ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿದೆ, ಇನ್ನು ಮುಂದೆ ಬರೆಯಲಾಗದು: SL ಭೈರಪ್ಪ

ಮುಂಬೈ ವಿ.ವಿ. ಕನ್ನಡ ವಿಭಾಗದ ವಿದ್ಯಾರ್ಥಿಗಳ ಬರವಣಿಗೆಗೆ ಮೆಚ್ಚುಗೆ
Last Updated 19 ಫೆಬ್ರುವರಿ 2023, 16:29 IST
ಅಕ್ಷರ ಗಾತ್ರ

ಬೆಂಗಳೂರು: ‘ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿದೆ. ಇನ್ನು ಮುಂದೆ ಬರೆಯೋಕೆ ಸಾಧ್ಯ ಇಲ್ಲ’ ಎಂದು ಸಾಹಿತಿ ಎಸ್‌.ಎಲ್‌. ಭೈರಪ್ಪ ಹೇಳಿದರು.

ಎಸ್‌.ಎಲ್‌. ಭೈರಪ್ಪ ಸಾಹಿತ್ಯ ಪತ್ರಿಷ್ಠಾನದ ವತಿಯಿಂದ ಸಾಹಿತ್ಯ ವಿಮರ್ಶಕಿ ಹಾಗೂ ಲೇಖಕಿ ಎಲ್‌.ವಿ. ಶಾಂತಕುಮಾರಿ ಅವರಿಗೆ ‘ಎಸ್‌.ಎಲ್‌. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಭಾನುವಾರ ಮಾತನಾಡಿದರು.

‘ಶಾಂತಕುಮಾರಿ ವಯಸ್ಸಾದರೂ ಚೈತನ್ಯದಿಂದ ಚೆನ್ನಾಗಿ ಬರೆಯುತ್ತಿದ್ದಾರೆ. ಇನ್ನೂ ಬರೆಯಲಿ. ನಾನು ಅವರಿಗಿಂತ ಏಳು ವರ್ಷ ದೊಡ್ಡವನು. ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿದೆ. ಕೆಲವು ಬಾರಿ ಲೇಖಕರ ಹೆಸರು ಜ್ಞಾಪಕಕ್ಕೆ ಬರುತ್ತದೆ, ಪುಸ್ತಕದ ಹೆಸರು ನೆನಪಾಗೊಲ್ಲ. ಸಂಜೆ
ಯವರೆಗೆ ಯೋಚಿಸಿ ನನ್ನ ಕಾರ್ಯದರ್ಶಿ ಲಕ್ಷ್ಮಿ ಅವರಿಗೆ ಹೇಳಿ ಕಂಪ್ಯೂಟರ್‌ನಲ್ಲಿ ಹುಡುಕಿಸುತ್ತೇನೆ. ಎಷ್ಟೋ ಸಲ ಅತ್ಯಂತ ಗಣ್ಯ ವ್ಯಕ್ತಿ ನನ್ನ ಪಕ್ಕದಲ್ಲಿದ್ದರೂ ಅವರ ಹೆಸರನ್ನು ಮಾಧ್ಯಮಗೋಷ್ಠಿಯಲ್ಲೇ ಮರೆತುಹೋಗಿದ್ದೇನೆ. ಹೀಗಾಗಿ ಇನ್ನು ಮುಂದೆ ಬರೆಯೋಕೆ ಸಾಧ್ಯ ಇಲ್ಲ’ ಎಂದು ಭೈರಪ್ಪ ಸ್ಪಷ್ಟವಾಗಿ ಹೇಳಿದರು.

‘ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಎಂ.ಎ. ಅಧ್ಯಯನ ಮಾಡುತ್ತಿರುವವರಿಗೆ ಪ್ರಬಂಧ, ವಿಮರ್ಶೆಗಳನ್ನು
ಬರೆಯಲು ಬರುವುದಿಲ್ಲ’ ಎಂದು ಭೈರಪ್ಪ ಅಭಿಪ್ರಾಯಪಟ್ಟರು.

‘ಈ ಹಿಂದೆ ಕನ್ನಡ ಎಂ.ಎ. ಮಾಡುತ್ತಿರುವಾಗಲೇ ಚೆನ್ನಾಗಿ ಬರೆಯಲು ಬರುವ ಹಲವರಿದ್ದರು. ಇದೀಗ ಆ ಕಾಲ ಇಲ್ಲ. ಆದರೆ, ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೆಚ್ಚು ಚೆನ್ನಾಗಿ ಬರೆಯುತ್ತಿದ್ದಾರೆ’ ಎಂದರು.

‘ಬನಾರಸ್‌, ದೆಹಲಿ– ಜೆಎನ್‌ಯು, ಮದ್ರಾಸ್‌, ಮಧುರೈ ವಿಶ್ವವಿದ್ಯಾಲಯಗಳಲ್ಲಿದ್ದ ಕನ್ನಡ ವಿಭಾಗವನ್ನು ಮುಚ್ಚಲಾಗಿದೆ. ಉಳಿದಿರುವುದು ಮುಂಬೈ ವಿಶ್ವವಿದ್ಯಾಲಯದಲ್ಲಿ ಮಾತ್ರ. ಅಲ್ಲಿ ಕನ್ನಡಿಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡದವರು ಹೆಚ್ಚಿದ್ದಾರೆ. ದಕ್ಷಿಣ ಕನ್ನಡದವರಲ್ಲಿರುವ ಕ್ರಿಯಾಶೀಲತೆ ನಮ್ಮ ಮೈಸೂರು ಭಾಗದವರಿಗೆ ಇಲ್ಲ. ಹೀಗಾಗಿ ಅಲ್ಲಿರುವ ದಕ್ಷಿಣ ಕನ್ನಡದವರು ಹಿಡಿದ ಕೆಲಸ ಮಾಡುತ್ತಾರೆ. ಅಲ್ಲಿ ಕನ್ನಡ ವಿಭಾಗ ಮುಂದುವರಿಯಲು ಶ್ರಮಿಸುತ್ತಿದ್ದಾರೆ’ ಎಂದರು.

‘ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತು ಹಲವು ವರ್ಷಗಳಾದರೂ ಅದಕ್ಕೆ ಪೂರಕವಾದ ಕೆಲಸಗಳಾಗಿಲ್ಲ’ ಎಂದು ಶಾಂತಕುಮಾರಿ ವಿಷಾದ ವ್ಯಕ್ತಪಡಿಸಿದರು. ಲೇಖಕ ಎಸ್‌.ಆರ್‌. ರಾಮಸ್ವಾಮಿ, ಶತವಧಾನಿ ಆರ್‌. ಗಣೇಶ್‌, ಕಾದಂಬರಿಕಾರ್ತಿ ಸಹನಾ ವಿಜಯಕುಮಾರ್‌, ‘ಪ್ರೇಕ್ಷಾ’ ಸಹ ಸಂಪಾದಕ ಬಿ.ಎನ್‌. ಶಶಿಕಿರಣ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT