ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಸೆಂಬರ್ ಅಂತ್ಯದೊಳಗೆ ‘ನಮ್ಮ ಕ್ಲಿನಿಕ್‌’: ಸಚಿವ ಸುಧಾಕರ್‌

Published : 20 ಸೆಪ್ಟೆಂಬರ್ 2022, 4:39 IST
ಫಾಲೋ ಮಾಡಿ
Comments

ಬೆಂಗಳೂರು: ‘ಡಿಸೆಂಬರ್ ಅಂತ್ಯ ದೊಳಗೆ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ 438 ‘ನಮ್ಮ ಕ್ಲಿನಿಕ್‌’ಗಳನ್ನು ಆರಂಭಿಸಲಾಗುವುದು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ವಿಧಾನಪರಿಷತ್‍ನಲ್ಲಿ ಜೆಡಿಎಸ್‌ನ ಸಿ.ಎನ್.ಮಂಜೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ‘ಬೆಂಗಳೂರಿನಲ್ಲಿ 243, ಇತರ ಜಿಲ್ಲೆಗಳಲ್ಲಿ 195 ‘ನಮ್ಮ ಕ್ಲಿನಿಕ್‌’ಗಳನ್ನು ಒಟ್ಟು ₹ 155.77 ಕೋಟಿ ವೆಚ್ಚದಲ್ಲಿ ಆರಂಭಿಸಲಾಗುವುದು’ ಎಂದರು.

‘ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 107 ಪ್ರಾಥ ಮಿಕ ಚಿಕಿತ್ಸಾ ಕೇಂದ್ರಗಳ ಕೊರತೆ ಇದ್ದು, ಶೀಘ್ರವೇ ಸ್ಥಾಪಿಸಲಾಗುವುದು. ನಗರ ಪ್ರದೇಶದ ಕೊಳೆಗೇರಿಗಳು ಹಾಗೂ ದುರ್ಬಲ ವರ್ಗದವರು ವಾಸಿಸುವ ಸ್ಥಳ ಗಳಲ್ಲಿ ಪ್ರಾಥಮಿಕ ಚಿಕಿತ್ಸೆಗೆ ಸೌಲಭ್ಯ ಒದಗಿ ಸಲು ‘ನಮ್ಮ ಕ್ಲಿನಿಕ್’ ಆರಂಭಿಸಲಾಗುವುದು. ಈ ಕ್ಲಿನಿಕ್‍ಗಳಲ್ಲಿ 12 ಸೇವೆಗಳನ್ನು ಒದಗಿಸಲಾಗುತ್ತದೆ’ ಎಂದರು.

ಕಾಂಗ್ರೆಸ್ಸಿನ ಅಬ್ದುಲ್ ಜಬ್ಬಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ರಾಜ್ಯದಲ್ಲಿ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ‘ಚಿಕಿತ್ಸಾ ವ್ಯವಸ್ಥೆಗೆ ಸಂಬಂಧಿತ ದೂರು ಇತ್ಯರ್ಥಪಡಿಸಲು ಹೊಸ ವ್ಯವಸ್ಥೆ ರೂಪಿಸಲಾಗಿದೆ. ಈವರೆಗೆ 895 ದೂರುಗಳ ಪೈಕಿ 686 ದೂರು ಇತ್ಯರ್ಥಪಡಿಸಲಾಗಿದೆ’ ಎಂದರು.

‘ಆರೋಗ್ಯ ವಿವಿ ಶೀಘ್ರ ಅರ್ಚಕರಹಳ್ಳಿಗೆ’
ಬಿಜೆಪಿಯ ಅ. ದೇವೇಗೌಡ ಪ್ರಶ್ನೆಗೆ ಉತ್ತರಿಸಿದ ಡಾ.ಕೆ. ಸುಧಾಕರ್‌, ‘ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವನ್ನು 2–3 ತಿಂಗಳ ಒಳಗಾಗಿ ರಾಮನಗರದ ಅರ್ಚಕರಹಳ್ಳಿಗೆ ಸ್ಥಳಾಂತರಿಸಲಾಗುವುದು’ ಎಂದರು.

‘ಈ ವಿಶ್ವವಿದ್ಯಾಲಯಕ್ಕೆ 2007ರಲ್ಲಿ ರಾಜ್ಯ ಸರ್ಕಾರ 216 ಎಕರೆ ಜಮೀನು ಸ್ವಾಧೀಪಡಿಸಿಕೊಂಡಿದ್ದು, ಅದರಲ್ಲಿ 71 ಎಕರೆಯನ್ನು ವಿಶ್ವವಿದ್ಯಾಲಯಕ್ಕೆ, ಉಳಿದ 145 ಎಕರೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕೆಲವರು ಜಮೀನಿನ ತಕರಾರಿಗೆ ಸಂಬಂಧಪಟ್ಟಂತೆ ಕೋರ್ಟ್‌ ಮೆಟ್ಟಿಲೇರಿರುವುದರಿಂದ ವಿಳಂಬವಾಗಿದೆ. ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ವಿಶ್ವವಿದ್ಯಾಲಯ ಸ್ಥಳಾಂತರಕ್ಕೆ ನಿರ್ಣಯ ಕೈಗೊಳ್ಳಲಾಗಿದೆ. ಈ ಬಜೆಟ್‍ನಲ್ಲಿ ₹ 600 ಕೋಟಿ ಅನುದಾನ ಮೀಸಲಿಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT