ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ ಅಸಮರ್ಪಕ ಮೌಲ್ಯಮಾಪನ ಮಾಡಿದವರಿಂದ ಕೇವಲ ₹400 ದಂಡ ಸಂಗ್ರಹ!

ಪಿಯು ಪರೀಕ್ಷೆ: ಕಳೆದ ಮೂರು ವರ್ಷಗಳಲ್ಲಿ 2,777 ವಿದ್ಯಾರ್ಥಿಗಳಿಗೆ ತೊಂದರೆ
Last Updated 28 ಮಾರ್ಚ್ 2022, 19:29 IST
ಅಕ್ಷರ ಗಾತ್ರ

ಬೆಂಗಳೂರು: 2019–20ನೇ ಸಾಲಿನಲ್ಲಿ ಪಿಯುಸಿ ಪರೀಕ್ಷೆಯ ಉತ್ತರಪತ್ರಿಕೆಗಳ ಅಸಮರ್ಪಕ ಮೌಲ್ಯಮಾಪನ ಮಾಡಿದ ನಾಲ್ವರು ಮೌಲ್ಯಮಾಪಕರಿಂದ ಕೇವಲ ₹400 ದಂಡ ವಸೂಲಿ ಮಾಡಲಾಗಿದೆ.

ವಿಧಾನ ಪರಿಷತ್‌ನಲ್ಲಿ ಸೋಮವಾರ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಎನ್‌. ರವಿಕುಮಾರ್‌ ಪರವಾಗಿ ಎಸ್‌.ವಿ. ಸಂಕನೂರು ಅವರು ಕೇಳಿದ ಪ್ರಶ್ನೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಈ ಉತ್ತರ ನೀಡಿದ್ದಾರೆ.

‘2018–19ನೇ ಸಾಲಿನಲ್ಲಿ ಅಸಮರ್ಪಕ ಮೌಲ್ಯಮಾಪನ ಮಾಡಿದ ಮೌಲ್ಯಮಾಪಕರಿಂದ ಯಾವುದೇ ದಂಡ ವಸೂಲಿ ಮಾಡಿಲ್ಲ. 2020–21ನೇ ಸಾಲಿನಲ್ಲಿ ಕೋವಿಡ್‌–19 ಕಾರಣಕ್ಕೆ ವಾರ್ಷಿಕ ಪರೀಕ್ಷೆ ನಡೆದಿಲ್ಲ. ಆದರೆ, ಸರ್ಕಾರಿ ಆದೇಶದ ಅನ್ವಯ ಫಲಿತಾಂಶ ಒಪ್ಪದಿರುವ ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗಿದೆ. ಈ ಸಾಲಿನಲ್ಲಿಯೂ ಅಸಮರ್ಪಕ ಮೌಲ್ಯಮಾಪನ ಮಾಡಿದ ಮೌಲ್ಯಮಾಪಕರಿಂದ ಯಾವುದೇ ದಂಡ ವಸೂಲಿ ಮಾಡಿಲ್ಲ’ ಎಂದು ವಿವರಿಸಿದ್ದಾರೆ.

‘ಕಳೆದ ಮೂರು ವರ್ಷಗಳಲ್ಲಿ ಪಿಯುಸಿ ಪರೀಕ್ಷೆಯ ಅಸಮರ್ಪಕ ಮೌಲ್ಯಮಾಪನದಿಂದ ಒಟ್ಟು 2,777 ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಈ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಮಾಡಿರುವ ಪ್ರತಿ ನೀಡಿ ಮರು ಎಣಿಕೆ ಮತ್ತು ಮರುಮೌಲ್ಯಮಾಪನದ ಮೂಲಕ ಶೇ 6 ಅಥವಾ 6ಕ್ಕಿಂತ ಹೆಚ್ಚು ಅಂಕಗಳು ವ್ಯತ್ಯಾಸವಾಗಿದ್ದರೆ ಪಾವತಿಸಿದ ಹಣವನ್ನು ವಾಪಸ್‌ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

‘ಅಸಮರ್ಪಕ ಮೌಲ್ಯಮಾಪನ ನಡೆಸುವವರ ವಿರುದ್ಧ ಯಾವ ರೀತಿ ಕ್ರಮಕೈಗೊಳ್ಳಬೇಕು ಎನ್ನುವ ಬಗ್ಗೆ ಪರಿಷತ್‌ ಸದಸ್ಯರ ಜತೆ ಚರ್ಚಿಸಲಾಗುವುದು. 2019ರಲ್ಲಿ 1008 ವಿದ್ಯಾರ್ಥಿಗಳ ಉತ್ತರಪತ್ರಿಕೆಗಳಲ್ಲಿ ಶೇ6ಕ್ಕಿಂತ ಹೆಚ್ಚು ಅಂಕಗಳು ವ್ಯತ್ಯಾಸವಾಗಿವೆ’ ಎಂದು ತಿಳಿಸಿದ್ದಾರೆ.

ಎಸ್‌.ವಿ. ಸಂಕನೂರು ಮಾತನಾಡಿ, ‘ಮೂರು ವರ್ಷಗಳಿಗಿಂತಲೂ ಕಡಿಮೆ ಅವಧಿ ಕಾರ್ಯನಿರ್ವಹಿಸಿದ ಉಪನ್ಯಾಸಕರಿಂದಲೂ ಮೌಲ್ಯಮಾಪನ ಮಾಡಿಸಲಾಗುತ್ತಿದೆ’ ಎಂದು ಅವರು ದೂರಿದರು.

ಪರಿಷತ್‌ ಸದಸ್ಯರಿಗೆ ಸವದಿ ಪಾಠ!

ಸದಾ ಶಿಕ್ಷಕರ ಬಗ್ಗೆ ಮೃದು ಧೋರಣೆ ತೋರುವ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ವಿಧಾನ ಪರಿಷತ್‌ ಸದಸ್ಯರಿಗೆ ಬಿಜೆಪಿಯ ಲಕ್ಷ್ಮಣ್‌ ಸವದಿ ತಮ್ಮದೇ ಆದ ಶೈಲಿಯಲ್ಲಿ ಪಾಠ ಮಾಡಿದರು.

ಮೌಲ್ಯಮಾಪನ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಬೇರೆ ಸರ್ಕಾರಿ ನೌಕರರು ಇದೇ ರೀತಿಯ ತಪ್ಪು ಮಾಡಿದ್ದರೆ ತಕ್ಷಣವೇ ಅಮಾನತುಗೊಳಿಸಿ ಎಂದು ಈ ಸದಸ್ಯರು ಒತ್ತಾಯಿಸುತ್ತಿದ್ದರು. ಆದರೆ, ಶಿಕ್ಷಕರು ಇವರ ಮತದಾರರಾಗಿರುವುದರಿಂದ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸುತ್ತಿಲ್ಲ. ಮಾಸ್ತರ್‌ಗಳನ್ನು ರಕ್ಷಣೆ ಮಾಡಲು ಇವರೇ ನಿಂತಿದ್ದಾರೆ’ ಎಂದು ಛೇಡಿಸಿದರು.

ಸಮವಸ್ತ್ರ ಕಡ್ಡಾಯ ಬೇಡ

ಬೆಂಗಳೂರು: ‘ಎಸ್ಸೆಸ್ಸೆಲ್ಸಿ ‍ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಬೇಡ’ ಎಂದು ಕಾಂಗ್ರೆಸ್‌ನ ಪ್ರಕಾಶ್‌ ಕೆ. ಠಾರೋಡ್‌ ವಿಧಾನ ಪರಿಷತ್‌ನಲ್ಲಿ ಸೋಮವಾರ ಒತ್ತಾಯಿಸಿದರು.

‘ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿ ಎರಡು ವರ್ಷಗಳಾಗಿವೆ. ಆದ್ದರಿಂದ, ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು ಎನ್ನುವ ಸುತ್ತೋಲೆಯನ್ನು ವಾಪಸ್‌ ಪಡೆಯಬೇಕು’ ಎಂದು ಶೂನ್ಯವೇಳೆಯಲ್ಲಿ ಆಗ್ರಹಿಸಿದರು.

‘ಕೋವಿಡ್‌ನಿಂದಾಗಿ ಆನ್‌ಲೈನ್‌ ತರಗತಿ ನಡೆಸಿದ್ದರಿಂದ ವಿದ್ಯಾರ್ಥಿಗಳು ಸಮವಸ್ತ್ರ ಧರಿಸುತ್ತಿರಲಿಲ್ಲ. ಜತೆಗೆ, ಈ ಹಿಂದೆ ನೀಡಿದ್ದ ಸಮವಸ್ತ್ರಗಳು ಸಹ ಹಳೆಯದಾಗಿವೆ. ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆಯಿಂದಾಗಿಯೂ ಸಮವಸ್ತ್ರ ಧರಿಸಲು ಸಾಧ್ಯವಾಗುತ್ತಿಲ್ಲ’ ಎಂದು ವಿವರಿಸಿದರು.

‘ವಿದ್ಯಾರ್ಥಿಗಳಿಗೂ ಸಮವಸ್ತ್ರ ವಿಚಾರ ತಲೆನೋವಾಗಿ ಪರಿಣಮಿಸಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್‌ ಆತಂಕದ ನಡುವೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಈ ಬಾರಿ ಹಿಜಾಬ್‌ ಸಂಘರ್ಷದ ಜತೆ ಎದುರಿಸಬೇಕಾಗಿದೆ. ಹಲವು ಅಲ್ಪಸಂಖ್ಯಾತರ ಶಾಲೆಗಳಲ್ಲಿ ಹಿಜಾಬ್‌ ಸಮವಸ್ತ್ರವಾಗಿದೆ. ಆ ಶಾಲೆಯ ಮಕ್ಕಳು ಹಿಜಾಬ್‌ ಧರಿಸಿ ಪರೀಕ್ಷೆ ಬರೆಯಬಹುದಾಗಿದೆ. ಆದರೆ, ಪ್ರಸ್ತುತ ವಾರ್ಷಿಕ ಪರೀಕ್ಷೆಗೆ ಹಿಜಾಬ್‌ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ’ ಎಂದು ವಿವರಿಸಿದರು.

‘ಸಮವಸ್ತ್ರ ಇಲ್ಲದವರಿಗೆ ಕಡ್ಡಾಯಗೊಳಿಸಿಲ್ಲ’: ‘ಸಮವಸ್ತ್ರಗಳು ವಿತರಣೆಯಾಗಿರದಿದ್ದರೆ ಅಂತ ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಸ್ಪಷ್ಟಪಡಿಸಿದರು.

‘ಸಮವಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನುಗಳು ಮತ್ತು ನ್ಯಾಯಾಲಯದ ಆದೇಶಗಳನ್ನು ಪಾಲಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT