ಬೆಂಗಳೂರು: ರಾಜ್ಯದ ಎಲ್ಲ ಶಾಲೆಗಳಲ್ಲಿ 7ನೇ ತರಗತಿಗೆ ಇದೇ ಮಾರ್ಚ್‌ನಲ್ಲಿಪಬ್ಲಿಕ್ ಪರೀಕ್ಷೆಯ ಬದಲಿಗೆ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ (ಸಿಇಇ) ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
‘ರಾಜ್ಯಮಟ್ಟದಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದರೂ ಆಯಾ ಶಾಲೆಯಲ್ಲೇ ಪರೀಕ್ಷೆ ನಡೆಯಲಿದೆ. ಮೌಲ್ಯ ಮಾಪನವನ್ನು ಜಿಲ್ಲಾ ಮಟ್ಟದಲ್ಲಿ ಮಾಡಲಾಗುತ್ತದೆ. ಅನುತ್ತೀರ್ಣ ಮಾಡುವುದಿಲ್ಲ, ಮಕ್ಕಳ ಕಲಿಕಾ ಮಟ್ಟದ ಬಗ್ಗೆ ಪ್ರಮಾಣಪತ್ರ ನೀಡಲಾಗುತ್ತದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಎಂಟನೇ ತರಗತಿಯಲ್ಲಿ ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು ಸಿಸಿಟಿ ಪ್ರಮಾಣಪತ್ರದ ಆಧಾರದಲ್ಲಿ ನಿರ್ಧರಿಸಿ, ಯಾವುದರಲ್ಲಿ ಕಡಿಮೆ ಅಂಕ ಇದೆಯೋ ಆ ವಿಷಯದಲ್ಲಿ ವಿಶೇಷ ತರಬೇತಿ ನೀಡುವುದಕ್ಕೆ ಶಿಕ್ಷಕರಿಗೆ ತಿಳಿಸಲಾಗುತ್ತದೆ. ಶಿಕ್ಷಕರಿಗೆ ಇದಕ್ಕಾಗಿ ವಿಶೇಷ ತರಬೇತಿಯನ್ನೂ ಜಿಲ್ಲಾ ಡಯಟ್ ವತಿಯಿಂದ ನೀಡಲಾಗುತ್ತದೆ’ ಎಂದು ಹೇಳಿದರು.
8, 9ನೇ ತರಗತಿಗೂ ಸಿಇಇ?: 7ನೇ ತರಗತಿಯ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆಯ ಫಲಿತಾಂಶ ಮತ್ತು ಅದರ ಯಶಸ್ಸನ್ನು ನೋಡಿಕೊಂಡು, 8 ಮತ್ತು 9ನೇ ತರಗತಿಗಳಿಗೂ ಇಂತಹುದೇ ಸಿಇಇ ನಡೆಸಬೇಕೇ ಎಂಬ ಬಗ್ಗೆ ನಿರ್ಧರಿಸಲಾಗುವುದು. ಸದ್ಯಕ್ಕಂತೂ ಆ ಯೋಚನೆ ಇಲ್ಲ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
ಮಕ್ಕಳ ಕಲಿಕಾ ಸಾಮರ್ಥ್ಯ ಮತ್ತು ಶಿಕ್ಷಕರ ಬೋಧನಾ ಗುಣಮಟ್ಟ ತಿಳಿಯುವುದು ಅಗತ್ಯ ಎಂಬ ಕಾರಣಕ್ಕೆ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಬರಲಾಗಿದೆ
ಎಸ್.ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ