ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು–ಕೇರಳ ಪ್ರವಾಹ: ಸಂತ್ರಸ್ತರ ಮನಸ್ಸಿಗೆ ಶಕ್ತಿ ತುಂಬಲು ನಿಮ್ಹಾನ್ಸ್ ಯತ್ನ

Last Updated 24 ಆಗಸ್ಟ್ 2018, 9:31 IST
ಅಕ್ಷರ ಗಾತ್ರ

ಬೆಂಗಳೂರು: ಕೊಡಗು ಮತ್ತು ಕೇರಳಗಳಲ್ಲಿ ಪ್ರವಾಹ ಸಂಕಷ್ಟಕ್ಕೆ ಸಿಲುಕಿದವರು ಮತ್ತೆ ಹೊಸ ಬದುಕು ಕಟ್ಟಿಕೊಳ್ಳಲು ಹಲವು ತಿಂಗಳುಗಳೇ ಬೇಕು. ಆದರೆ ಈ ಪೈಕಿ ಶೇ10ರಷ್ಟು ಜನರು ಗಂಭೀರ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ನಿಮ್ಹಾನ್ಸ್‌ನ ವೈದ್ಯರು ಅಭಿಪ್ರಾಯಪಡುತ್ತಾರೆ.

‘ಸಕಾಲದಲ್ಲಿ ವೈದ್ಯಕೀಯ ಮತ್ತು ಮಾನವೀಯ ನೆರವು ದೊರೆತರೆ ಈ ಸಮಸ್ಯೆಯನ್ನು ಗಣನೀಯ ಸಂಖ್ಯೆಯಲ್ಲಿ ಕಡಿಮೆ ಮಾಡಬಹುದು’ ಎನ್ನುತ್ತಾರೆ ನಿಮ್ಹಾನ್ಸ್‌ನ ಸಮಾಜಕಾರ್ಯ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಶೇಖರ್.

ನೈಸರ್ಗಿಕ ವಿಕೋಪಗಳಿಗೆ ತುತ್ತಾದ ಶೇ90ರಷ್ಟು ಜನರ ಮನಸು ಘಾಸಿಗೊಂಡಿರುತ್ತದೆ. ಅವರ ಮನಸ್ಸಿನಲ್ಲಿ ನಿಸರ್ಗ ವಿಕೋಪಗಳ ಘಟನಾವಳಿಗಳು ಮತ್ತೆಮತ್ತೆ ಪುನರಾವರ್ತಿಸುತ್ತಲೇ ಇರುತ್ತವೆ. ಇಂಥವರು ಕೆಲ ಸಮಯದವರೆಗೆ ಹೆದರಿಕೆ ಮತ್ತು ಉದ್ವಿಗ್ನತೆಯ ಭಾವ ಅನುಭವಿಸುತ್ತಿರುತ್ತಾರೆ.

ಪುನರ್ವಸತಿ ಶಿಬಿರಗಳಲ್ಲಿ ತಮ್ಮಂತೆಯೇ ಜೀವ ಉಳಿಸಿಕೊಂಡ ಇತರರ ಜೊತೆಗೆ ಮಾತನಾಡುವಾಗಲೂ ಪ್ರವಾಹ, ಮಳೆ, ಭೂಕುಸಿತದ ಕಥೆಗಳನ್ನೇ ಪರಸ್ಪರ ಹಂಚಿಕೊಳ್ಳುತ್ತಾರೆ. ಕಳೆದುಕೊಂಡ ಮನೆ, ದನಗಳು, ಸಾಕುಪ್ರಾಣಿಗಳ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಈ ಮೂಲಕ ಮತ್ತೆಮತ್ತೆ ದುಃಖಕ್ಕೆ ಜಾರುತ್ತಾರೆ. ಬಹುತೇಕ ಜನರು ಕ್ರಮೇಣ ಈ ಆಘಾತದಿಂದ ಹೊರಬರುತ್ತಾರೆ. ಅದರೆ ಶೇ10ರಷ್ಟು ಜನರ ಮನಸ್ಸಿನಲ್ಲಿ ನೋವು ಗಟ್ಟಿಯಾಗಿ ಕೂತುಬಿಡುತ್ತದೆ. ಇವರು ಚೇತರಿಸಿಕೊಳ್ಳಲು ಇತರರಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ.

ನಿಮ್ಹಾನ್ಸ್ ಸಹಾಯಹಸ್ತ

ಎಲ್ಲ ವಯೋಮಾನದ ಪ್ರವಾಹ ಸಂತ್ರಸ್ತರಿಗೆ ಸಾಂತ್ವನ ನೀಡಲು ನಿಮ್ಹಾನ್ಸ್ ‘ಸೈಕೊ–ಸೋಷಿಯಲ್ ಸಪೋರ್ಟ್’ ಕಾರ್ಯಕ್ರಮ ಜಾರಿ ಮಾಡಿದೆ. ಪುನರ್ವಸತಿ ಕೇಂದ್ರಗಳಂಥ ಸೀಮಿತ ಪ್ರದೇಶದಲ್ಲಿರುವ ಮಕ್ಕಳು ಒಂದು ರೀತಿಯ ಬಂಧನವನ್ನು ಅನುಭವಿಸುತ್ತಾರೆ. ಅವರನ್ನು ಚಿತ್ರಕಲೆ, ಆಟಗಳು ಮತ್ತು ಖುಷಿಹೆಚ್ಚಿಸುವ ಚಟುವಟಿಕೆಗಳಲ್ಲಿ ತೊಡಗಿಸುವುದು ಅಗತ್ಯ. ಈ ಪ್ರಯತ್ನವನ್ನು ಇದೀಗ ಆರೋಗ್ಯ ಇಲಾಖೆ ಮಾಡುತ್ತಿದೆ.

ನೈಸರ್ಗಿಕ ವಿಕೋಪಗಳಲ್ಲಿ ತಮ್ಮವರನ್ನು ಕಳೆದುಕೊಂಡರು, ಆಸ್ತಿಹಾನಿಯಿಂದ ನಷ್ಟ ಅನುಭವಿಸಿದ ವೃದ್ಧರು ಪಾಪಪ್ರಜ್ಞೆಯಿಂದ ನಲುಗಿ ಹೋಗುತ್ತಾರೆ. ‘ನನಗೆ ಏಕೆ ಹೀಗಾಯ್ತು’ ಎನ್ನುವ ಪ್ರಶ್ನೆ ಅವರನ್ನು ಬಾಧಿಸುತ್ತಿರುತ್ತದೆ. ಇಂಥವರಿಗೆ ಆಪ್ತಸಮಾಲೋಚನೆ ಅತ್ಯಗತ್ಯ.

‘‍ಪ್ರವಾಹ ಸಂತ್ರಸ್ತರ ಮಾನಸಿಕ ಆರೋಗ್ಯ ಕಾಳಜಿಗಾಗಿ ಕೇರಳ ಸರ್ಕಾರವು ಸಹಾಯ ಯಾಚಿಸಿದ ಹಿನ್ನೆಲೆಯಲ್ಲಿ ಎಂಟು ಜನರ ತಂಡವನ್ನು ರವಾನಿಸಲಾಗಿದೆ. ಕಳೆದ ಮಂಗಳವಾರ ಮನಃಶಾಸ್ತ್ರಜ್ಞರು, ಸಮಾಜ ಸೇವಕರು ಮತ್ತು ದಾದಿಯರಿದ್ದ 20 ಜನರ ಮತ್ತೊಂದು ತಂಡವನ್ನು ಕೇರಳಕ್ಕೆ ಕಳುಹಿಸಿಕೊಡಲಾಯಿತು’ ಎಂದು ಶೇಖರ್ ತಿಳಿಸಿದರು.

‘ಕೊಡಗಿಗೆ ನಾಲ್ಕು ಜನರ ತಂಡವನ್ನು ನಿಮ್ಹಾನ್ಸ್‌ನಸಮಾಜಕಾರ್ಯ ಮನಃಶಾಸ್ತ್ರ ವಿಭಾಗ ವಿಭಾಗವು ಕಳುಹಿಸಲಿದೆ. ದೇಶದ ಇತರ ರಾಜ್ಯಗಳ ಜನರಿಗೆ ಹೋಲಿಸಿದರೆ ಕೇರಳದ ಜನರು ಬೇಗ ಚೇತರಿಸಿಕೊಳ್ಳುತ್ತಾರೆ. ಕೇರಳ ಮತ್ತು ಕೊಡಗು ಜಿಲ್ಲೆಯಲ್ಲಿರುವ ಸ್ಥಳೀಯರಿಗೂ ನಮ್ಮ ತಂಡ ತರಬೇತಿ ನೀಡುತ್ತದೆ. ಈ ಪ್ರಯತ್ನ ಸತತವಾಗಿ ಮುಂದುವರಿಯಲಿದೆ ಎಂದು ಹೇಳುತ್ತಾರೆ’ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT