ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸುಗಳ ನೋವಿಗೆ ಧಾವಿಸದ ಆಂಬುಲೆನ್ಸ್‌!

ಹಳ್ಳ ಹಿಡಿದ ‘ಪಶು ಸಂಜೀವಿನಿ’ ಯೋಜನೆ
Published 17 ಜುಲೈ 2023, 20:17 IST
Last Updated 17 ಜುಲೈ 2023, 20:17 IST
ಅಕ್ಷರ ಗಾತ್ರ

ಹಾವೇರಿ: ರೈತರ ಮನೆ ಬಾಗಿಲಿಗೆ ತೆರಳಿ, ಪಶುಗಳಿಗೆ ಸಕಾಲದಲ್ಲಿ ತುರ್ತು ಚಿಕಿತ್ಸೆ ಕೊಡಬೇಕು ಎಂಬ ಉದ್ದೇಶದಿಂದ ಜಾರಿಗೊಂಡ ಕೇಂದ್ರ ಸರ್ಕಾರದ ‘ಪಶು ಸಂಜೀವಿನಿ’ ಯೋಜನೆಯ ಹೊಸ ಆಂಬುಲೆನ್ಸ್‌ಗಳು ಒಂದು ವರ್ಷದಿಂದಲೂ ಸಂಚರಿಸದೆ ನಿಂತಲ್ಲೇ ನಿಂತು ಹಾಳಾಗುತ್ತಿವೆ. ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ಆಗದೆ ರಾಸುಗಳನ್ನು ಕಳೆದುಕೊಂಡ ರೈತರು ಕಣ್ಣೀರು ಸುರಿಸುತ್ತಿದ್ದಾರೆ. 

ಈ ಪಶುಚಿಕಿತ್ಸಾ ಆಂಬುಲೆನ್ಸ್‌ನಲ್ಲಿ ಆಧುನಿಕ ಶಸ್ತ್ರಚಿಕಿತ್ಸಾ ಘಟಕ, ಪ್ರಯೋಗಶಾಲೆ ಮತ್ತು ಸ್ಕ್ಯಾನಿಂಗ್‌ ಉಪಕರಣಗಳನ್ನು ಅಳವಡಿಸಲಾಗಿದೆ. ‘ಆಧುನಿಕವಾಗಿದ್ದರೂ ಆಂಬುಲೆನ್ಸ್‌ ಬಳಕೆಯಾಗದೇ ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ದೂಳು ಹಿಡಿದಿವೆ. ಇದರಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗಿದೆ’ ಎಂದು ರೈತ ರವೀಂದ್ರಗೌಡ ಪಾಟೀಲ ದೂರಿದರು.

₹44 ಕೋಟಿ ಅನುದಾನ:

ಕೇಂದ್ರ ಸರ್ಕಾರದಿಂದ ₹44 ಕೋಟಿ ಅನುದಾನದಲ್ಲಿ ರಾಜ್ಯಕ್ಕೆ ಒಟ್ಟು 290 ಪಶು ಸಂಜೀವಿನಿ ಆಂಬುಲೆನ್ಸ್‌ಗಳು ಮಂಜೂರಾಗಿದ್ದವು. 2022ರ ಜುಲೈನಲ್ಲಿ ರಾಜ್ಯ ಸರ್ಕಾರ ಪ್ರತಿ ತಾಲ್ಲೂಕಿಗೆ ಒಂದು ಆಂಬುಲೆನ್ಸ್‌ ಸೌಲಭ್ಯ ನೀಡಿತ್ತು. ಆಂಬುಲೆನ್ಸ್‌ಗಳು ಪಶು ಆಸ್ಪತ್ರೆ ಅಂಗಳಕ್ಕೆ ಬಂದರೂ, ಚಾಲನೆ ಮಾಡಲು ಅಗತ್ಯ ಸಿಬ್ಬಂದಿಯಿಲ್ಲದೇ ಮೂಲೆ ಸೇರಿವೆ.

ರಾಜ್ಯದಲ್ಲಿ 2.90 ಕೋಟಿ ಜಾನುವಾರುಗಳಿದ್ದು, ರೈತರು 1962 ಸಂಖ್ಯೆಗೆ ಕರೆ ಮಾಡಿದರೆ ಆಂಬುಲೆನ್ಸ್‌ ಹಾಗೂ ವೈದ್ಯರು ಸ್ಥಳಕ್ಕೆ ಬರುವ ಯೋಜನೆ ಇದಾಗಿದೆ. ಸಿಬ್ಬಂದಿ ವೇತನ, ವಾಹನಗಳ ನಿರ್ವಹಣಾ ವೆಚ್ಚ ಸೇರಿ ಪ್ರತಿ ವಾಹನಕ್ಕೆ ತಿಂಗಳಿಗೆ ₹1.56 ಲಕ್ಷ ಅನುದಾನ ನಿಗದಿಪಡಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ಶೇ 60 ಮತ್ತು ರಾಜ್ಯ ಸರ್ಕಾರದ ಶೇ 40 ಅನುದಾನವನ್ನು ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. 

290 ಆಂಬುಲೆನ್ಸ್‌ ಹಸ್ತಾಂತರ:

ಆಂಬುಲೆನ್ಸ್‌ಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು 2023ರ ಏಪ್ರಿಲ್‌ನಲ್ಲಿ ಮುಂಬೈ ಮೂಲದ ಎಜುಸ್ಪಾರ್ಕ್ ಇಂಟರ್‌ನ್ಯಾಷನಲ್‌ ಖಾಸಗಿ ಕಂಪನಿಗೆ ಟೆಂಡರ್‌ ನೀಡಲಾಗಿತ್ತು. ಗುತ್ತಿಗೆದಾರರು ಆಂಬುಲೆನ್ಸ್‌ಗೆ ಅಗತ್ಯವಿದ್ದ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ತರಬೇತಿ ನೀಡಿದ್ದರು. ನಂತರ ಪಶು ವೈದ್ಯಕೀಯ ಸೇವಾ ಇಲಾಖೆಯಿಂದ 290 ಆಂಬುಲೆನ್ಸ್‌ಗಳನ್ನು ಗುತ್ತಿಗೆದಾರರಿಗೆ ಹಸ್ತಾಂತರ ಮಾಡಲಾಗಿತ್ತು. 

ಮರು ಟೆಂಡರ್‌ಗೆ ಚಿಂತನೆ:

ಕಾರ್ಯಾಚರಣೆ ಆರಂಭಿಸುವ ವೇಳೆಗೆ, ವಿಧಾನಸಭೆ ಚುನಾವಣೆ ನಡೆದು ಸರ್ಕಾರ ಬದಲಾಯಿತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಳೆಯ ಟೆಂಡರ್‌ ಅನ್ನು ಪರಿಶೀಲಿಸಿ, ಮರು ಟೆಂಡರ್‌ ನಡೆಸಬೇಕು ಎಂಬ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ. ಹೀಗಾಗಿ ಆಂಬುಲೆನ್ಸ್‌ಗಳ ಕಾರ್ಯಾಚರಣೆ ಸದ್ಯಕ್ಕೆ ಸ್ಥಗಿತಗೊಂಡಿದೆ ಎನ್ನುತ್ತಾರೆ ಪಶುಪಾಲನಾ ಇಲಾಖೆ ಅಧಿಕಾರಿಗಳು.

ಹಾವೇರಿಯಲ್ಲಿ ಬಳಕೆಯಿಲ್ಲದೇ ಅನುಪಯುಕ್ತವಾಗಿ ನಿಂತಿರುವ ‘ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ’ –
ಹಾವೇರಿಯಲ್ಲಿ ಬಳಕೆಯಿಲ್ಲದೇ ಅನುಪಯುಕ್ತವಾಗಿ ನಿಂತಿರುವ ‘ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ’ – ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ
ದನ–ಕರುಗಳು ಕಾಯಿಲೆಬಿದ್ದರೆ ರೈತರು ಅಂದಿನ ದುಡಿಮೆ ಬಿಟ್ಟು ದೂರದ ಪಶು ಆಸ್ಪತ್ರೆಗಳಿಗೆ ಕರೆದೊಯ್ಯಬೇಕು. ಚಿಕಿತ್ಸೆ ಕೊಡಬೇಕಾದ ಆಂಬುಲೆನ್ಸ್‌ಗಳೇ ರೋಗಪೀಡಿತವಾಗಿವೆ
– ಹರ್ಷವರ್ಧನ ಹಿರೇಗೌಡರ್‌, ಪಶು ಸಂಗೋಪಕ ರಾಣೆಬೆನ್ನೂರು
ಏಪ್ರಿಲ್‌ನಲ್ಲೇ ಟೆಂಡರ್‌ ಪಡೆದ ಖಾಸಗಿ ಕಂಪನಿಗೆ ಜಿಲ್ಲೆಯ 9 ಆಂಬುಲೆನ್ಸ್‌ಗಳನ್ನು ಹಸ್ತಾಂತರ ಮಾಡಿದ್ದೇವೆ. ಕಾರಣಾಂತರದಿಂದ ಕಾರ್ಯಾಚರಣೆ ಆರಂಭಿಸಿಲ್ಲ
– ಡಾ.ಎಸ್.ವಿ ಸಂತಿ, ಉಪನಿರ್ದೇಶಕ ಪಶುಪಾಲನಾ ಇಲಾಖೆ ಹಾವೇರಿ
ವೈದ್ಯರ ಕೊರತೆ:
ಸಿಗದ ಚಿಕಿತ್ಸೆ ರಾಜ್ಯದಲ್ಲಿ 4200 ಪಶು ವೈದ್ಯಕೀಯ ಆಸ್ಪತ್ರೆಗಳಿದ್ದು 1600 ವೈದ್ಯರ ಕೊರತೆ ಕಾಡುತ್ತಿದೆ. ಹೀಗಾಗಿ ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರುಗಳು ರೈತರಿಂದ ಕೇಳಿ ಬರುತ್ತಿವೆ.  ‘ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ 9 ಸಾವಿರ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು 18 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಅಗತ್ಯವಿದೆ. ಮೊದಲ ಹಂತದಲ್ಲಿ 400 ವೈದ್ಯರ ನೇಮಕಕ್ಕೆ ಸಚಿವರು ಕ್ರಮ ಕೈಗೊಂಡಿದ್ದಾರೆ’ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು. 

ಬೆಳಗಾವಿ ವಿಭಾಗದ 7 ಜಿಲ್ಲೆಗಳ ಆಂಬುಲೆನ್ಸ್‌ ವಿವರ 

ಜಿಲ್ಲೆ;ಆಂಬುಲೆನ್ಸ್‌ಗಳ ಸಂಖ್ಯೆ

ಬೆಳಗಾವಿ;17

ಹಾವೇರಿ;9

ಗದಗ;8

ಧಾರವಾಡ;8

ಬಾಗಲಕೋಟೆ;13

ವಿಜಯಪುರ;14

ಉತ್ತರ ಕನ್ನಡ ಜಿಲ್ಲೆ;13

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT