ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇದು ನಿಮ್ಮ ಅರ್ಥಶಾಸ್ತ್ರದ ಪರಿಣತಿಯೇ?: ಆರ್‌.ಅಶೋಕ

Published 26 ಜೂನ್ 2024, 15:49 IST
Last Updated 26 ಜೂನ್ 2024, 15:49 IST
ಅಕ್ಷರ ಗಾತ್ರ

ಬೆಂಗಳೂರು: ‘ಹಾಲಿನ ಪ್ಯಾಕೆಟ್‌ಗೆ 50 ಎಂಎಲ್‌ ಹೆಚ್ಚು ಹಾಲು ಹಾಕಿ, ಅದರ ಹೊರೆಯನ್ನು ಗ್ರಾಹಕರಿಗೆ ಹೊರಿಸುವುದು ನಿಮ್ಮ ಅರ್ಥ ಶಾಸ್ತ್ರದ ಪರಿಣತಿಯೇ’ ಎಂದು ವಿಧಾನಸಭೆ ವಿರೋಧಪಕ್ಷ ನಾಯಕ ಆರ್‌.ಅಶೋಕ ಅವರು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದ್ದಾರೆ.

ಹಾಲಿನ ಉತ್ಪಾದನೆ ಹೆಚ್ಚಾಗಿದ್ದರೆ ನಂದಿನಿ ಬ್ರ್ಯಾಂಡ್‌ನ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸುವ ಕೆಲಸ ಮಾಡಬೇಕಿತ್ತು ಎಂದು ಅವರು ಹೇಳಿದ್ದಾರೆ.

ಹಾಲಿನ ಪುಡಿ, ಐಸ್‌ ಕ್ರೀಂ, ಬೆಣ್ಣೆ, ತುಪ್ಪ, ಚೀಸ್‌, ಪನೀರ್, ಸಿಹಿತಿಂಡಿಗಳು ಮುಂತಾದ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಹೆಚ್ಚಿಸಿ ಅದಕ್ಕೆ ಹೊರ ರಾಜ್ಯಗಳಲ್ಲಿ ಮಾರುಕಟ್ಟೆ ಕಲ್ಪಿಸುವ ವ್ಯವಸ್ಥೆ ಮಾಡಬೇಕು. ಹೊರ ದೇಶಗಳಿಗೆ ರಫ್ತು ಮಾಡುವ ರೀತಿ ಅಭಿವೃದ್ಧಿ ಮಾಡಿ. ಇದರಿಂದ ಹಾಲಿಗೆ ಮಾರುಕಟ್ಟೆಯೂ ಸಿಗುತ್ತದೆ. ಮೌಲ್ಯವರ್ಧಿತ ಉತ್ಪನ್ನಗಳಿಂದ ರೈತರಿಗೆ, ಡೈರಿಗಳಿಗೆ ಹೆಚ್ಚಿನ ಲಾಭವೂ ಸಿಗುತ್ತದೆ ಎಂದರು.

ಹೆಚ್ಚು ಹಾಲುಕೊಡುವಂತೆ ಕೇಳಿದ್ಯಾರು:

ಹಾಲಿನ ಪ್ಯಾಕೆಟ್‌ನಲ್ಲಿ 50 ಎಂಎಲ್‌ ಹೆಚ್ಚು ಹಾಲು ಹಾಕಿ ಕೊಡಿ ಎಂದು ನಿಮಗೆ ಯಾರಾದರೂ ಮನವಿ ಪತ್ರ ಕೊಟ್ಟಿದ್ದರೆ ಎಂದು ಬಿಜೆಪಿ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಪ್ರಶ್ನಿಸಿದ್ದಾರೆ.

ಹಾಲಿನ ಬೆಲೆ ಏರಿಕೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಸಬೂಬು ನೀಡಲಾರಂಭಿಸಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರ್ಕಾರದ ಈ ನಿರ್ಧಾರ ಮನೆ ಮುರುಕತನದ್ದು. ಜನಕ್ಕೆ ಬೇಡವಾದ ಜನವಿರೋಧಿ ನಿರ್ಧಾರವಿದು. ರಾಜ್ಯದಲ್ಲಿ 20 ಲಕ್ಷ ಮೇವಿನ ಅವಶ್ಯವಿದೆ. ಎಂಟು ಲಕ್ಷ ಟನ್‌ ಮೇವನ್ನು ಮಾತ್ರ ಕೊಡುತ್ತಿದ್ದಾರೆ. ಈ ಸರ್ಕಾರಕ್ಕೆ ಮೇವು ಕೊಡುವ ಯೋಗ್ಯತೆಯೂ ಇಲ್ಲ ಎಂದು ರವಿಕುಮಾರ್ ಟೀಕಿಸಿದರು.

ಹಾಲು ಹೆಚ್ಚು ಕೊಡುವ ನೆಪದಲ್ಲಿ ಹೆಚ್ಚು ಹಣ ಕೇಳುವುದು ಜನದ್ರೋಹಿ ನಿರ್ಧಾರ. ಈ ನಿರ್ಧಾರವನ್ನು ಕೂಡಲೇ ವಾಪಸ್ ಪಡೆಯಬೇಕು. ಹಾಲಿನ ದರ ಏರಿಕೆ ಪರಿಣಾಮ ಚಹಾ, ಕಾಫಿ, ಹೋಟೆಲ್ ತಿಂಡಿ ದರ ಹೆಚ್ಚಳದ ವಿಷಯ ಕೇಳಿ ಬರುತ್ತಿದೆ. ಮದ್ಯದ ಬೆಲೆ ಈಗಾಗಲೇ ಹೆಚ್ಚಿಸಿದ್ದೀರಿ. ಬೊಕ್ಕಸ ತುಂಬಿಸುವ ಕುಕೃತ್ಯವಿದು ರವಿಕುಮಾರ್ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT