ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೃಷ್ಟಿದೋಷ ಕೋಟಾಡಡಿ ಪ್ರವೇಶಾತಿಗೆ ಮನವಿ: ವಿದ್ಯಾರ್ಥಿನಿ ಅರ್ಜಿ ವಜಾ

Published : 11 ಸೆಪ್ಟೆಂಬರ್ 2024, 16:07 IST
Last Updated : 11 ಸೆಪ್ಟೆಂಬರ್ 2024, 16:07 IST
ಫಾಲೋ ಮಾಡಿ
Comments

ಬೆಂಗಳೂರು: ‘ದೃಷ್ಟಿದೋಷ ಕೋಟಾದಡಿ ವೃತ್ತಿಪರ ಕೋರ್ಸ್‌ಗೆ ಪ್ರವೇಶ ಕಲ್ಪಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ನಿರ್ದೇಶಿಸಬೇಕು’ ಎಂದು ಕೋರಿ ಧಾರವಾಡದ ವಿದ್ಯಾರ್ಥಿನಿ ದಿಶಾ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಈ ಸಂಬಂಧ ಧಾರವಾಡ ಪೀಠದಲ್ಲಿನ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಮತ್ತು ನ್ಯಾಯಮೂರ್ತಿ ವಿಜಯಕುಮಾರ ಎ.ಪಾಟೀಲ ಅವರ ವಿಭಾಗೀಯ ನ್ಯಾಯಪೀಠ ಆದೇಶಿಸಿದೆ.

‘ವಿದ್ಯಾರ್ಥಿನಿಯ ದೃಷ್ಟಿದೋಷ ಪ್ರಮಾಣದ ಬಗ್ಗೆ ವೈದ್ಯರಿಂದ ವಿರೋಧಾಭಾಸದಿಂದ ಕೂಡಿದ ಅಭಿಪ್ರಾಯಗಳು ವ್ಯಕ್ತವಾಗಿ ಗೊಂದಲ ಮೂಡಿವೆ. ಈ ಪ್ರಕರಣದಲ್ಲಿ ವಿದ್ಯಾರ್ಥಿನಿಗೆ ದೃಷ್ಟಿದೋಷವಿಲ್ಲ ಎಂಬ ತ್ರಿಸದಸ್ಯ ವೈದ್ಯರ ಸಮಿತಿ ವರದಿಯನ್ನು ಅಂತಿಮವಾಗಿ ಪರಿಗಣಿಸಲಾಗುತ್ತಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠ ವಿದ್ಯಾರ್ಥಿನಿಯ ಮನವಿ ತಿರಸ್ಕರಿಸಿದೆ.

ಪ್ರಕರಣವೇನು?: ದೃಷ್ಟಿದೋಷ ಕೋಟಾದಡಿ 2024ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಸೀಟು ಬಯಸಿ ದಿಶಾ ಕೆಇಎಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಕೆಇಎ, ‘ಅರ್ಜಿದಾರ ವಿದ್ಯಾರ್ಥಿನಿಗೆ ದೃಷ್ಟಿದೋಷವಿಲ್ಲ’ ಎಂಬ ಬೆಂಗಳೂರು ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ನೀಡಿದ್ದ ವರದಿ ಆಧರಿಸಿ ಸಂಭಾವ್ಯ ಪಟ್ಟಿಯಲ್ಲಿ ದೃಷ್ಟಿದೋಷ ಕೋಟಾದಡಿ ದಿಶಾ ಹೆಸರನ್ನು ಪರಿಗಣಿಸಿರಲಿಲ್ಲ. 

ಇದನ್ನು ಪ್ರಶ್ನಿಸಿ ದಿಶಾ ಹೈಕೋರ್ಟ್‌ ಮೆಟ್ಟಿಲೇರಿದ್ದರು. ‘ನಾನು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 83.33ರಷ್ಟು ಅಂಕ ಪಡೆದು ಉತ್ತೀರ್ಣಗೊಂಡಿದ್ದೇನೆ. ನನಗೆ ಶೇ 40ಕ್ಕಿಂತ ಹೆಚ್ಚಿನ ಪ್ರಮಾಣದ ದೃಷ್ಟಿ ದೋಷವಿದೆ. ಈ ಕುರಿತು ಧಾರವಾಡದ ಜಿಲ್ಲಾ ಸರ್ಜನ್‌ ವರದಿ ನೀಡಿದ್ದಾರೆ. ಹಾಗಾಗಿ, ಅಂಗವಿಕಲರ ಕೋಟಾದಡಿ (ದೃಷ್ಟಿದೋಷ ವರ್ಗ) ಪ್ರವೇಶ ಪಡೆಯಲು ನಾನು ಅರ್ಹಳಿದ್ದೇನೆ’ ಎಂದು ಪ್ರತಿಪಾದಿಸಿದ್ದರು.

ಈ ಮನವಿಯನ್ನು ಪರಿಗಣಿಸಿದ್ದ ಹೈಕೋರ್ಟ್‌, ದಿಶಾಗೆ ಮಾತ್ರವೇ ಅನ್ವಯವಾಗುವಂತೆ ಕೆಇಎ ಪ್ರಕಟಿಸಿದ್ದ ಸಂಭಾವ್ಯ ಪಟ್ಟಿಯನ್ನು ರದ್ದುಪಡಿಸಿತ್ತು. ‘ಸಾಮಾಜಿಕ ನ್ಯಾಯ ಮತ್ತು ಅಂಗವಿಕಲರ ಸಬಲೀಕರಣ ಸಚಿವಾಲಯ 2024ರ ಮಾರ್ಚ್ 12ರಂದು ಹೊರಡಿಸಿರುವ ಅಧಿಸೂಚನೆಯ ಮಾರ್ಗಸೂಚಿ ಪ್ರಕಾರ ದಿಶಾ ಅವರ ದೃಷ್ಟಿದೋಷದ ಬಗ್ಗೆ ಮರು ಮೌಲ್ಯಮಾಪನ ಮಾಡಬೇಕು. ಈ ನಿಟ್ಟಿನಲ್ಲಿ ದಿಶಾ ಬಿಎಂಸಿಆರ್‌ಐ ಮುಂದೆ 2024ರ ಜುಲೈ 10ರಂದು ಹಾಜರಾಗಬೇಕು’ ಎಂದು ನಿರ್ದೇಶಿಸಿತ್ತು.

‘ದಿಶಾ ಅವರ ಕಣ್ಣಿನ ಪರೀಕ್ಷೆ ನಡೆಸಿದ್ದ ಬಿಎಂಸಿಆರ್‌ಐ ವೈದ್ಯಕೀಯ ಮಂಡಳಿ, ಆಕೆಗೆ ದೃಷ್ಟಿದೋಷವಿಲ್ಲ’ ಎಂದು ಪುನಃ ಉದ್ಗರಿಸಿತ್ತು. ಆದರೆ, ಈ ವರದಿಯನ್ನು ಆಕ್ಷೇಪಿಸಿದ್ದ ದಿಶಾ, ‘ಬಿಎಂಸಿಆರ್‌ಐ ವರದಿ ದುರುದ್ದೇಶಪೂರಿತ ಭಾವನೆಯಿಂದ ಕೂಡಿದೆ’ ಎಂದು ಎರಡನೇ ಬಾರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ಪರಿಗಣಿಸಿದ್ದ ಹೈಕೋರ್ಟ್‌, ‘ದಿಶಾಳ ನೇತ್ರ ಪರೀಕ್ಷೆ ನಡೆಸಿ ವರದಿ ಸಲ್ಲಿಸಿ’ ಎಂದು ಬೆಳಗಾವಿ ಜಿಲ್ಲಾಸ್ಪತ್ರೆಯ ನೇತ್ರಶಾಸ್ತ್ರದ ಸರ್ಜನ್‌ ಅವರಿಗೆ 2024ರ ಜುಲೈ 22ರಂದು ನಿರ್ದೇಶಿಸಿತ್ತು. 

ಅರ್ಜಿಯ ಅಂತಿಮ ವಿಚಾರಣೆ ವೇಳೆ ನ್ಯಾಯಪೀಠವು, ‘ಬಿಎಂಸಿಆರ್‌ಐ ನೇತ್ರಶಾಸ್ತ್ರ ವಿಭಾಗದ ತಜ್ಞರಾದ ಡಾ.ವೈ.ಡಿ.ಶಿಲ್ಪಾ, ಡಾ.ಸೌಮ್ಯಾ ಶರತ್‌ ಮತ್ತು ಡಾ.ಎಸ್‌.ಎಂ.ಸಂಜನಾ ಅವರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯ ವರದಿಯು ಆಕೆಗೆ ದೃಷ್ಟಿ ದೋಷವಿಲ್ಲ ಎಂದು ಹೇಳಿದೆ. ಹಾಗಾಗಿ, ಈ ವರದಿ ಕಾನೂನುಬದ್ಧವಾಗಿದೆ’ ಎಂಬ ಕಾರಣ ನೀಡಿ ದಿಶಾ ಅವರ ಅರ್ಜಿ ವಜಾಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT