ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ತರಗತಿ: ಶೇ 57 ವಿದ್ಯಾರ್ಥಿಗಳಿಗೆ ಹಾಜರಾಗಲು ಸಾಧ್ಯವಾಗಿಲ್ಲ

ಬೆಂಗಳೂರು, ಧಾರವಾಡ, ಮೈಸೂರು ಜಿಲ್ಲೆಯಲ್ಲಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಸಮೀಕ್ಷೆ
Last Updated 10 ಜುಲೈ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಕೋವಿಡ್‌–19 ಹರಡುವುದನ್ನು ತಡೆಯಲು ಹೇರಲಾದ ಲಾಕ್‌ಡೌನ್‌ ಸಂದರ್ಭ ಮತ್ತು ಲಾಕ್‌ಡೌನ್‌ ತೆರವಾದ ನಂತರದ ದಿನಗಳಲ್ಲಿ ಹಲವು ಶಾಲೆಗಳು ಆನ್‌ಲೈನ್‌ ತರಗತಿಗಳನ್ನು ನಡೆಸಿವೆ ಮತ್ತು ನಡೆಸುತ್ತಿವೆ. ಆದರೆ, ಬೆಂಗಳೂರು ನಗರದ ಪ್ರೌಢ ಶಾಲೆಗಳ ಶೇ 57ರಷ್ಟು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಸಮೀಕ್ಷೆಯೊಂದು ಹೇಳಿದೆ. ಆನ್‌ಲೈನ್‌ ತರಗತಿಗೆ ಹಾಜರಾಗಲು ಸಾಧ್ಯವಾಗದ ಧಾರವಾಡ ಮತ್ತು ಮೈಸೂರಿನ ವಿದ್ಯಾರ್ಥಿಗಳ ಪ್ರಮಾಣ ಕ್ರಮವಾಗಿ ಶೇ 70 ಮತ್ತು ಶೇ 89ರಷ್ಟಿದೆ.

ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಸಂಸ್ಥೆಯು ತಾನು ಕೆಲಸ ಮಾಡುತ್ತಿರುವ ಬೆಂಗಳೂರು, ಧಾರವಾಡ ಮತ್ತು ಮೈಸೂರು ಜಿಲ್ಲೆಗಳ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ 1572 ವಿದ್ಯಾರ್ಥಿಗಳು, 452 ಶಿಕ್ಷಕರು ಮತ್ತು 770 ಪೋಷಕರ ಸಮೀಕ್ಷೆಯನ್ನು ಜೂನ್‌ ಕೊನೆಯ ವಾರದಲ್ಲಿ ನಡೆಸಿದೆ.

ಇಂಟರ್‌ನೆಟ್‌ ಮತ್ತು ಟಿ.ವಿ.ಗಳಲ್ಲಿ ಲಭ್ಯವಿದ್ದ ಆಡಿಯೊ–ವಿಷುವಲ್‌ (ದೃಕ್‌ ಶ್ರವಣ) ಕಲಿಕಾ ಸಾಮಗ್ರಿಗಳನ್ನು ಬಳಸಿಕೊಂಡ ವಿದ್ಯಾರ್ಥಿಗಳ ಪ್ರಮಾಣ ಬೆಂಗಳೂರಿನಲ್ಲಿ ಶೇ 25 ಮಾತ್ರ. ಧಾರವಾಡ ಮತ್ತು ಮೈಸೂರಿನ ವಿದ್ಯಾರ್ಥಿಗಳು ಇವುಗಳನ್ನು ಬಳಸಿಕೊಂಡೇ ಇಲ್ಲ. ಆದರೆ, ಸಮೀಕ್ಷೆ ನಡೆದ ಎಲ್ಲ ಮೂರು ಜಿಲ್ಲೆಗಳ ಶೇ 40ರಷ್ಟು ವಿದ್ಯಾರ್ಥಿಗಳು ಪುಸ್ತಕಗಳು ಮತ್ತು ಮುದ್ರಿತ ಸಾಮಗ್ರಿಗಳನ್ನು ಕಲಿಕೆಗೆ ಬಳಸಿಕೊಂಡಿದ್ದಾರೆ. ಪ್ರೌಢ ಶಾಲೆಯ ಶೇ 26ರಷ್ಟು ವಿದ್ಯಾರ್ಥಿನಿಯರು ಪಠ್ಯಕ್ರಮ ದಲ್ಲಿ ಇಲ್ಲದ ಪುಸ್ತಕಗಳನ್ನೂ ಓದಿದ್ದಾರೆ.

ಶೈಕ್ಷಣಿಕ ವರ್ಷದ ಅವಧಿಯು ಈ ಬಾರಿ ಕಡಿತಗೊಂಡಿದೆ. ಶಾಲೆ ಪುನರಾರಂಭ ಇನ್ನಷ್ಟು ವಿಳಂಬವಾದರೆ ಆನ್‌ಲೈನ್‌ ತರಗತಿ ಗಳನ್ನು ಮುಂದುವರಿಸಬೇಕು ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 60ರಷ್ಟು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಸಮುದಾಯ ಕಲಿಕಾ ಕೇಂದ್ರಗಳಲ್ಲಿ ಕಲಿಕೆ ಮುಂದುವರಿಸಬಹುದು ಎಂದು ಧಾರವಾಡದ ಶೇ 57ರಷ್ಟು ಶಿಕ್ಷಕರು ಹೇಳಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಈ ಬಗ್ಗೆ ಅಂತಹ ಒಲವು ಇಲ್ಲ. ಶೇ 15ರಷ್ಟು ಶಿಕ್ಷಕರು ಮಾತ್ರ ಸಮುದಾಯ ಕಲಿಕಾ ಕೇಂದ್ರಗಳು ಉತ್ತಮ ಎಂದಿದ್ದಾರೆ.

ಪಠ್ಯಕ್ರಮವನ್ನು ಕಡಿಮೆ ಮಾಡಬೇಕು ಎಂದು ಪ್ರೌಢ ಶಾಲೆಯ ಶೇ 50ರಷ್ಟು ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಶೇ 30ರಷ್ಟು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ವರ್ಕ್‌ಬುಕ್‌ ಬಳಕೆ ಕೂಡ ಪರಿಣಾಮಕಾರಿ ಆಗಬಹುದು ಎಂದು ಶೇ 43ರಷ್ಟು ಶಿಕ್ಷಕರು ಹೇಳಿದ್ದಾರೆ.

ವಾಟ್ಸ್‌ಆ್ಯಪ್‌ನಂತಹ ಆ್ಯಪ್‌ಗಳು, ದೂರವಾಣಿ ಕರೆ, ಹೆತ್ತವರ ಭಾಗವಹಿಸುವಿಕೆಯಂತಹ ವಿಧಾನಗಳ ಮೂಲಕ ಶಿಕ್ಷಣ ಮುಂದುವರಿಸಬೇಕು ಎಂದು ಹೆಚ್ಚಿನ ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ದೂರವಾಣಿ ಮೂಲಕ ನಿಯಮಿತ ಅನುಸರಣೆ, ಮನೆ ಭೇಟಿ, ಹೆತ್ತವರು ಮತ್ತು ಎಸ್‌ಡಿಎಂಸಿ ಸದಸ್ಯರ ಜತೆ ಸಂಪರ್ಕದಲ್ಲಿದ್ದು ಯಾವ ವಿದ್ಯಾರ್ಥಿಯೂ ಕಲಿಕೆಯಿಂದ ವಿಮುಖವಾಗದಂತೆ ನೋಡಿಕೊಳ್ಳಬೇಕು ಎಂದು ಹೆಚ್ಚಿನ ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT