ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾ ಮೇಲ್ದಂಡೆ ಯೋಜನೆ: ಅನುದಾನ ಪ್ರಶ್ನೆಯೇ ಇಲ್ಲ ಎಂ‌ದ ಕೇಂದ್ರ

Published : 8 ಆಗಸ್ಟ್ 2024, 19:11 IST
Last Updated : 8 ಆಗಸ್ಟ್ 2024, 19:11 IST
ಫಾಲೋ ಮಾಡಿ
Comments

ನವದೆಹಲಿ: ‘ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಯನ್ನು ಪ್ರಸ್ತುತ ಕೇಂದ್ರ ಸರ್ಕಾರದ ಯಾವುದೇ ಯೋಜನೆಯಡಿ ಸೇರಿಸಿಲ್ಲ. ಹೀಗಾಗಿ, ಯೋಜನೆಗೆ ಅನುದಾನ ಮಂಜೂರು ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌.ಪಾಟೀಲ ಸ್ಪಷ್ಟಪಡಿಸಿದರು. 

ಲೋಕಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಪರಿಗಣಿಸಬೇಕು ಎಂದು ಕರ್ನಾಟಕ ಸರ್ಕಾರ ಹಲವು ವರ್ಷಗಳಿಂದ ಒತ್ತಾಯಿಸುತ್ತಿದೆ. 

‘ಆದಾಗ್ಯೂ, ಯೋಜನೆಯ ತಾಂತ್ರಿಕ–ಆರ್ಥಿಕ ಕಾರ್ಯಸಾಧ್ಯತೆಯನ್ನು ಸಚಿವಾಲಯದ ಸಂಬಂಧಿತ ಸಮಿತಿಯು ಅಂಗೀಕರಿಸಿದೆ. ಯೋಜನೆಯ ಮೌಲ್ಯಮಾಪನ ಮಾಡಿರುವ ಸಾರ್ವಜನಿಕ ಹೂಡಿಕೆ ಮಂಡಳಿಯು ₹5,300 ಕೋಟಿಗಳ ಕೇಂದ್ರದ ಅನುದಾನಕ್ಕೆ ಶಿಫಾರಸು ಮಾಡಿದೆ. 2023–24ರ ಕೇಂದ್ರ ಬಜೆಟ್‌ನಲ್ಲಿ ಇದನ್ನು ಒದಗಿಸಲಾಗಿದೆ’ ಎಂದು ಅವರು ತಿಳಿಸಿದರು. 

ಅದಾದ ನಂತರ, ರಾಜ್ಯ ಸರ್ಕಾರದ ಕೋರಿಕೆಯಂತೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹಣಕಾಸಿನ ನೆರವು ನೀಡಲು ಸಚಿವಾಲಯವು 2023ರ ಆಗಸ್ಟ್‌ನಲ್ಲಿ ಪ್ರಸ್ತಾವನೆ ಸ್ವೀಕರಿಸಿತು. ಆದರೆ, ಈ ಸಚಿವಾಲಯದ ಚಾಲ್ತಿಯಲ್ಲಿರುವ ಯೋಜನೆಗಳ ಅಡಿಯಲ್ಲಿ ಭಾಗಶಃ ಹಣಕಾಸಿನ ನೆರವಿಗಾಗಿ ಯೋಜನೆಯನ್ನು ಸೇರಿಸಲು ಯೋಜನೆಯ ಪರಿಷ್ಕೃತ ಹಣಕಾಸಿನ ವಿವರಗಳನ್ನು ಒದಗಿಸಬೇಕು. ಇದರಲ್ಲಿ ಈವರೆಗೆ ಮಾಡಿರುವ ವೆಚ್ಚ, ಬಾಕಿ ವೆಚ್ಚ ಹಾಗೂ ಬಾಕಿ ವೆಚ್ಚದ ಆಧಾರದಲ್ಲಿ ಕೇಂದ್ರದ ಅರ್ಹ ಪರಿಷ್ಕೃತ ಸಹಾಯ ಮತ್ತಿತರ ಅಂಶಗಳನ್ನು ಒಳಗೊಂಡಿರಬೇಕು. ಆ ಬಳಿಕವೇ ಅನುಮೋದನೆ ನೀಡಲಾಗುತ್ತದೆ. ಇದಲ್ಲದೆ, ಯೋಜನೆಯ ಸೇರ್ಪಡೆಗೆ ಸಂಬಂಧಿಸಿದ ನಿರ್ಧಾರವು ಲಭ್ಯವಿರುವ ನಿಧಿಗಳು, ಯೋಜನೆಯಡಿಯಲ್ಲಿ ಭೌಗೋಳಿಕ ಹಂಚಿಕೆ, ಯೋಜನೆಯ ಆದ್ಯತೆ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ’ ಎಂದು ಅವರು ಸ್ಪಷ್ಟಪಡಿಸಿದರು. 

‘ನೀರು ರಾಜ್ಯದ ವಿಷಯ. ನೀರಾವರಿ ಯೋಜನೆಗಳ ರೂಪಿಸುವುದು, ಅನುಷ್ಠಾನ ಹಾಗೂ ಅಗತ್ಯ ಅನುದಾನ ಒದಗಿಸುವುದು ಆಯಾ ರಾಜ್ಯ ಸರ್ಕಾರದ ಹೊಣೆಗಾರಿಕೆ. ಆದರೂ, ಭಾಗಶಃ ಹಣಕಾಸು ನೆರವಿಗೆ ಗುರುತಿಸಲಾದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರವು ತನ್ನ ಚಾಲ್ತಿಯಲ್ಲಿರುವ ಯೋಜನೆಗಳ ಅಡಿಯಲ್ಲಿ ಹಣಕಾಸು ಒದಗಿಸುತ್ತದೆ. ಇದರ ಹೊರತಾಗಿ, ಕೇಂದ್ರ ಜಲ ಆಯೋಗವು ಅಂತರ-ರಾಜ್ಯ ಮಧ್ಯಮ ಮತ್ತು ಪ್ರಮುಖ ನೀರಾವರಿ ಯೋಜನೆಗಳ ತಾಂತ್ರಿಕ-ಆರ್ಥಿಕ ಮೌಲ್ಯಮಾಪನವನ್ನು ಮಾಡಬೇಕಾಗಿದೆ’ ಎಂದು ಅವರು ಹೇಳಿದರು. 

‘ಭದ್ರಾ ಮೇಲ್ದಂಡೆ ಯೋಜನೆಯನ್ನು 2026ರ ಮಾರ್ಚ್‌ನೊಳಗೆ ಪೂರ್ಣಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ಸರ್ಕಾರ ಮಾಹಿತಿ ನೀಡಿದೆ’ ಎಂದರು. 

ಪ್ರಭಾ ಮಲ್ಲಿಕಾರ್ಜುನ್‌ ಮಾತನಾಡಿ, ‘ಈ ಯೋಜನೆಯು ಹನಿ ನೀರಾವರಿ ಮೂಲಕ ಕೇಂದ್ರ ಕರ್ನಾಟಕದ ಬರಪೀಡಿತ ದಾವಣಗೆರೆ, ಚಿಕ್ಕಮಗಳೂರು, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ 2.25 ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸುವ ಗುರಿ ಹೊಂದಿದೆ. ಈ ಯೋಜನೆ ಮೂಲಕ 367 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಈ ಯೋಜನೆಗೆ ₹5,300 ಕೋಟಿ ಅನುದಾನ ನೀಡುವುದಾಗಿ ಕೇಂದ್ರ ಪ್ರಕಟಿಸಿ ಒಂದೂವರೆ ವರ್ಷ ಕಳೆದಿದೆ. ಅನುದಾನ ಬಿಡುಗಡೆ ಆಗಿಲ್ಲ’ ಎಂದು ಗಮನ ಸೆಳೆದರು. 

ಕೋಲಾರ, ಚಿಕ್ಕಬಳ್ಳಾಪುರಕ್ಕಿಲ್ಲ ಕೃಷ್ಣಾ ನೀರು
‘ನದಿ ಜೋಡಣೆ ಯೋಜನೆಯಡಿ ಕೃಷ್ಣಾ ನದಿಯ ನೀರನ್ನು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಒದಗಿಸುವ ಪ್ರಸ್ತಾವ ಇಲ್ಲ’ ಎಂದು ಜಲಶಕ್ತಿ ಸಚಿವರು ತಿಳಿಸಿದರು. ಲೋಕಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಕೋಲಾರ ಸಂಸದ ಎಂ. ಮಲ್ಲೇಶ್‌ ಬಾಬು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ‘ಕೃಷ್ಣಾ–ಪೆನ್ನಾರ್ ನದಿಗಳ ಜೋಡಣೆ ಮಾಡುವ ಯೋಜನೆಯ ಕರಡು ವಿಸ್ತೃತ ಯೋಜನಾ ವರದಿ ಸಿದ್ಧವಾಗಿದೆ. ಬೇಡ್ತಿ– ವರದಾ ನದಿ ಜೋಡಣೆಗೆ ವಿಸ್ತೃತ ಯೋಜನಾ ವರದಿ ಸಿದ್ಧವಾಗಿದೆ. ನೇತ್ರಾವತಿ–ಹೇಮಾವತಿ ನದಿಗಳ ಜೋಡಣೆಗೆ ಪೂರ್ವ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲಾಗಿದೆ’ ಎಂದು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT