ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೆನ್‌ ಡ್ರೈವ್‌ ಹಂಚಿಕೆ | ಪ್ರೀತಂ ಗೌಡ ವಿರುದ್ಧ ತನಿಖೆ ಮುಂದುವರಿಯಲಿ: ಹೈಕೋರ್ಟ್‌

Published : 26 ಸೆಪ್ಟೆಂಬರ್ 2024, 15:14 IST
Last Updated : 26 ಸೆಪ್ಟೆಂಬರ್ 2024, 15:14 IST
ಫಾಲೋ ಮಾಡಿ
Comments

ಬೆಂಗಳೂರು: ‘ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಲೈಂಗಿಕ ಹಗರಣದ ಆರೋಪಕ್ಕೆ ಸಂಬಂಧಿಸಿದ ಪೆನ್‌ ಡ್ರೈವ್‌ಗಳನ್ನು ಹಂಚಿಕೆ ಮಾಡಿದ ಆರೋಪದಡಿ ಮಾಜಿ ಶಾಸಕ ಬಿಜೆಪಿಯ ಪ್ರೀತಂ ಗೌಡ ಅವರ ವಿರುದ್ಧದ ಕ್ರಿಮಿನಲ್‌ ಪ್ರಕರಣದ ತನಿಖೆ ಮುಂದುವರಿಯಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ.

‘ನನ್ನ ವಿರುದ್ಧ ಬೆಂಗಳೂರಿನ ಸೈಬರ್‌ ಅಪರಾಧ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ನಂತರದ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸಬೇಕು’ ಎಂದು ಕೋರಿ ಪ್ರೀತಂ ಗೌಡ ಸಲ್ಲಿಸಿರುವ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಗುರುವಾರ ಈ ಕುರಿತಂತೆ ಆದೇಶಿಸಿದರು.

ವಿಚಾರಣೆ ವೇಳೆ ಪ್ರೀತಂ ಗೌಡ ಪರ ವಕೀಲ ಸಂದೀಪ್‌ ಎಸ್‌.ಪಾಟೀಲ್‌, ‘ಅರ್ಜಿಯನ್ನು ದಸರಾ ರಜೆಯ ಬಳಿಕ ವಿಚಾರಣೆಗೆ ತೆಗೆದುಕೊಳ್ಳಬೇಕು. ನಿನ್ನೆಯಷ್ಟೇ ಪ್ರೀತಂ ಗೌಡ ಎಸ್‌ಐಟಿಯ ಮುಂದೆ ಹೇಳಿಕೆ ದಾಖಲಿಸಿದ್ದಾರೆ’ ಎಂದು ಮನವಿ ಮಾಡಿದರು. ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್‌ ರವಿವರ್ಮ ಕುಮಾರ್, ‘ಇದು ಡಿಜಿಟಲ್‌ ಅಪರಾಧ. ವಿಡಿಯೊಗಳಿಗೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿಗೆ ಕಾಯಲಾಗುತ್ತಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ತನಿಖೆ ಮುಂದುವರಿಯಬೇಕು ಮತ್ತು ಇದಕ್ಕೆ ಪ್ರೀತಂ ಗೌಡ ಸಹಕರಿಸಬೇಕು. ವಿಚಾರಣೆಯನ್ನು ಅಕ್ಟೋಬರ್‌ 24ಕ್ಕೆ ನಿಗದಿಗೊಳಿಸಲಾಗುವುದು. ಅಷ್ಟರಲ್ಲಿ ಎಫ್‌ಎಸ್‌ಎಲ್‌ ವರದಿ ಬರಬಹುದು. ಅಲ್ಲಿಯವರೆಗೂ ಅರ್ಜಿದಾರರಿಗೆ ಬಂಧನದಿಂದ ರಕ್ಷಣೆ ನೀಡಿರುವ ಮಧ್ಯಂತರ ಆದೇಶ ಮುಂದವರಿಯಲಿದೆ’ ಎಂದು ತಿಳಿಸಿತು.  ‘ಮುಂದಿನ ವಿಚಾರಣೆ ವೇಳೆಗೆ ಪ್ರಕರಣದ ವಸ್ತುಸ್ಥಿತಿ ವರದಿಯನ್ನು ಸಲ್ಲಿಸಿ’ ಎಂದು ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿ ವಿಚಾರಣೆಯನ್ನು ಅಕ್ಟೋಬರ್‌ 24ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT