ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

2ಎ ಮೀಸಲಾತಿ ಸಿಗದಿದ್ದರೆ ಅ 1ರಿಂದ ಧರಣಿ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಘೋಷಣೆ
Published : 13 ಸೆಪ್ಟೆಂಬರ್ 2021, 8:24 IST
ಫಾಲೋ ಮಾಡಿ
Comments

ಕಲಬುರ್ಗಿ: ‘ರಾಜ್ಯದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನು ಕಲ್ಪಿಸುವ ಬಗ್ಗೆ ಇದೇ 15ರ ಒಳಗಾಗಿ ಭರವಸೆ ನೀಡದಿದ್ದರೆ ಅಕ್ಟೋಬರ್ 1ರಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದು’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧರ್ಮಗುರುಗಳು ಇಲ್ಲಿಯವರೆಗೆ ಧಾರ್ಮಿಕ ಉದ್ದೇಶಕ್ಕಾಗಿ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸಿ ಪಂಚಮಸಾಲಿ ಸಮುದಾಯದ ಮುಖಂಡರೊಂದಿಗೆ ಪಾದಯಾತ್ರೆ, ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಆ ಮೂಲಕ ರಾಜ್ಯದಲ್ಲಿ ದೀಕ್ಷ ಪಂಚಮಸಾಲಿ, ಲಿಂಗಾಯತ ಪಂಚಮಸಾಲಿ, ಗೌಡ ಲಿಂಗಾಯತ, ಮಲೇಗೌಡ ಎಂಬ ಹೆಸರುಗಳಿಂದ ಕರೆಸಿಕೊಳ್ಳುವ ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿ ನೀಡಲೇಬೇಕು. ಅಲ್ಲಿಯವರೆಗೆ ನಾವು ವಿರಮಿಸುವುದಿಲ್ಲ. ವಿವಿಧ ಹಂತದ ಹೋರಾಟಗಳು ನಡೆಯುತ್ತಲೇ ಇರುತ್ತವೆ’ ಎಂದರು.

‘ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರು ನಮ್ಮ ಹೋರಾಟಕ್ಕೆ ಮಣಿದು ಸದನದಲ್ಲೇ ಹೇಳಿಕೆ ನೀಡಿ ಆರು ತಿಂಗಳ ಒಳಗಾಗಿ ಮೀಸಲಾತಿ ನೀಡುವ ಭರವಸೆ ನೀಡಿದ್ದರು. ಸೆಪ್ಟೆಂಬರ್ 15ಕ್ಕೆ ಆರು ತಿಂಗಳು ಮುಕ್ತಾಯವಾಗಲಿದ್ದು, ಶೀಘ್ರವೇ ಭರವಸೆ ಈಡೇರಿಸುವಂತೆ ಅಂದು ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪಂಚಮಸಾಲಿ ಸಮಾಜದವರು ಎತ್ತಿನ ಬಂಡಿಯನ್ನು ಹೂಡಿಕೊಂಡು ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಅರ್ಧಗಂಟೆ ಶಾಂತಿಯುತವಾಗಿ ಮನವಿ ಸಲ್ಲಿಸಲಿದ್ದಾರೆ’ ಎಂದು ಹೇಳಿದರು.

‘ಪಂಚಮಸಾಲಿಗಳನ್ನು 2ಎ ಮೀಸಲಾತಿ ಪಟ್ಟಿಗೆ ಸೇರಿಸಬೇಕಿರುವುದು ಸರ್ಕಾರದ ಜವಾಬ್ದಾರಿ. ಅದನ್ನು ಶೇ 50ರ ಮೀಸಲಾತಿ ಮಿತಿಯಲ್ಲಿ ಮಾಡುತ್ತಾರೋ, ಆ ಮಿತಿ ದಾಟುತ್ತಾರೋ ಎಂಬುದು ಸರ್ಕಾರಕ್ಕೆ ಬಿಟ್ಟ ಸಂಗತಿ. ನಾವು ನಮ್ಮ ಹೋರಾಟವನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಮೀಸಲಾತಿ ಕಲ್ಪಿಸದಿದ್ದರೆ ಅಂಥವರೊಂದಿಗೆ ನಾವು ಅಸಹಕಾರ ತೋರಿಸುವುದು ಅನಿವಾರ್ಯವಾಗುತ್ತದೆ’ ಎಂದರು.

ಎಲ್ಲರೂ ಒಗ್ಗಟ್ಟಾಗಿದ್ದೇವೆ: ಭಾನುವಾರ ಕಲಬುರ್ಗಿಯಲ್ಲಿ ನಡೆದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌ಗೆ ಜಿಲ್ಲೆಯ ದೀಕ್ಷ ಪಂಚಮಸಾಲಿ ಸಮುದಾಯದ ಜನಪ್ರತಿನಿಧಿಗಳು ಬಂದಿಲ್ಲ. ಆದರೆ, ಅವರು ಸದನದ ಒಳಗಿದ್ದು ಹೋರಾಟ ನಡೆಸುತ್ತಾರೆ. ಪ್ರತಿ ಸಭೆಗೂ ಜನಪ್ರತಿನಿಧಿಗಳು ಬರಲೇಬೇಕು ಎಂದು ನಾವು ನಿರೀಕ್ಷಿಸುವುದಿಲ್ಲ. ಸಮುದಾಯದ ಜನರು ಬಂದರೆ ಸಾಕು ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಖಿಲ ಭಾರತ ಪಂಚಮಸಾಲಿ ಮಹಾಸಭಾ ಕಾರ್ಯಾಧ್ಯಕ್ಷ ವಿಜಯಾನಂದ ಎಸ್‌. ಕಾಶಪ್ಪನವರ ಮಾತನಾಡಿ, ‘ಮೀಸಲಾತಿ ಬೇಡಿಕೆ ಈಡೇರಿಕೆಗಾಗಿ ನಾವು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಾಕಿಕೊಂಡಿದ್ದೆವು. ಆದರೆ, ಮುಖ್ಯಮಂತ್ರಿಗಳು ಭರವಸೆ ನೀಡಿದ್ದರಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ 23 ದಿನಗಳವರೆಗೆ ಪ್ರತಿಭಟನೆ ನಡೆಸಿದ್ದೆವು. ಈಗಲೂ ಮೀಸಲಾತಿ ಬೇಡಿಕೆಗೆ ಸ್ಪಂದಿಸದಿದ್ದರೆ ಮಾಡು ಇಲ್ಲವೇ ಹೋರಾಟ ನಡೆಸಲು ಸಿದ್ಧ. ಅಲ್ಲದೇ, ವಿಧಾನಸೌಧ ಮುತ್ತಿಗೆ ಹಾಕಲೂ ಹಿಂಜರಿಯುವುದಿಲ್ಲ. ಈಗಾಗಲೇ ಮೀಸಲಾತಿ ಸ್ವಾಗತ ಸಮಿತಿ ಗೌರವ ಮಹಾಪೋಷಕರಾದ ಸಚಿವ ಸಿ.ಸಿ. ಪಾಟೀಲ, ಸಮಿತಿ ಅಧ್ಯಕ್ಷರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಈ ಬಗ್ಗೆ ಸದನದಲ್ಲಿ ಚರ್ಚಿಸಿದ್ದಾರೆ’ ಎಂದರು.

ಪಂಚ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಪಾಟೀಲ ನಾಗರಾಳಹುಲಿ, ಜಿಲ್ಲಾ ದೀಕ್ಷ ಪಂಚಮಸಾಲಿ ಸಮಾಜದ ಅಧ್ಯಕ್ಷ ಶರಣು ಪಪ್ಪಾ, ನಟರಾಜ, ಕಲ್ಯಾಣಪ್ಪ ಪಾಟೀಲ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT