ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ

Last Updated 15 ಜೂನ್ 2019, 18:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬುಧವಾರವಷ್ಟೇ ಮನೆಯಲ್ಲಿ ಮದುವೆಯ ಕಲರವವಿತ್ತು. ಶುಕ್ರವಾರ ಸಾವಿನ ದುಗುಡ, ಶನಿವಾರ ಎಲ್ಲವೂ ಮುಗಿದ ನಿರ್ವಾತ.. ಮೂರು ದಿನಗಳಲ್ಲಿ ನೂರು ಅನುಭವ ಕಂಡ ಈ ಮನೆಯವರ ಕಂಗಳಲ್ಲೀಗ ನೀರಿಲ್ಲ. ಮಾತುಗಳಿಗೆ ಧ್ವನಿಯಿಲ್ಲ. ಯಾರು ಮಾತನಾಡಲು ಯತ್ನಿಸಿದರೂ ಮೌನವೇ ಉತ್ತರ.

ಹರಿಯಾಣದ ರೋಹ್ಟಕ್‌ದಲ್ಲಿ ಆತ್ಮಹತ್ಯೆ ಮಾಡಿಕೊಂಡ ಓಂಕಾರ ಬರಿದಾಬಾದ್‌ ಮನೆಯ ಚಿತ್ರಣವಿದು. ಮನೆಯ ಮಗಳು ಮದುವೆಯಾಗಿ ಗಂಡನ ಮನೆಗೆ ಹೊರಡಲು ವಿದಾಯ ಹೇಳಬೇಕಿದ್ದ ದಿನವೇ ಮನೆಯ ಮಗ ಮಸಣ ಸೇರಿದಂತಾಗಿದೆ.

ಜೂನ್‌ 12 ರಂದು ಹುಬ್ಬಳ್ಳಿಯಲ್ಲಿ ನಡೆದ ತಂಗಿ ಸ್ನೇಹಾ ಮದುವೆಗೆ ಬರಬೇಕೆಂದುಕೊಂಡಿದ್ದ ಓಂಕಾರನಿಗೆ ರಜೆ ಸಿಕ್ಕಿರಲಿಲ್ಲ. ಸಂಭ್ರಮದಲ್ಲಿ ಭಾಗವಹಿಸಲಿಲ್ಲ ಎಂಬ ಕೊರಗು ಆತನನ್ನು ಕಾಡಿತ್ತು. ಅಮ್ಮನೊಟ್ಟಿಗೆ ದೂರವಾಣಿ ಕರೆ ಮಾಡಿ ನೋವು ಹಂಚಿಕೊಂಡಿದ್ದ.

‘ಅಮ್ಮ ನಾನು ತಂಗಿ ಮದುವೆಗೆ ಬರಬೇಕು. ಇಲ್ಲಿ ರಜೆ ನೀಡುತ್ತಿಲ್ಲ. ಮಾನಸಿಕವಾಗಿಯೂ ತುಂಬಾ ಕಿರುಕುಳ ನೀಡುತ್ತಿದ್ದಾರೆ. ಮನೆಗೆ ಬಂದು ಬಿಡುತ್ತೇನೆ’ ಎಂದು ಹೇಳಿದ್ದ. ಆತ ಬಂದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ.

ಮದುವೆ ಸಂಭ್ರಮದಲ್ಲಿ ನಮ್ಮೆಲ್ಲರೊಂದಿಗೆ ಪಾಲ್ಗೊಳ್ಳುತ್ತಿದ್ದ’ ಎಂದು ಆತನ ಸಂಬಂಧಿಕರು ಓಂಕಾರ ದೂರವಾಣಿ ಕರೆ ಮಾಡಿದ್ದನ್ನು ತಿಳಿಸಿದರು.

‘ಅಣ್ಣ ರ‍್ಯಾಂಕ್‌ ವಿದ್ಯಾರ್ಥಿಯಾಗಿದ್ದ. ರಜೆ ಸಿಕ್ಕಾಗಲೆಲ್ಲ ಮನೆಗೆ ಬಂದು ಹೋಗುತ್ತಿದ್ದ. ಕುಟುಂಬದವರ ಪ್ರೀತಿ ಪಾತ್ರದ ಹುಡುಗ’ ಎಂದು ಹೇಳುವಷ್ಟರಲ್ಲಿ ತಮ್ಮ ಮಹಾಂತೇಶ ಅವರ ಗಂಟಲು ಕಟ್ಟಿತ್ತು.

‘ಉತ್ತಮ ವೈದ್ಯನಾಗಬೇಕೆನ್ನುವ ಕನಸು ಕಂಡಿದ್ದ. ಅವನೇ ನಮಗೆ ಪ್ರೇರಣೆಯಾಗಿದ್ದ. ಎಂಬಿಬಿಎಸ್‌ ಮುಗಿಸಿ, ಸ್ನಾತಕೋತ್ತರ ಪದವಿಗೆ ಮನೆಬಿಟ್ಟು ಹೋದವ ಮರಳಲೇ ಇಲ್ಲ. ಮೆರಿಟ್‌ ಸ್ಟೂಡೆಂಟ್‌ ಆಗಿದ್ದ. ಅಪ್ಪ–ಅಮ್ಮನೂ ಆತನ ಬಗ್ಗೆ ಬಹಳಷ್ಟು ಕನಸು ಕಟ್ಟಿಕೊಂಡಿದ್ದರು. ಸಾಯುವಂಥ ಯುವಕನಲ್ಲ. ಆದರೆ, ಅದ್ಯಾವ ಕೆಟ್ಟ ಘಳಿಗೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನುವ ಯೋಚನೆ ಬಂದಿತೋ ತಿಳಿಯುತ್ತಿಲ್ಲ. ಅಣ್ಣ ಇಲ್ಲ ಎಂಬುದನ್ನು ಕಲ್ಪಿಸಿಕೊಳ್ಳಲು ಸಹ ಆಗುತ್ತಿಲ್ಲ’ ಎಂದು ಅವರು ಅಣ್ಣನನ್ನು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT