ಬೆಂಗಳೂರು: ರಾಜ್ಯದಲ್ಲಿ ಹೊಸ ಗ್ರಾಮಗಳ ರಚನೆ ಸದ್ಯಕ್ಕಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ವಿಧಾನಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ದುರ್ಯೋಧನ ಐಹೊಳೆ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಹಣಕಾಸು ಇಲಾಖೆಯ ಶಿಫಾರಸಿನ ಅನ್ವಯ ಹೊಸ ಗ್ರಾಮಗಳ ರಚನೆ ಮಾಡುವಂತಿಲ್ಲ. ಜನಗಣತಿಯ ಹೊಸ ಮಾಹಿತಿಯೂ ಇಲ್ಲವಾಗಿದೆ. ಹೊಸ ಗಣತಿ ಆದ ಬಳಿಕ ಪರಿಶೀಲಿಸಬಹುದು ಎಂದು ಹೇಳಿದರು.
150 ಪಿಡಿಓಗಳ ನೇಮಕ ಪ್ರಕ್ರಿಯೆ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ವೃಂದದ ನೇರ ನೇಮಕಾತಿ ಕೋಟಾದಲ್ಲಿ ಖಾಲಿ ಇರುವ 385 ಹುದ್ದೆಗಳಲ್ಲಿ 150 ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ ಎಂದೂ ಪ್ರಿಯಾಂಕ್ ತಿಳಿಸಿದರು.
ನೇರ ನೇಮಕಾತಿ ಪ್ರಕ್ರಿಯೆ ಮುಗಿದ ಬಳಿಕ ಉಳಿದ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್‌ನ ಬಸನಗೌಡ ದದ್ದಲ್ ಅವರ ಪ್ರಶ್ನೆಗೆ ಉತ್ತರಿಸಿದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್(1) 604, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್(2) 719 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ 345 ಹುದ್ದೆಗಳು ಖಾಲಿ ಇವೆ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.