ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು: ತಮಿಳುನಾಡಿಗೆ ತೊಂದರೆ ಇಲ್ಲ– ಡಿಕೆಶಿ

Published 1 ಜೂನ್ 2023, 16:36 IST
Last Updated 1 ಜೂನ್ 2023, 16:36 IST
ಅಕ್ಷರ ಗಾತ್ರ

ಬೆಂಗಳೂರು: ‘ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ನಮಗೆ ತಮಿಳುನಾಡಿನ ಮೇಲೆ ದ್ವೇಷ ಮಾಡುವ, ಯುದ್ಧ ಮಾಡುವ ಉದ್ದೇಶವಿಲ್ಲ. ಅಲ್ಲಿರುವವರು ನಮ್ಮ ಅಣ್ಣತಮ್ಮಂದಿರೆ‘ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಮೇಕೆದಾಟು ಯೋಜನೆ ಜಾರಿಗೆ ಸಿದ್ಧತೆ ನಡೆಸುವಂತೆ ಡಿ.ಕೆ. ಶಿವಕುಮಾರ್‌ ನೀಡಿದ್ದ ಹೇಳಿಕೆಗೆ ತಮಿಳುನಾಡಿನ ಜಲಸಂಪನ್ಮೂಲ ಸಚಿವ ದೊರೈ ಮುರುಗನ್‌ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ತಮಿಳುನಾಡಿನವರು ಆತಂಕಪಡುವ ಅಗತ್ಯವಿಲ್ಲ. ಈ ಯೋಜನೆಯಿಂದ ಯಾವುದೇ ತೊಂದರೆ ಇಲ್ಲ. ಹೀಗಾಗಿ, ಅವರಿಗೆ ಹೃದಯ ಶ್ರೀಮಂತಿಕೆ ಇರಲಿ. ನಮ್ಮಲ್ಲೂ ಹೃದಯ ಶ್ರೀಮಂತಿಕೆಯಿದೆ. ನಾವು ಜಗಳವಾಡಿ ಕೋರ್ಟ್ ಕಚೇರಿ ಅಲೆದಿದ್ದು ಸಾಕು. ಸೌಹಾರ್ದತೆಯಿಂದ ಕುಡಿಯುವ ನೀರು ಹಾಗೂ ರೈತರಿಗೆ ಅನುಕೂಲವಾಗುವ ಯೋಜನೆಗೆ ಸಹಕರಿಸಬೇಕು’ ಎಂದು ತಮಿಳುನಾಡು ಸರ್ಕಾರಕ್ಕೆ ಅವರು ಮನವಿ ಮಾಡಿದರು.

‘ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೂ ಅನುಕೂಲವಾಗುತ್ತದೆ. ಸಮುದ್ರಕ್ಕೆ ಹೋಗುವ ನೀರು ತಡೆದು ಅದನ್ನು ಕಾವೇರಿ ಭಾಗದ ಜನರ ಬಳಕೆಗೆ ಅವಕಾಶ ಮಾಡಿಕೊಡಲಾಗುವುದು. ಕಾವೇರಿ ನದಿಗೆ ಅಣೆಕಟ್ಟುಗಳ ಬೀಗ ಕೇಂದ್ರ ಸರ್ಕಾರದ ಕೈಯಲ್ಲಿದೆ. ತಮಿಳುನಾಡಿಗೆ ಯಾವಾಗ ಎಷ್ಟು ನೀರು ಬಿಡಬೇಕು ಎಂದು ಅವರು ತೀರ್ಮಾನಿಸಿ ಬಿಡುತ್ತಾರೆ’ಎಂದರು.

‘ಮೇಕೆದಾಟು ಯೋಜನೆ ಆಗ್ರಹಿಸಿ ನಾವು ಪಾದಯಾತ್ರೆ ಮಾಡಿದ ನಂತರ ಹಿಂದಿನ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ₹ 1 ಸಾವಿರ ಕೋಟಿ ಅನುದಾನ ಮೀಸಲಿಟ್ಟಿತ್ತು. ಆದರೆ, ಆ ಹಣ ಖರ್ಚು ಮಾಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT