ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Elephant Arjuna | ಕಾರ್ಯಾಚರಣೆ ವೇಳೆ ಮುನ್ನೆಚ್ಚರಿಕೆ ವಹಿಸುವಲ್ಲಿ ಲೋಪವಾಯಿತೇ?

Published 4 ಡಿಸೆಂಬರ್ 2023, 19:11 IST
Last Updated 4 ಡಿಸೆಂಬರ್ 2023, 19:11 IST
ಅಕ್ಷರ ಗಾತ್ರ

ಮೈಸೂರು: ಹಾಸನದಲ್ಲಿ ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುವ ಮುನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದರೇ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. 65 ವರ್ಷ ವಯಸ್ಸಿನ ‘ಅರ್ಜುನ’ನನ್ನು ಬಳಸಿದ್ದು ಸರಿಯೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ.

‘ಮುನ್ನೆಚ್ಚರಿಕೆಯ ಕೊರತೆ, ರಕ್ಷಣಾತ್ಮಕ ಕ್ರಮಗಳ ಅಜ್ಞಾನ, ವೈಜ್ಞಾನಿಕ ವಿಧಾನಗಳ ಕೊರತೆಯು ಇಂತಹ ಬಲಶಾಲಿ ಪ್ರಾಣಿಗಳ ನಿರ್ದಯ ಹತ್ಯೆಗೆ ಕಾರಣವಾಗುತ್ತವೆ. ಸೂಕ್ತ ವೈಜ್ಞಾನಿಕ ಕ್ರಮಗಳನ್ನು ಅನುಸರಿಸುವುದು ಅಗತ್ಯವಿದೆ’ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಅರ್ಜುನನ ಸಾವನ್ನು ಒಂದು ರೀತಿಯಲ್ಲಿ ಕೊಲೆ ಎಂದೇ ಹೇಳಬೇಕಾಗುತ್ತದೆ’ ಎಂದೂ ಹೇಳಲಾಗಿದೆ. ‘ವನ್ಯಜೀವಿಗಳ ಪ್ರಾಣಕ್ಕೆ ಸಂಚಕಾರ ಆಗದಂತೆ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಬೇಕು’ ಎಂಬುದೂ ಮುನ್ನೆಲೆಗೆ ಬಂದಿದೆ.

‘ಆ ಕಾಡಾನೆಗೆ ಮದವೇರಿತ್ತೇ’ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ.

‘ಅರ್ಜುನನನ್ನು ಕೊಂದಿರುವ ಕಾಡಾನೆಯು ಮದವೇರಿದ್ದರಿಂದ ಈ ದುರ್ಘಟನೆ ನಡೆದಿರಬಹುದು’ ಎಂದು ವನ್ಯಜೀವಿ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

‘ಮದಕ್ಕೆ ಬರುವ ಒಂಟಿಸಲಗದ ಹಣೆಯಲ್ಲಿ ದ್ರವವೊಂದು ಸೋರುತ್ತಿರುತ್ತದೆ. ಅದರ ವಾಸನೆಗೆ ಮದ ಮತ್ತಷ್ಟು ಏರುತ್ತದೆ. ಆಗ, ಅದು ತನಗಿಂತ ದೊಡ್ಡ ವಯಸ್ಸಿನ ಆನೆಯ ಮೇಲೂ ಎರಗಿ ಬರುತ್ತದೆ. ಆದ್ದರಿಂದ ಕಾಡಾನೆಗೆ ಮದವೇರಿದ್ದ  ಪಕ್ಷದಲ್ಲಿ, ಸೆರೆ ಕಾರ್ಯಾಚರಣೆ ನಡೆಸಿದ್ದೇ ತಪ್ಪು. 3 ತಿಂಗಳು ಬಿಟ್ಟು ನಡೆಸಬಹುದಿತ್ತು’ ಎನ್ನುತ್ತಾರೆ ಅವರು.

‘ಕಾಡಾನೆಗಳ ಸೆರೆ ಕಾರ್ಯಾಚರಣೆಯು ಬಹಳ ಕಷ್ಟದ ಕೆಲಸ. ಬಹಳ ವಿಶ್ಲೇಷಣೆ ನಡೆಸಿ ಕೈಗೊಳ್ಳಬೇಕಾಗುತ್ತದೆ. ಈ ದಿಸೆಯಲ್ಲಿ ಅಧಿಕಾರಿಗಳು, ಸಿಬ್ಬಂದಿಗೆ ಜಾಗೃತಿ ಮೂಡಿಸಬೇಕಾಗುತ್ತದೆ. ಆನೆಗಳ ಬಗ್ಗೆ ಅಧಿಕೃತವಾಗಿ ಸಲಹೆ, ತಿಳಿವಳಿಕೆ ನೀಡಬಲ್ಲ ವಿಜ್ಞಾನಿಗಳ ಕೊರತೆಯೂ ಸದ್ಯ ನಮ್ಮಲ್ಲಿ ಕಾಡುತ್ತಿದೆ. ಒಟ್ಟಾರೆಯಾಗಿ ಸಿದ್ಧತೆಯಲ್ಲೇ ಸಮಸ್ಯೆ ಕಂಡುಬರುತ್ತಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಈ ಘಟನೆಯನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಬೇಕು. ತಜ್ಞರ ನೆರವು ಪಡೆದುಕೊಳ್ಳಬೇಕು. ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ಮಾಲತಿ ಪ್ರಿಯಾ, ‘ಅರ್ಜುನ ಆನೆಯು ಕಾರ್ಯಾಚರಣೆಯಲ್ಲಿ ಬಹಳ ಅನುಭವಿಯಾಗಿದ್ದರಿಂದ ಬಳಸಲಾಗುತ್ತಿತ್ತು. ನಮ್ಮ ಶಿಬಿರದಲ್ಲಿ ಅದಕ್ಕಿಂತ ಅನುಭವಿ ಯಾವುದೂ ಇಲ್ಲ. ಹಿಂದೆಂದೂ ಅಹಿತಕರ ಘಟನೆಗಳು ನಡೆದಿರಲಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT