ಬೆಂಗಳೂರು: ಮೈಸೂರು, ಶಿವಮೊಗ್ಗ ಹಾಗೂ ತುಮಕೂರು ಮಹಾನಗರ ಪಾಲಿಕೆಗಳ ಚುನಾವಣೆಗೆ ಮುಂದಿನ ವಾರ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಗದಿಗೆಪ್ಪ ಸಣ್ಣಬಸಪ್ಪ ಸಂಗ್ರೇಶಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಆದೇಶದಂತೆ ಅವಧಿ ಮುಕ್ತಾಯಗೊಂಡ ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಅವಧಿಯ ಒಳಗೆ ಸರ್ಕಾರ ಕ್ಷೇತ್ರ ಹಾಗೂ ಮೀಸಲಾತಿ ಅಧಿಸೂಚನೆ ಹೊರಡಿಸದೇ ಇದ್ದಾಗ ಹಿಂದಿನ ಚುನಾವಣೆಯಲ್ಲಿ ನಿಗದಿ ಮಾಡಲಾಗಿದ್ದ ಕ್ಷೇತ್ರ ವಿಂಗಡಣೆ ಹಾಗೂ ಮೀಸಲಾತಿ ಅನ್ವಯವೇ ಚುನಾವಣೆ ನಡೆಸಬಹುದು. ಅವಧಿ ಮುಗಿದ ಮೂರು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ವೇಳಾಪಟ್ಟಿ ಸಿದ್ಧವಾಗಿದೆ. ಅಧಿಸೂಚನೆ ಹೊರಡಿಸಲಾಗುತ್ತದೆ ಎಂದರು.