೇವಾರಿ ಮಾಡಲು ಮುಂಗಡವಾಗಿ ಮೂವರು ಆರೋಪಿಗಳಿಗೆ ಒಟ್ಟು ₹5 ಲಕ್ಷ ಸಂದಾಯ ಮಾಡಲಾಗಿತ್ತು. ಉಳಿದ ಇಬ್ಬರು ಆರೋಪಿಗಳು ಜೈಲಿಗೆ ಹೋದ ಮೇಲೆ ಅವರ ಮನೆಯವರಿಗೆ ಹಣ ತಲುಪಿಸುವುದಾಗಿ ಹೇಳಲಾಗಿತ್ತು ಎಂಬ ವಿಚಾರವನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

ಜೂನ್‌ 9ರಂದು ಸುಮನಹಳ್ಳಿ ಸತ್ವ ಅನುಗ್ರಹ ಅಪಾರ್ಟ್‌ಮೆಂಟ್‌ ಸಮೀಪದ ಮೋರಿ ಬಳಿ ಸಿಕ್ಕಿದ ಮೃತದೇಹ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಕೃತ್ಯ ಎಸಗಿದ ಆರೋಪಿಗಳ ವಿರುದ್ದ ಹಲವು ಮಹತ್ವದ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಅಪಾರ್ಟ್‌ಮೆಂಟ್‌ ಸೆಕ್ಯುರಿಟಿ ಆಫೀಸರ್‌ ಕೇವಲ್‌ ರಾಜ್‌ದೋರ್‌ಜೀ ಅವರು ನೀಡಿದ ದೂರು ಆಧರಿಸಿ, ಆರೋಪಿಗಳ ವಿರುದ್ಧ ಕೊಲೆ (302) ಹಾಗೂ ಸಾಕ್ಷ್ಯನಾಶ (201) ಪ್ರಕರಣ ದಾಖಲಾಗಿದೆ.

‘ಈ ಕೊಲೆ ಪ್ರಕರಣದಲ್ಲಿ 17 ಮಂದಿ ಭಾಗಿ ಆಗಿರುವುದು ತನಿಖೆಯಿಂದ ದೃಢಪಟ್ಟಿದೆ. ಇದುವರೆಗೂ ನಟ ದರ್ಶನ್, ಅವರ ಆಪ್ತೆ ಪವಿತ್ರಾಗೌಡ ಸೇರಿ 13 ಮಂದಿ ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಜಗದೀಶ್‌, ಅನು, ರವಿ ಹಾಗೂ ರಾಜು ಅವರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ಬಂಧಿತರಿಂದ ಜೀಪು, ಕಾರು, ಶಸ್ತ್ರಾಸ್ತ್ರ ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಅಣ್ಣ’, ‘ಅಕ್ಕ’ ಇದ್ದರು ಎಂದಿದ್ದ ಆರೋಪಿಗಳು:

ಭಾನುವಾರ ಬೆಳಿಗ್ಗೆ ಕಾಲುವೆ ಬಳಿ ಮೃತದೇಹ ಸಿಕ್ಕಿದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು. ಮೃತದೇಹವನ್ನು ಸ್ಕಾರ್ಪಿಯೊದಲ್ಲಿ ತಂದು ಎಸೆಯುತ್ತಿದ್ದ ದೃಶ್ಯ ಸಿ.ಸಿ. ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ಮಾರ್ಗದಲ್ಲಿ ಸಂಚರಿಸಿದವರ ಮೊಬೈಲ್‌ ಸಂಖ್ಯೆ ಸಂಗ್ರಹಿಸಿದ್ದ ಪೊಲೀಸರು, ಆರೋಪಿಗಳಿಗೆ ಹುಡುಕಾಟ ಆರಂಭಿಸಿದ್ದರು.

‘ಬಂಧನದ ಭೀತಿಯಿಂದ ಆರೋಪಿಗಳಾದ ರಾಘವೇಂದ್ರ, ಕಾರ್ತಿಕ್‌ ಅಲಿಯಾಸ್‌ ಕಪ್ಪೆ, ನಿಖಿಲ್‌ ನಾಯಕ್‌ ಅವರು ಠಾಣೆಗೆ ಬಂದು ಮೊದಲು ಶರಣಾದರು. ಹಣಕಾಸಿನ ವಿಚಾರಕ್ಕೆ ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ಅನುಮಾನಗೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಇತರೆ ಆರೋಪಿಗಳ ಹೆಸರು ಹೇಳಿದ್ದರು. ರಾಘವೇಂದ್ರ, ನಿಖಿಲ್‌ ನಾಯಕ್‌ ಹಾಗೂ ಕೇಶವಮೂರ್ತಿಗೆ ಆರೋಪಿ ದೀಪಕ್‌ ಮುಂಗಡವಾಗಿ ₹5 ಲಕ್ಷ ನೀಡಿ, ‘ದರ್ಶನ್‌ ಅವರ ಹೆಸರು ಎಲ್ಲಿಯೂ ಹೇಳದಂತೆ ಸೂಚಿಸಿದ್ದ. ಕಾರ್ತಿಕ್‌, ರಾಘವೇಂದ್ರ ಜೈಲಿಗೆ ಹೋದ ನಂತರ ಅವರ ಮನೆಯವರಿಗೆ ಹಣ ತಲುಪಿಸುವುದಾಗಿ ಆಮಿಷವೊಡ್ಡಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಶರಣಾದ ಆರೋಪಿಗಳ ಹೇಳಿಕೆ ಆಧರಿಸಿ ಆರ್‌.ಆರ್‌. ನಗರದ ಗೋಪುರದ ಬಳಿ ವಿನಯ್‌, ದೀಪಕ್‌ ಹಾಗೂ ಬಿಡದಿ ಟೋಲ್‌ ಬಳಿ ಪವನ್‌ ಹಾಗೂ ನಂದೀಶ್‌, ನಾಗರಾಜ್‌, ಲಕ್ಷ್ಮಣ್‌, ಪ್ರದೂಷ್‌ ಎಂಬುವವರನ್ನು ಬಂಧಿಸಲಾಯಿತು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ರೇಣುಕಸ್ವಾಮಿ ಕರೆತರುವಂತೆ ನಟ ದರ್ಶನ್‌ ಸೂಚಿಸಿದ್ದರು. ಅವರ ಸೂಚನೆ ಮೇರೆಗೆ ರೇಣುಕಸ್ವಾಮಿ ಅವರನ್ನು ಅಪಹರಿಸಿ ತಂದು ಜಯಣ್ಣ ಅವರ ಗೋದಾಮಿನಲ್ಲಿ ಹಗ್ಗದಿಂದ ಕಟ್ಟಿ ರಿಪೀಸಿನ ತುಂಡು, ದೊಣ್ಣೆಯಿಂದ ಹಲ್ಲೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅಕ್ಕ (ಪವಿತ್ರಾಗೌಡ) ಹಾಗೂ ಅಣ್ಣ (ದರ್ಶನ್‌) ಇದ್ದರು ಎಂದು ಆರೋಪಿಗಳು ಹೇಳಿದ್ದರು’ ಎಂದು ಗೊತ್ತಾಗಿದೆ.

‘ಹಲ್ಲೆ ನಡೆಸಿದ ನಂತರ ದರ್ಶನ್ ಹಾಗೂ ಪವಿತ್ರಾಗೌಡ ಶೆಡ್‌ನಿಂದ ತೆರಳಿದ್ದರು. ನಂತರ ಉಳಿದ ಆರೋಪಿಗಳು ರೇಣುಕಸ್ವಾಮಿ ಮೇಲೆ ತೀವ್ರ ಹಲ್ಲೆ ನಡೆಸಿದ್ದರಿಂದ ಮೃತಪಟ್ಟಿದ್ದರು. ಅದಾದ ಮೇಲೆ ಮೃತದೇಹ ವಿಲೇವಾರಿಗೆ ಸುಪಾರಿ ನೀಡಲಾಗಿತ್ತು. ಹೊರರಾಜ್ಯಕ್ಕೆ ಮೃತದೇಹ ಕೊಂಡೊಯ್ದು ಎಸೆಯುವುದಾಗಿ ಆರೋಪಿಗಳು ದೀಪಕ್‌ಗೆ ತಿಳಿಸಿದ್ದರು. ಅದು ಸಾಧ್ಯವಾಗದ ಕಾರಣ ಸುಮನಹಳ್ಳಿಯ ಕಾಲುವೆಯಲ್ಲಿ ಹಾಕಿದ್ದರು’ ಎಂದು ಪೊಲೀಸರು ಹೇಳಿದರು.

ರೇಣುಕಸ್ವಾಮಿ ಮೃತಪಟ್ಟ ಬಳಿಕ ಅಂದು ರಾತ್ರಿ ದರ್ಶನ್‌ ಹಾಗೂ ಆರೋಪಿಗಳ ನಡುವೆ ಹಲವು ಬಾರಿ ಮೊಬೈಲ್‌ ಸಂಭಾಷಣೆ ಹಾಗೂ ವಾಟ್ಸ್ಆ್ಯಪ್‌ ಚಾಟ್‌ ನಡೆದಿತ್ತು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

ಕೃತ್ಯದ ಜಾಗದಲ್ಲಿ ಸ್ಥಳ ಮಹಜರು:

ಆರೋಪಿಗಳಾದ ರಾಘವೇಂದ್ರ, ಕಾರ್ತಿಕ್‌, ನಿಖಿಲ್‌ ನಾಯಕ್‌, ಕೇಶವಮೂರ್ತಿಯನ್ನು ಬುಧವಾರ ಮಧ್ಯಾಹ್ನ ಸುಮನಹಳ್ಳಿ ಸೇತುವೆ ಬಳಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಯಿತು. ಎಷ್ಟು ಗಂಟೆಗೆ ಮೃತದೇಹ ತಂದು ಎಸೆಯಲಾಯಿತು. ಯಾರೂ ಸೂಚಿಸಿದ್ದರು ಎಂಬ ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಕೇಳಿದರು. ಸಂಜೆ ದರ್ಶನ್‌, ಪವಿತ್ರಾಗೌಡ ಸೇರಿದಂತೆ 13 ಆರೋಪಿಗಳನ್ನು ಪಟ್ಟಣಗೆರೆಯ ಶೆಡ್‌ಗೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಯಿತು. ಇದಕ್ಕೂ ಮೊದಲು ಎಫ್‌ಎಸ್‌ಎಲ್‌ ತಂಡದವರು ಈ ಶೆಡ್‌ಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಈ ವೇಳೆ ರಕ್ತದ ಕಲೆಗಳು ಇರುವುದು ಪತ್ತೆಯಾಗಿತ್ತು ಎಂದು ಮೂಲಗಳು ಹೇಳಿವೆ.

ಆರೋ‍ಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸಲಾಯಿತು.
ಆರೋ‍ಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸಲಾಯಿತು.

ರೌಡಿ ಶೀಟ್ ತೆರೆಯುವ ಚಿಂತನೆ?

ದರ್ಶನ್‌ ವಿರುದ್ಧ ಈ ಹಿಂದೆಯೂ ಹಲವು ಪ್ರಕರಣ ದಾಖಲಾಗಿದ್ದವು. ಅವರ ವಿರುದ್ಧ ರೌಡಿಶೀಟ್‌ ತೆರೆಯುವ ಸಂಬಂಧ ಪೊಲೀಸ್‌ ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ಗೊತ್ತಾಗಿದೆ. ‘ಪೊಲೀಸರು ತನಿಖೆ ನಡೆಸುತ್ತಿದ್ಧಾರೆ. ನಮ್ಮನ್ನು ಕೇಳಿ ಸೆಕ್ಷನ್ ಹಾಕುವುದಿಲ್ಲ. ತನಿಖೆಯಾದ ಮೇಲೆ ಏನು ಶಿಫಾರಸು ಮಾಡುತ್ತಾರೆಂದು ನೋಡೋಣ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ದರ್ಶನ್‌ ವಿರುದ್ಧ ರೌಡಿಶೀಟ್‌ ತೆರೆಯುವ ಸಂಬಂಧ ಪ್ರತಿಕ್ರಿಯಿಸಿದ್ದಾರೆ. ‘ಪ್ರಕರಣದಿಂದ ದರ್ಶನ್‌ ಹೆಸರು ಕೈಬಿಡುವಂತೆ ಪೊಲೀಸರ ಮೇಲೂ ಒತ್ತಡ ತರಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಕೆಲವರು ಕರೆ ಮಾಡಿದ್ದರು. ಆದರೆ ತನಿಖಾಧಿಕಾರಿಗಳು ಇದಕ್ಕೆ ಮಣಿಯದೇ ದರ್ಶನ್‌ ಬಂಧನಕ್ಕೆ ಜೂನ್‌ 10ರ ರಾತ್ರಿಯೇ ಮೈಸೂರಿಗೆ ತೆರಳಿದ್ದರು’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಪೊಲೀಸರ ಮುಂದಿನ ತನಿಖೆ ಹೇಗಿರಲಿದೆ?

  • ಆರೋಪಿಗಳ ಮೊಬೈಲ್‌ಗಳಲ್ಲಿ ಇರುವ ದತ್ತಾಂಶ ಹಾಗೂ ಮೊಬೈಲ್‌ ಕರೆ ವಿವರಗಳ ಸಂಗ್ರಹ

  • ಆರೋಪಿಗಳನ್ನು ಚಿತ್ರದುರ್ಗಕ್ಕೆ ಕರೆದೊಯ್ದು ಸ್ಥಳ ಮಹಜರು

  • ಸಾಕ್ಷಿದಾರರ ಹೇಳಿಕೆ ದಾಖಲಿಸುವ ಪ್ರಕ್ರಿಯೆ

  • ಕೊಲೆ ಒಪ್ಪಿಕೊಳ್ಳಲು ನೀಡಿದ್ದ ನಗದು ಹಣ ಜಪ್ತಿಗೆ ಕ್ರಮ

  • 2ನೇ ಆರೋಪಿ ಪ್ರಭಾವಿಯಾಗಿದ್ದು ಸಾಕ್ಷ್ಯನಾಶಪಡಿಸಿರುವ ಸಾಧ್ಯತೆಯಿದ್ದು ಮಾಹಿತಿ ಸಂಗ್ರಹ

ಅಭಿಮಾನಿಗಳ ಜಮಾವಣೆ: ಲಾಠಿ ಪ್ರಹಾರ

ಪೊಲೀಸ್‌ ಕಸ್ಟಡಿಯಲ್ಲಿರುವ ಆರೋಪಿ ದರ್ಶನ್‌ ಪವಿತ್ರಾಗೌಡ ಸೇರಿದಂತೆ 13 ಆರೋಪಿಗಳನ್ನು ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯ ಸೆಲ್‌ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಅಲ್ಲಿಂದಲೇ ಸ್ಥಳ ಮಹಜರು ನಡೆಸಲು ಕರೆದೊಯ್ಯಲಾಗುತ್ತಿದೆ. ಆರೋಪಿಗಳನ್ನು ಕರೆದೊಯ್ಯುವ ಮಾರ್ಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾವಣೆ ಆಗುತ್ತಿದ್ದಾರೆ. ಠಾಣೆ ಎದುರೂ ಬುಧವಾರ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಸ್ಥಳದಿಂದ ತೆರಳುವಂತೆ ಪೊಲೀಸರು ಮನವಿ ಮಾಡಿದ್ದರೂ ಜನರು ಕದಲಿಲ್ಲ. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಆಗ ಜನರು ದಿಕ್ಕಾಪಾಲಾಗಿ ಓಡಿದರು. ಠಾಣೆಯ ಸುತ್ತಮುತ್ತ ಭದ್ರತೆಗೆ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ.

‘ದರ್ಶನ್ ಕೃತ್ಯ ಎಸಗಿಲ್ಲ’

ಬುಧವಾರ ಬೆಳಿಗ್ಗೆ ಅನ್ನಪೂರ್ಣೇಶ್ವರಿನಗರ ಠಾಣೆಗೆ ಆಗಮಿಸಿದ್ದ ನಟನ ಪರ ವಕೀಲ ನಾರಾಯಣಸ್ವಾಮಿ ಅವರೊಂದಿಗೆ ದರ್ಶನ್ ಅವರು ಕೆಲ ಸಮಯ ಚರ್ಚಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಾರಾಯಣಸ್ವಾಮಿ ‘ಕೃತ್ಯ ನಡೆದ ಸ್ಥಳಕ್ಕೆ ಹೋಗಿದ್ದ ಮಾತ್ರಕ್ಕೆ ದರ್ಶನ್ ಕೊಲೆ ಮಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ದರ್ಶನ್ ಕೃತ್ಯ ಎಸಗಿದ್ದಾರೆ ಎಂಬುದು ಸರಿಯಲ್ಲ. ರೇಣುಕಸ್ವಾಮಿಗೆ ಆರೋಗ್ಯ ಸಮಸ್ಯೆ ಇತ್ತು ಎಂದು ಹೇಳಲಾಗಿದೆ. ಅಲ್ಲದೆ ರೇಣುಕಸ್ವಾಮಿ ಮೇಲೆ ಕಂಡು ಬಂದಿರುವ ಗಾಯದ ಗುರುತುಗಳು ನಾಯಿ ಕಚ್ಚಿರುವುದು. ಎಲ್ಲವೂ ಕೋರ್ಟ್‌ನಲ್ಲಿ ತೀರ್ಮಾನವಾಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT