ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ: ಕಾಂಗ್ರೆಸ್‌, ಜೆಡಿಎಸ್‌ ಸಭಾತ್ಯಾಗ

Last Updated 21 ಸೆಪ್ಟೆಂಬರ್ 2021, 22:47 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಯ ಲೆಕ್ಕ ಪರಿಶೋಧನೆ ಹೊಣೆಗಾರಿಕೆಯನ್ನು ಆಯಾ ಇಲಾಖೆಗಳಿಗೆ ವಹಿಸಲು ‘ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ ಕಾಯ್ದೆ’ ತಿದ್ದುಪಡಿ ಮಸೂದೆ ವಿರೋಧಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ವಿಧಾನ ಪರಿಷತ್‌ ಕಲಾಪ ಬಹಿಷ್ಕರಿಸಿದರು.

ವಿರೋಧ ಪಕ್ಷಗಳ ತೀವ್ರ ಆಕ್ಷೇಪದ ನಡುವೆಯೇ ಧ್ವನಿಮತದ ಮೂಲಕ ಮಸೂದೆ ಅಂಗೀಕಾರಗೊಂಡಿತು.

ಮುಖ್ಯಮಂತ್ರಿ ಪರವಾಗಿ ಮಸೂದೆ ಮಂಡಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ’ಇದೊಂದು ಸಣ್ಣ ಪ್ರಮಾಣದ ತಿದ್ದುಪಡಿ ಅಂಗೀಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘ಈ ತಿದ್ದುಪಡಿ ಸಣ್ಣದಾಗಿದ್ದರೂ ಪರಿಣಾಮ ಬಹಳ ದೊಡ್ಡದು. ಪಂಚಾಯತ್‌ರಾಜ್ ಸಂಸ್ಥೆಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಲೆಕ್ಕ ಪರಿಶೋಧನೆ ಜವಾಬ್ದಾರಿಯನ್ನು ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆ ಮತ್ತು ಮಹಾಲೇಖಪಾಲರಿಂದ (ಸಿಎಜಿ) ತೆಗೆದು ಪಂಚಾಯತ್ ರಾಜ್ ಇಲಾಖೆಗೆ ನೀಡುತ್ತಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಈ ಅಧಿಕಾರ ದುರುಪಯೋಗವಾಗಲಿದೆ. ಸ್ಥಳೀಯ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ’ ಎಂದು ಕಾಂಗ್ರೆಸ್ಸಿನ ಪಿ.ಆರ್.ರಮೇಶ್ ಆತಂಕ ವ್ಯಕ್ತಪಡಿಸಿದರು. ಕಾಂಗ್ರೆಸ್ಸಿನ ಎ. ನಾರಾಯಣಸ್ವಾಮಿ, ಎಸ್.ಆರ್. ಪಾಟೀಲ, ತಿಪ್ಪೇಸ್ವಾಮಿ, ಮರಿತಿಬ್ಬೇಗೌಡ ಕೂಡಾ ಮಸೂದೆಯನ್ನು ವಿರೋಧಿಸಿದರು.

ಆದರೆ, ಆಡಳಿತ ಪಕ್ಷದ ಮಹಾಂತೇಶ ಕವಟಗಿಮಠ, ತೇಜಶ್ವಿನಿಗೌಡ, ಎನ್‌. ರವಿಕುಮಾರ್‌, ಮಸೂದೆಯನ್ನು ಸಮರ್ಥಿಸಿದರು. ಆಡಳಿತ ವಿಕೇಂದ್ರೀಕರಣದ ಜೊತೆಗೆ, ಸ್ಥಳೀಯ ಸಂಸ್ಥೆಗಳ ಸುಧಾರಣೆಗೆ ಮಹತ್ವದ ಹೆಜ್ಜೆ’ ಎಂದೂ ಬಣ್ಣಿಸಿದರು.

‘ಸಿಎಜಿ ತನ್ನ ಪಾಲಿನ ಕೆಲಸಮಾಡಲಿದೆ. ಇಲಾಖೆ ಆಂತರಿಕವಾಗಿ ಲೆಕ್ಕ ಪರಿಶೋಧನೆ ನಡೆಸಲು ಕೂಡಾ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ’ ಎಂದು ಕೋಟ ಶ್ರೀನಿವಾಸ ಪೂಜಾರಿ ಸಮರ್ಥಿಸಿದರು. ಆದರೆ, ಸಚಿವರ ಉತ್ತರದಿಂದ ಸಮಾಧಾನಗೊಳ್ಳದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT