ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊರಗಿದ ‘ನಿಕ್ಷಯ್ ಪೋಷಣ್’ ಯೋಜನೆ: ಕ್ಷಯ ರೋಗಿಗಳಿಗೆ ಸಿಕ್ಕಿಲ್ಲ ಆರ್ಥಿಕ ನೆರವು

ರಾಜ್ಯದಲ್ಲಿದ್ದಾರೆ 81,585 ರೋಗಿಗಳು
Published 1 ಫೆಬ್ರುವರಿ 2024, 23:30 IST
Last Updated 1 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಮೈಸೂರು: ಕ್ಷಯ ರೋಗಿಗಳ ಪೌಷ್ಟಿಕ ಆಹಾರಕ್ಕೆಂದು ಆರ್ಥಿಕ ನೆರವು ಒದಗಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ‘ನಿಕ್ಷಯ್ ಪೋಷಣ್’ ಯೋಜನೆಯಡಿ ಒಂದು ವರ್ಷದಿಂದ ಹಣ ಬಂದಿಲ್ಲ.

ಸರ್ಕಾರವೇ ಉಚಿತ ಚಿಕಿತ್ಸೆ ನೀಡುತ್ತಿದ್ದು, ಪೂರಕವಾಗಿ ಪೌಷ್ಟಿಕಾಂಶಗಳನ್ನು ಪಡೆಯಲೆಂದು ಪ್ರತಿ ತಿಂಗಳು ₹ 500 ನೀಡುವ ಯೋಜನೆ ಇದು. 6 ತಿಂಗಳು, 8 ತಿಂಗಳು, 2 ವರ್ಷ ಅಥವಾ ರೋಗದ ತೀವ್ರತೆ ಆಧರಿಸಿ ಚಿಕಿತ್ಸೆ ಪೂರ್ಣಗೊಳ್ಳುವವರೆಗೆ ರೋಗಿಗಳ ಬ್ಯಾಂಕ್‌ ಖಾತೆಗಳಿಗೆ ಹಣವನ್ನು ನೇರವಾಗಿ ಜಮಾ ಮಾಡಲಾಗುತ್ತಿತ್ತು.

ಆದರೆ, ರಾಜ್ಯದಲ್ಲಿ ‘ಖಜಾನೆ–2’ ಅನುಷ್ಠಾನದಲ್ಲಿ ಆಗಿರುವ ತಾಂತ್ರಿಕ ತೊಂದರೆಯಿಂದಾಗಿ ರೋಗಿಗಳಿಗೆ ಹಣ ಸಿಗುತ್ತಿಲ್ಲ. ರಾಜ್ಯದಲ್ಲಿ ಒಟ್ಟು 81,585 ಕ್ಷಯ ರೋಗಿಗಳಿದ್ದಾರೆ.

ಅನುಕೂಲವಾಗುತ್ತಿತ್ತು: ‘ಆರು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ಹಣ ಬಂದಿಲ್ಲ. ತಾಂತ್ರಿಕ ತೊಂದರೆಯಾಗಿದೆ, ಹಣ ಬಂದೇ ಬರುತ್ತದೆ ಎಂದು ಕ್ಷಯ ರೋಗ ನಿರ್ಮೂಲನಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಸಕಾಲದಲ್ಲಿ ಹಣ ಸಿಕ್ಕಿದ್ದರೆ ಪೌಷ್ಟಿಕ ಆಹಾರ ಖರೀದಿಸಲು ಅನುಕೂಲವಾಗುತ್ತಿತ್ತು’ ಎಂದು ಗಾಂಧಿನಗರದ ರೋಗಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಲವು ಜಿಲ್ಲೆಗಳಲ್ಲಿ ಸಂಘ–ಸಂಸ್ಥೆಗಳ ಮೂಲಕ ಪೌಷ್ಟಿಕ ಆಹಾರದ ಕಿಟ್, ಪ್ರೊಟೀನ್‌ ಪುಡಿಯ ಡಬ್ಬಿ ಕೊಡಿಸುವ ಪ್ರಯತ್ನವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಮೈಸೂರಲ್ಲೂ ಈ ಕೆಲಸ ನಡೆದಿದೆ. ಕೆಲವು ವೈದ್ಯರು ರೋಗಿಗಳನ್ನು ದತ್ತು ಪಡೆದಿದ್ದಾರೆ. ಆದರೆ, ಎಲ್ಲರಿಗೂ ಒದಗಿಸಲು ಸಾಧ್ಯವಾಗಿಲ್ಲ.

ನಡೆದಿದೆ ಅಪ್‌ಡೇಟ್ ಪ್ರಕ್ರಿಯೆ: ‘ಒಂದು ವರ್ಷದಿಂದ ರೋಗಿಗಳಿಗೆ ಹಣ ಬಿಡುಗಡೆಯಾಗಿಲ್ಲ. ನಾವು 2022ರ ಸೆಪ್ಟೆಂಬರ್‌ವರೆಗೆ ನಮ್ಮ ಖಾತೆಯಿಂದ ನೇರವಾಗಿ ಬ್ಯಾಂಕ್‌ ಮೂಲಕ ಹಣ ಪಾವತಿಸುತ್ತಿದ್ದೆವು (ಪಿಎಫ್‌ಎಂಎಸ್‌ನಿಂದ). ಖಜಾನೆ–2 ತಂತ್ರಾಂಶ ಬಂದ ನಂತರ ತೊಡಕಾಗಿದೆ. ಹೀಗಾಗಿ, ಸೇವಾಸಿಂಧು ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡುವಂತೆ ಇಲಾಖೆಯಿಂದ ತಿಳಿಸಲಾಗಿದೆ. ಆ ಪ್ರಕ್ರಿಯೆ ನಡೆಸುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಬಾಕಿ ಬರಬೇಕಾದ ಫಲಾನುಭವಿಗಳ ಆಧಾರ್‌ ಸಂಖ್ಯೆ, ಬ್ಯಾಂಕ್ ಖಾತೆ ಮಾಹಿತಿ ದಾಖಲಿಸಲಾಗುತ್ತಿದೆ. ಆರೋಗ್ಯ ಇಲಾಖೆಯಿಂದಲೇ ಫೆಬ್ರುವರಿ ಅಂತ್ಯದೊಳಗೆ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ತಿಳಿಸಲಾಗಿದೆ’ ಎಂದರು.

‘ಬಿ‍ಪಿಎಲ್‌ ಹಾಗೂ ಎಪಿಎಲ್‌ ಪಡಿತರ ಚೀಟಿಯುಳ್ಳ ಎಲ್ಲರಿಗೂ ಆರ್ಥಿಕ ನೆರವು ದೊರೆಯುತ್ತದೆ. ಎಪಿಎಲ್‌ನ ಚೀಟಿ ಹೊಂದಿರುವ ಕೆಲವರು ಬ್ಯಾಂಕ್‌ ಖಾತೆ ಸಂಖ್ಯೆ ಕೊಡುವುದಿಲ್ಲ, ಕೆಲವರು ಕೀಳರಿಮೆ ಕಾರಣದಿಂದ ಹಣ ಬೇಡವೆನ್ನುತ್ತಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT